ಬೀದರ: ಬಸವ ತತ್ವ ಪಾಲನೆಯಿಂದ ಮಾತ್ರ ಸುಂದರ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಅಭಿಪ್ರಾಯಪಟ್ಟರು.
ತಾಲೂಕಿನ ಮಾಳೆಗಾಂವ್ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಸವ ದಳದ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ಬಸವ ತತ್ವವನ್ನು ಅರಿಯಬೇಕು. ಬಸವ ತತ್ವದ ಬಗ್ಗೆ ಅಧ್ಯಯನ ಮಾಡಬೇಕು. ಇಂದು ಜಗತ್ತು ಜಾತಿಯತೆ, ಕೋಮು ಗಲಭೆ, ಮೂಢನಂಬಿಕೆ, ಕಂದಾಚಾರ, ಭ್ರಷ್ಟಾಚಾರ ಮೊದಲಾದ ಸಮಸ್ಯೆಗಳಿಗೆ ಸಿಲುಕಿ ನರಳುತ್ತಿದೆ. ಬಸವ ತತ್ವವೊಂದೇ ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಇರುವ ಮಾರ್ಗವಾಗಿದೆ ಎಂದು ತಿಳಿಸಿದರು.
ಜಗದ್ಗುರು ಲಿಂಗಾನಂದ ಸ್ವಾಮೀಜಿ ಹಾಗೂ ಜಗದ್ಗುರು ಮಾತೆ ಮಹಾದೇವಿ ಅವರು ಹುಟ್ಟುಹಾಕಿದ ಬಸವ ದಳ ಅತಿದೊಡ್ಡ ಬಸವ ಪರ ಸಂಘಟನೆಯಾಗಿದೆ. ನಾಲ್ಕು ದಶಕಗಳಿಂದ ನಾಡಿನಾದ್ಯಂತ ಬಸವ ತತ್ವ ಪ್ರಚಾರ, ಪ್ರಸಾರ ಕಾರ್ಯದಲ್ಲಿ ನಿರತವಾಗಿದೆ. ಬಸವಾದಿ ಶರಣರ ತತ್ವಗಳನ್ನು ಜನಮಾನಸದಲ್ಲಿ ಬಿತ್ತಿ ಬೆಳೆಸುವುದು ಹಾಗೂ ಬಸವಣ್ಣನವರು ನಿರ್ಮಿಸಿ ತೋರಿಸಿದ ಕಲ್ಯಾಣ ರಾಜ್ಯವನ್ನು ಮತ್ತೆ ಕಟ್ಟುವುದು ಇದರ ಧ್ಯೇಯವಾಗಿದೆ ಎಂದು ಹೇಳಿದರು.
ಬಸವ ದಳದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಗಂದಗೆ ಮಾತನಾಡಿದರು. ಜಿಲ್ಲಾ ಲಿಂಗಾಯತ ಸಮಾಜದ ಅಧ್ಯಕ್ಷ ಕುಶಾಲರಾವ್ ಪಾಟೀಲ ಗಾದಗಿ ಷಟ್ ಸ್ಥಲ ಧ್ವಜಾರೋಹಣ ಮಾಡಿದರು. ಬಸವ ದಳದ ಜಿಲ್ಲಾಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ ಅಧ್ಯಕ್ಷತೆ ವಹಿಸಿದ್ದರು. ಲಿಂಗಾಯತ ಧರ್ಮ ಮಹಾಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿ ನಾಗಶೆಟ್ಟಿ ಶೆಟಕಾರ್, ಪ್ರಮುಖರಾದ ಸಂಜುಕುಮಾರ ಪಾಟೀಲ, ಅಶೋಕ ಗಂದಗೆ, ಶಿವಕುಮಾರ ಗಂದಗೆ ಇದ್ದರು. ಅನಿಲಕುಮಾರ ಹಾಗೂ ಪಲ್ಲವಿ ಗಂದಗೆ ದಂಪತಿ ಗುರುಬಸವ ಪೂಜೆ ನೆರವೇರಿಸಿದರು. ಸಿದ್ದು ಶೆಟಕಾರ್ ನಿರೂಪಿಸಿದರು. ರವಿ ಪಾಪಡೆ ಸ್ವಾಗತಿಸಿದರು. ಉತ್ತಮ ಗಂದಗೆ ವಂದಿಸಿದರು.