Advertisement

ಶಿಕ್ಷಣದಿಂದ ಬಾಲಕಾರ್ಮಿಕತೆ ನಿರ್ಮೂಲನೆ ಸಾಧ್ಯ : ನ್ಯಾಯಾಧೀಶೆ ಬಿ.ಎಸ್‌. ರೇಖಾ

03:59 PM Jun 13, 2022 | Team Udayavani |

ಕೊಪ್ಪಳ: ಕಡ್ಡಾಯ ಶಿಕ್ಷಣ ಪ್ರತಿಯೊಬ್ಬ ಮಗುವಿನ ಕಾನೂನುಬದ್ಧವಾದ ಹಕ್ಕಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವುದರಿಂದ ಮಾತ್ರ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಸಾಧ್ಯವಾಗಲಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್‌. ರೇಖಾ ಅವರು ಹೇಳಿದರು.

Advertisement

ಜಿಲ್ಲಾಡಳಿತ ಸೇರಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಗರದ ಸಾಹಿತ್ಯ ಭವನದಲ್ಲಿ ರವಿವಾರ ನಡೆದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಾಲಕಾರ್ಮಿಕ ಪದ್ಧತಿ ಒಂದು ಸಾಮಾಜಿಕ ಪೀಡುಗಾಗಿದ್ದು, ಮಕ್ಕಳ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಇದರ ನಿರ್ಮೂಲನೆಗೆ ಬಾಲಕಾರ್ಮಿಕ ಮತ್ತು ಕಿಶೋರಾವಸ್ಥೆಯ ನಿಷೇಧ ಮತ್ತು ನಿಯಂತ್ರಣ ಕಾಯ್ದೆ (1986)-2016 ಜಾರಿಯಲ್ಲಿದೆ. 14 ವರ್ಷದೊಳಗಿನ ಮಕ್ಕಳನ್ನು ಯಾವುದೇ ಕ್ಷೇತ್ರದಲ್ಲಿ ಹಾಗೂ 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿಕೊಳ್ಳುವವರಿಗೆ ಕಾನೂನಿನಲ್ಲಿ ಕಠಿಣ ಶಿಕ್ಷೆಯಿದೆ. ಅಂತಹ ಕ್ಷೇತ್ರಗಳಲ್ಲಿ ಮಕ್ಕಳನ್ನು ದುಡಿಸಿಕೊಳ್ಳುತ್ತಿರುವುದು ಕಂಡುಬಂದರೆ ಸಹಾಯವಾಣಿ ಸಂಖ್ಯೆಗಳ ಮೂಲಕ ದೂರು ನೀಡಿ, ಮಕ್ಕಳ ರಕ್ಷಣೆ ಮಾಡಬೇಕು. ಈ ಬಗ್ಗೆ ವಿಶೇಷವಾಗಿ ಮಕ್ಕಳು ತಮ್ಮ ಸಹಪಾಠಿಗಳನ್ನು ರಕ್ಷಿಸಲು ನಿರ್ಭಯವಾಗಿ ದೂರು ನೀಡಲು ಮುಂದೆ ಬರಬೇಕೆಂದು ಮಕ್ಕಳಿಗೆ ಕರೆ ನೀಡಿದರು.

ಬಾಲಕಾರ್ಮಿಕ ವ್ಯವಸ್ಥೆಗೆ ಒಳಪಟ್ಟ ಮಕ್ಕಳು, ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಿರುವುದಿಲ್ಲ. ಈ ಪದ್ಧತಿಗೆ ಅನೇಕ ಸಮಸ್ಯೆಗಳಿದ್ದು, ಮುಖ್ಯವಾಗಿ ಶಿಕ್ಷಣದ ಕೊರತೆ ಕಾರಣ. ಕಡ್ಡಾಯ ಶಿಕ್ಷಣ ಪ್ರತಿ ಮಕ್ಕಳ ಮೊದಲ ಹಕ್ಕಾಗಿದೆ. ಸರ್ಕಾರಗಳು ಸಹ ಮಕ್ಕಳ ಶಿಕ್ಷಣಕ್ಕಾಗಿ ಉಚಿತ ಶಿಕ್ಷಣ, ಬಿಸಿಯೂಟ, ಪೌಷ್ಟಿಕ ಆಹಾರ, ವಿದ್ಯಾರ್ಥಿ ವೇತನ ಹೀಗೆ ಅನೇಕ ಕಾರ್ಯಕ್ರಮಗಳನ್ನು ನೀಡುತ್ತಿವೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಪ್ರತಿಯೊಬ್ಬ ಪಾಲಕರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಕಾನೂನು ಅರಿವು ಅತ್ಯವಶ್ಯಕವಾಗಿದ್ದು, ಮಕ್ಕಳ ಹಕ್ಕುಗಳ ಬಗ್ಗೆ ಮಕ್ಕಳಲ್ಲಿ ಹಾಗೂ ಅವರ ಪಾಲಕರಿಗೆ ಅರಿವು ಮೂಡಿಸಿ, ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕರೆತರಲು ಎಲ್ಲರೂ ಕೈಜೋಡಿಸಬೇಕು ಎಂದರು.

ಎಸ್ಪಿ ಅರುಣಾಂಗ್ಷುಗಿರಿ ಮಾತನಾಡಿ, 14 ವರ್ಷದೊಳಗಿನ ಮಕ್ಕಳನ್ನು ಯಾವುದೇ ಕ್ಷೇತ್ರದಲ್ಲಿ ಹಾಗೂ 15ರಿಂದ 18ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕ್ಷೇತ್ರಗಳಲ್ಲಿ ದುಡಿಸಿಕೊಂಡವರ ವಿರುದ್ಧ 2 ವರ್ಷ ಜೈಲು ಹಾಗೂ ರೂ. 50 ಸಾವಿರ ದಂಡವಿದೆ. ಇಂತಹ ಪ್ರದೇಶಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಂಡಿದ್ದರೆ ಪೊಲೀಸ್‌ ಸಹಾಯವಾಣಿ 112ಗೆ ಕರೆ ಮಾಡಿದರೆ, ಪೊಲೀಸ್‌ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ. ಈ ಕುರಿತಂತೆ ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ 3 ಪ್ರಕರಣಗಳನ್ನು ದಾಖಲಿಸಿದ್ದು, ಸದ್ಯ ಪ್ರಕರಣಗಳು ನ್ಯಾಯಾಲಯದ ವಿಚಾರಣಾ ಹಂತದಲ್ಲಿವೆ ಎಂದರು.

Advertisement

ಎಡಿಸಿ ಎಂ.ಪಿ. ಮಾರುತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿರಿಯ ಸಿವಿಲ್‌ ನ್ಯಾಯಾ ಧೀಶರಾದ ದೇವೇಂದ್ರ ಪಂಡಿತ್‌ ಅವರು ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತಂತೆ ಎಲ್ಲರಿಗೂ ಪ್ರತಿಜ್ಞಾವಿಧಿ ಬೋಧಿಸಿದರು.

ಈ ವೇಳೆ ನ್ಯಾ| ಹರೀಶಕುಮಾರ್‌, ಅಧಿಕಾರಿಗಳಾದ ವೀಣಾ ಮಾಸ್ತಿ, ಎಂ.ಎ. ರಡ್ಡೇರ್‌, ವಿಠ್ಠಲ್‌ ಚೌಗಲೆ, ಜಿಲ್ಲಾ ಸರ್ಕಾರಿ ವಕೀಲರಾದ ರಾಜಶೇಖರ ವಿ. ಗಣವಾರಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ, ಕೊಪ್ಪಳ ಯುನಿಸೆಫ್‌ ಸಂಯೋಜಕ ಹರೀಶ ಜೋಗಿ, ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರ ಸೇರಿದಂತೆ ಕಾರ್ಮಿಕ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

ಸನ್ಮಾನ: ಜಿಲ್ಲೆಯಲ್ಲಿ ಬಾಲಕಾರ್ಮಿಕರಾಗಿ ಮುಕ್ತಿಹೊಂದಿ ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ಪ್ರಸ್ತುತ 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ನಬೀಸಾಬ್‌ ಕಾಸಿಂಸಾಬ್‌ ಎಂ. ಮತ್ತು ಬಿಎಸ್‌ಸಿ ನರ್ಸಿಂಗ್‌ ಪದವಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಇನ್ನೋರ್ವ ವಿದ್ಯಾರ್ಥಿ ಮಲ್ಲಿಕಾರ್ಜುನ ಹಡಪದ ಅವರನ್ನು ಸನ್ಮಾನಿಸಲಾಯಿತು. ವಿಶ್ವ ಬಾಲಕಾರ್ಮಿಕ ಪದ್ಧತಿ ದಿನಾಚರಣೆ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು.

Advertisement

Udayavani is now on Telegram. Click here to join our channel and stay updated with the latest news.

Next