Advertisement

ಮಾನವ ಕುಲಕ್ಕೆ ಸಮಾನತೆ ಸಂದೇಶ: ಈದುಲ್‌ ಫಿತ್ರ್

09:12 AM Jun 06, 2019 | sudhir |

ಒಂದು ತಿಂಗಳಕಾಲ ಶರೀರ ಮತ್ತು ಮನಸ್ಸನ್ನು ನಿಯಂತ್ರಿಸಿ ಕಠಿನ ವ್ರತಾನುಷ್ಠಾನ ಕೈಗೊಂಡ ಮುಸ್ಲಿಂ ಬಾಂಧವರ ಪವಿತ್ರ ರಮ್ಜಾನ್‌ ಪೂರ್ಣಗೊಂಡಿದೆ. ಹಸಿವು, ತ್ಯಾಗ, ಧ್ಯಾನ, ಪಾರಾಯಣದೊಂದಿಗೆ ರಂಝಾನ್‌ ತಿಂಗಳನ್ನು ಐಶ್ವರ್ಯಗೊಳಿಸಿದ ಮುಸಲ್ಮಾನನಿಗೆ ಶವ್ವಾಲ್‌ ತಿಂಗಳ ಪ್ರಥಮ ದಿನವಾದ ಬುಧವಾರ ಈದುಲ್‌ ಫಿತ್ರ ಸಂಭ್ರಮ. ಸ್ನೇಹ, ಶಾಂತಿ, ಸಮಾಧಾನ, ಸಂತೋಷ, ನಿನಾದದೊಂದಿಗೆ ಮಾನವ ಸೌಹಾರ್ದ ಹಾಗೂ ವಿಶ್ವ ಭಾತೃತ್ವದ ಮಹೋನ್ನತ ಸಂದೇಶಗಳನ್ನು ಸಾರುತ್ತಾ ಈದುಲ್‌ ಫಿತ್ರ ಅಖಂಡ ಜಗತ್ತಿನ ಕೋಟ್ಯಂತರ ಜನರ ಒಳಿತಿಗಾಗಿ ಹಾಗೂ ಬಡವರ , ಹಸಿದವರ ಪಾಲಿಗೆ ಅಮೃತಘಳಿಗೆಯಾಗಿ ಕಂಗೊಳಿಸುತ್ತಿದೆ. ರಮ್ಜಾನ್‌ತಿಂಗಳಿನಲ್ಲಿ ನಿರ್ದಿಷ್ಟ ಹೊತ್ತು ಒಂದು ತೊಟ್ಟು ನೀರೂ ಕುಡಿಯದೇ ಬಡವ-ಶ್ರೀಮಂತರೆಂಬ ಭೇದಭಾವವಿಲ್ಲದೇ ಹಸಿವಿನ ಕಠಿನತೆಯನ್ನು ಅರಿತ ವಿಶ್ವ ಮುಸಲ್ಮಾನರ ಒಂದು ತಿಂಗಳ ಕಠಿನ ವ್ರತಾಚರಣೆಯನ್ನು ಪರಿಪೂರ್ಣಗೊಳಿಸುವುದು ಈದುಲ್‌ ಫಿತ್ರ ಹಬ್ಬವಾಗಿದೆ.

Advertisement

ಜಾಗತಿಕ ಮುಸಲ್ಮಾನರು ಸಂಭ್ರಮದಿಂದ ಹಾಗೂ ಅತ್ಯಂತ ಪಾವಿತ್ರÂದಿಂದ ಆಚರಿಸುವ ಈದುಲ್‌ ಫಿತ್ರ ದಾನದ ಹಬ್ಬ.ವಾಗಿದೆ. ವಾಸ್ತವದಲ್ಲಿ ಸಂಪತ್ತಿನ ವಿಕೇಂದ್ರೀಕರಣವನ್ನು ಇಸ್ಲಾಂ ವಿರೋಧಿಸುತ್ತದೆ. ಆದುದರಿಂದಲೇ ರಮ್ಜಾನ್‌ ಹಾಗೂ ಈದುಲ್‌ ಫಿತ್ರಗಳಲ್ಲಿ ದಾನವನ್ನು ಕಡ್ಡಾಯಗೊಳಿಸಿರುವುದು.

ಒಂದು ತಿಂಗಳ ಭಕ್ತಿಸಾಂದ್ರವಾದ ಕಠಿನ ಉಪವಾಸವನ್ನು ಅನುಷ್ಠಾನಗೊಳಿಸಿ ಯಶಸ್ವಿ ವ್ರತಾ ಚರಣೆಯ ಮುಕ್ತಾಯದ ಪ್ರಯುಕ್ತ ಹಮ್ಮಿಕೊಳ್ಳ ಲಾಗಿರುವ ಈ ಹಬ್ಬ ಕೇವಲ ಸಂಭ್ರಮಾಚರಣೆಗಳಿಗೆ ಸೀಮಿತವಾಗದೇ “ಕಡ್ಡಾಯ ದಾನ ‘ಕ್ಕೆ ಮಹತ್ವವನ್ನು ಕಲ್ಪಿಸಿದೆ. ಅರಬ್‌ ಕ್ಯಾಲೆಂಡರಿನ 10ನೇ ತಿಂಗಳ ಶವ್ವಾಲ್‌ ಒಂದರಂದು ಈ ಹಬ್ಬವನ್ನು ಆಚರಿಸಲಾಗುತ್ತಿದ್ದು, ಚಂದ್ರ ದರ್ಶನದ ಆಧಾರದಲ್ಲಿ ಈ ಹಬ್ಬಕ್ಕೆ ಮುಹೂರ್ತ ದೊರೆಯುತ್ತದೆ.

ಕಡ್ಡಾಯ ದಾನ
ಈದುಲ್‌ ಫಿತ್ರಹಬ್ಬ ದಾನದ ಸಂಕೇತವಾಗಿದೆ. ಈ ಹಬ್ಬದ ದಿನ ದಾನವನ್ನು ಕಡ್ಡಾಯಗೊಳಿಸಲಾಗಿದೆ. ಈ ದಾನ ಮನುಷ್ಯ ಶರೀರವನ್ನು ಪಾಪಗಳಿಂದ ವಿಮೋಚನೆಗೊಳಿಸಲಿಕ್ಕಿರುವ ದಾನ. ಹಬ್ಟಾ ಚರಣೆಯ ದಿನದಂದು ಈ ದಾನವನ್ನು ಕಡ್ಡಾಯಗೊಳಿಸಿದ್ದರ ಹಿಂದೆ ಅತ್ಯದ್ಭುತವಾದ ಪರಿಕಲ್ಪನೆಯಿದೆ. ಪವಿತ್ರ ಹದೀಸ್‌ ಗ್ರಂಥದಲ್ಲಿ ಈ ಪರಿಕಲ್ಪನೆ ಉಲ್ಲೇಖಗೊಂಡಿರುವುದು ಹೀಗೆ.

“ರಮ್ಜಾನ್‌ನಲ್ಲಿ ಓರ್ವ ಮುಸಲ್ಮಾನನು ಅನುಷ್ಠಾನಿಸಿದ ವ್ರತ ಆಕಾಶ ಭೂಮಿ ನಡುವೆ ಬಂಧಿಸಲ್ಪಟ್ಟಿರುತ್ತದೆ. ಫಿತ್ರ ಝಕಾತ್‌ಗಳಿಂದ ಅದನ್ನು ಮೇಲೆತ್ತಲಾಗುವುದು”. ಅರ್ಥಾತ್‌ ತಾನು ಒಂದು ತಿಂಗಳ ಉಪವಾಸ ವ್ರತ, ದೇಹ ದಂಡನೆ, ಆರಾಧನೆಗಳಿಂದ ಸಂಪಾದಿಸಿದ ಶುದ್ಧಿ ಪರಿಪೂರ್ಣಗೊಳ್ಳಬೇಕಾದರೆ ಈ ದಾನ ನೀಡಲೇಬೇಕಾದುದು ಅತ್ಯಗತ್ಯ.

Advertisement

ಹಬ್ಟಾಚರಣೆಯ ದಿನದಂದು ಯಾರೂ ಉಪವಾಸ ಬೀಳಕೂಡದು ಎಂಬ ಅತ್ಯದ್ಭುತವಾದ ಪರಿಕಲ್ಪನೆಯನ್ನು ಹೊಂದಿರುವುದು ಈ ದಾನದ ಹಿಂದಿನ ಒಳಗುಟ್ಟು. ಹಬ್ಬದ ದಿನದಂದು ಸಮಾಜದ ಯಾವುದೇ ಓರ್ವ ವ್ಯಕ್ತಿ ಆಹಾರವಿಲ್ಲದೇ ಉಪವಾಸವಿರುವುದು ಸಮಾಜಕ್ಕೆ ಬಾಧಿಸುವ ಶಾಪವಾಗಿದೆಯೆಂದು ಪ್ರವಾದಿ ಮುಹಮ್ಮದ್‌ (ಸ.ಅ.) ಹೇಳುತ್ತಾರೆ. “ತಾನು ಸಂಭ್ರಮ ಪಡೆಯುವಾಗ ತನ್ನ ನೆರೆಕರೆಯವರು ಬಂಧುಗಳು ಹಸಿವಿರದಂತೆ ಜಾಗ್ರತೆ ವಹಿಸು ” ಎಂಬುದಾಗಿದೆ ಪ್ರವಾದಿ ವಚನ. ವಾಸ್ತವವಾಗಿ ದಾನ ನೀಡುವುದೆಂದರೆ ಒಬ್ಬ ವ್ಯಕ್ತಿಯ ಔದಾರ್ಯಗುಣ. ಅಂದರೆ ಆತನಿಗೆ ಇಚ್ಛೆಯಿದ್ದರೆ ದಾನ ನೀಡಬಹುದೆಂದಲ್ಲವೇ? ಆದರೆ ಇಸ್ಲಾಂ ಧರ್ಮದ ತೀರ್ಪು ವಿಭಿನ್ನ. ಇಲ್ಲಿ ಓರ್ವ ವ್ಯಕ್ತಿ ತಿಂಗಳ ಕಾಲ ನಡೆಸಿದ ಕಠಿನ ವ್ರತ ಹಾಗೂ ಈದ್‌ ಹಬ್ಬ ಪರಿಪೂರ್ಣವಾಗಬೇಕಾದರೆ ಕಡ್ಡಾಯ ಝಕಾತ್‌(ದಾನ) ಕರ್ಮವನ್ನು ಪರಿಪಾಲಿಸಲೇಬೇಕು. ಈದ್‌ ಮುಂಜಾನೆ ಮಸೀದಿಗೆ ತೆರಳಿ ವಿಶೇಷ ಈದ್‌ ನಮಾಜು ನಿರ್ವಹಿಸುವ ಮೊದಲು ತನ್ನ ಪಾಲಿನ ಝಕಾತನ್ನು ಬಡಬಗ್ಗರಿಗೆ ವಿತರಿಸಿಯೇ ಆತ ಮಸೀದಿಗೆ ತೆರಳಬೇಕೆನ್ನುವ ಆದೇಶ ಇಸ್ಲಾಂ ಧರ್ಮದಲ್ಲಿದೆ.

ಈ ಧರ್ಮಾದೇಶವನ್ನು ಪ್ರತಿಯೋರ್ವ ಮುಸಲ್ಮಾನನು ಪರಿಪಾಲಿಸುತ್ತಾನೆ. ಅದೂ ಮಾತ್ರವಲ್ಲದೇ ಏನನ್ನು ಧರ್ಮವಾಗಿ ನೀಡಬೇಕೆಂಬುದನ್ನು ಕೂಡಾ ಇಲ್ಲಿ ಉಲ್ಲೇಖೀಸಲಾಗಿದೆ. ಈದುಲ್‌ ಫಿತ್ರ ದಿನದಂದು ಧಾನ್ಯವನ್ನು ದಾನ ನೀಡುವಂತೆ ಆಜ್ಞಾಪಿಸಲಾಗಿದೆ. ಪ್ರತಿಯೋರ್ವನೂ ತನ್ನ ಪಾಲಿನ ಒಂದು ಸ್ವಾಹ್‌ ( 2 ಕಿಲೋ 600 ಗ್ರಾಂ) ಧಾನ್ಯವನ್ನು ಬಡಬಗ್ಗರಿಗೆ ದಾನ ನೀಡಬೇಕು. ಅದು ಆಯಾ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ಧಾನ್ಯವಾಗಿರಬೇಕು. ನಮ್ಮ ಪ್ರದೇಶದಲ್ಲಿ ಅಕ್ಕಿಯನ್ನು ಸಾಧಾರಣವಾಗಿ ಇದಕ್ಕೆ ಬಳಸಿಕೊಳ್ಳಲಾಗುತ್ತದೆ.

ಇದನ್ನು ಮಸೀದಿಗೆ ತೆರಳುವ ಮೊದಲು ವಿತರಿಸಿಯಾಗಬೇಕೆಂಬ ನಿಯಮವಿದೆ. ಇಲ್ಲಿ ಇನ್ನೊಂದು ವಿಶೇಷವೇನೆಂದರೆ ಕೋಟ್ಯಧೀಶನೂ ಸಾಮಾನ್ಯನೂ ಒಂದೇ ಪ್ರಮಾಣದ ದಾನವನ್ನು ಕಡ್ಡಾಯವಾಗಿ ನೀಡ ಬೇಕಾಗಿರುವುದು. ಇದು ಶರೀರಕ್ಕಿರುವ ದಾನ ವಾಗಿದೆ.ಮನುಷ್ಯ ಶರೀರಗಳನ್ನು ಪಾಪಗಳಿಂದ ಮುಕ್ತಗೊಳಿಸಲಿಕ್ಕಿರುವ ದಾನ. ದಾರಿದ್ರéವನ್ನು ಅನುಭವಿ ಸುವವರು ಮಾತ್ರ ಇದನ್ನು ಸ್ವೀಕರಿಸಲಿಕ್ಕೆ ಅರ್ಹರು. ತ್ಯಾಗಶುದ್ಧಿಯ ವ್ರತವನ್ನು ಆಚರಿಸಿ ಕಠಿನ ಹಸಿವನ್ನು ಅನುಭವಿಸಿದ ಬೇಗೆಯಲ್ಲಿ ಹಬ್ಬದಂದು ನಾವು ಎಲ್ಲವನ್ನೂ ಮರೆತು ಬಿಡುತ್ತವೆ. ಆಚಾರಗಳು, ಕಟ್ಟುನಿಟ್ಟುಗಳು ಕೇವಲ ರಮ್ಜಾನ್‌ ತಿಂಗಳಿಗೆ ಮಾತ್ರ ಸೀಮಿತವಲ್ಲ ಎಂಬುದನ್ನು ನೆನಪಿಸಲು ಈದ್‌ ಹಬ್ಬದಂದು ಫಿತ್ರ ಝಕಾತ್‌ ಜಾರಿಗೊಳಿಸಿರುವುದಾಗಿದೆ.

ನಾವು ಸಂತಸದಲ್ಲಿ ತೇಲಾಡುವಾಗ ನಮ್ಮ ನೆರೆಮನೆಯವರು, ನಮ್ಮ ಕುಟುಂಬಸ್ಥರು, ಹಸಿವಿ ನಿಂದಿರಬಾರದು ಎಂಬುದನ್ನು ಪ್ರವಾದಿ ಅವರು ಕಲಿಸಿಕೊಡುತ್ತಾರೆ.

ಈದ್‌ ಸಂಭ್ರಮಾಚರಣೆ
“ಅಲ್ಲಾಹು ಅಕºರ್‌, ಅಲ್ಲಾಹು ಅಕºರ್‌…’ ಸಂಗೀತಸಾಂದ್ರವಾದ ಧ್ವನಿಗಳು ಮಸೀದಿಯ ಧ್ವನಿವರ್ಧಕದಲ್ಲಿ ಮೊಳಗುತ್ತಿದ್ದಂತೆ ಕೋಟ್ಯಂತರ ಮುಸಲ್ಮಾನರ ಹೃದಯದಲ್ಲಿ ನವಚೈತನ್ಯ ತುಂಬುತ್ತದೆ. ಬಾನಂಗಳದಲ್ಲಿ ಶವ್ವಾಲ್‌ ಚಂದ್ರ ದರ್ಶನವಾಗಿದೆಯೆಂಬುದರ ಸಂಕೇತವಿದು. ಇದರೊಂದಿಗೆ ಇಡೀ ಮುಸ್ಲಿಂ ಲೋಕ ಹಬ್ಬದ ಸಂಭ್ರಮಕ್ಕೆ ಸಡಗರದ ಸಿದ್ಧತೆ ನಡೆಸುತ್ತದೆ. ರಾತ್ರಿಯೇ ವಿವಿಧ ಸಿಹಿತಿಂಡಿಗಳನ್ನು ಮಾಡಲು ಮಹಿಳೆಯರು ಸಿದ್ಧತೆಯಲ್ಲಿ ತೊಡಗುತ್ತಾರೆ.

ಸಸ್ಯಾಹಾರಕ್ಕಿಂತಲೂ ಮಾಂಸಾಹಾರಕ್ಕೆ ಹೆಚ್ಚಿನ ಪ್ರಾಧಾನ್ಯವಿದೆ. ಬಿರಿಯಾಣಿ, ಸ್ವೀಟ್ಸ್‌, ರುಚಿಕರ ಸೇವಿಗೆ, ಬಾಳೆಹಣ್ಣಿ¡ನ ಪಕೋಡಾಗಳು, ಐಸ್‌ಕ್ರೀಂ ಸಲಾಡ್‌ಗಳು,ವೈವಿಧ್ಯಮಯ ತಿನಿಸುಗಳು ಹಬ್ಬಕ್ಕೆ ರುಚಿಯೆನಿಸುತ್ತವೆ. ಮಕ್ಕಳಿಗೆ ಮೆಹಂದಿ ಹಚ್ಚುವ ತರಾತುರಿ. ಮುಂಜಾನೆ ಈದ್‌ ಹಬ್ಬಕೆ ಪುರುಷರು ಮಸೀದಿಗೆ ತೆರಳುತ್ತಾರೆ.

ಅಚ್ಚ ಹೊಸ ವಸ್ತ್ರ ಧರಿಸಿ, ಸುಗಂಧ ದ್ರವ್ಯಗಳನ್ನು ಸಿಂಪಡಿಸಿ,ಕೌಟುಂಬಿಕ ಸಂದರ್ಶನ, ಅತಿಥಿ ಸತ್ಕಾರ,ಪರಸ್ಪರ ಆಲಿಂಗನ, ಹಸ್ತಲಾಘವ, ರೋಗಿಗಳನ್ನು ಸಂದರ್ಶಿಸುವುದು ಇವೆಲ್ಲವೂ ಹಬ್ಬದ ಭಾಗ. ಪ್ರವಾದಿ (ಸ.ಅ.)ಯವರು ಈದ್‌ನ ದಿನಗಳಲ್ಲಿ ಇದ್ದುದರಲ್ಲಿ ಉತ್ತಮ ಬಟ್ಟೆ ಧರಿಸುತ್ತಿದ್ದರು.

ಈ ನಿಟ್ಟಿನಲ್ಲಿ ಇಂದಿಗೂ ಆ ರೂಢಿಯನ್ನು ಮುಸಲ್ಮಾನರು ಅನುಸರಿಸಿಕೊಂಡು ಬರುತ್ತಿದ್ದಾರೆ. ಈದ್‌ ದಿನದಂದು ವೈಷಮ್ಯಗಳನ್ನು ಮರೆತು ಪರಸ್ಪರ ಜತೆಗೂಡುವಂತೆ ಇಸ್ಲಾಂ ಆದೇಶಿಸಿದೆ. ಇನ್ನೊಂದು ಗಮನಿಸಬೇಕಾದ ಅಂಶವೇನೆಂದರೆ ಈದ್‌ ದಿನದಂದು ಉಪವಾಸವನ್ನು ಆಚರಿಸುವುದು ಮಾತ್ರ ನಿಷಿದ್ಧ.

– ಹರ್ಷಾದ್‌ ವರ್ಕಾಡಿ 

Advertisement

Udayavani is now on Telegram. Click here to join our channel and stay updated with the latest news.

Next