Advertisement

ಮಹಿಳೆಯರಿಗೆ ಸಮಾನ ಅವಕಾಶ ಅತ್ಯಗತ್ಯ

04:50 PM Mar 23, 2022 | Team Udayavani |

ಹಾವೇರಿ: 12ನೇ ಶತಮಾನದ ಬಸವಾದಿ ಶರಣರ ಚಳವಳಿ ಸಂದರ್ಭದಲ್ಲಿ ಸ್ತ್ರೀಯರಿಗೆ ಪ್ರಾಪಂಚಿಕ ಮತ್ತು ಪಾರಮಾರ್ಥ ಎರಡು ನೆಲೆಗಳಲ್ಲಿಯೂ ಬದುಕಲು ಸಮಾನತೆ ಅವಕಾಶ ಮಾಡಿಕೊಟ್ಟು, ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ನಾಂದಿ ಹಾಡಲಾಯಿತು ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.

Advertisement

ನಗರದ ಬಸವಕೇಂದ್ರ ಹೊಸಮಠದಲ್ಲಿ ಅಕ್ಕನ ಬಳಗ ಹೊಸಮಠ, ಅಕ್ಕನಬಳಗ ಹೊಂಡದಮಠ ಹಾಗೂ ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಮಹಿಳಾ ಘಟಕದ ಆಶ್ರಯದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕಿಯರಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಭಕ್ತಿ ಚಳವಳಿಯ ಕಾಲದಿಂದಲೂ ಮಹಿಳೆ ಧಾರ್ಮಿಕ ಸಮಾನತೆ ಕೇಳಲು ಅಶಕ್ತಳಾಗಿದ್ದಳು. 12ನೇ ಶತಮಾನ ಭಾರತದ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕ ಬದುಕಿನ ಒಂದು ಅಪೂರ್ವ ಘಟ್ಟವಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಹೋದರತ್ವ, ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ನೀಡಿದ ಭಾರತ ದೇಶದಲ್ಲಿ ಮಹಿಳೆಯನ್ನು ತಾಯಿ ಎಂದು ಸಂಬೋಧಿಸಲಾಗುತ್ತಿದೆ. ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಮಾನ ಅವಕಾಶಗಳನ್ನು ಪಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಲಲಿತಾ ಹೀರೆಮಠ, ಗಾಯತ್ರಿ ಕುರುವತ್ತಿ, ಕಸ್ತೂರಿ ಪಾಟೀಲ, ಹೇಮಾ ಸಜ್ಜನ, ಕವಿತಾ ಸ್ವಾಮಿ, ಕವಿತಾ ಜಾಲಿಹಾಳ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರಾದ ರೇಣುಕಾ ಹೂಗಾರ, ಪಿಎಸ್‌ಐ ಸುಲೋಚನಾ ಗರಗ, ರತ್ನವ್ವ ಉಪ್ಪಿನ, ಸುಮಂಗಲಾ ನಾರಪ್ಪನವರ, ರೇಣುಕಾ ಶಿರಗಂಬಿ, ರತ್ನ ಪಾಟೀಲ, ರಜನಿ ಕರಿಗಾರ, ಮಂಗಳಗೌರಿ ಹೀರೆಮಠ ಅವರನ್ನು ಸನ್ಮಾನಿಸಲಾಯಿತು.

Advertisement

ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಮಹಿಳಾ ಸಂಘ, ಸಂಸ್ಥೆಯವರು ಪಾಲ್ಗೊಂಡಿದ್ದರು. ಶಾರದಾ ವಾರಿ ತಂಡದವರು ಪ್ರಾರ್ಥಿಸಿದರು. ಕೃತಿ ಮಂಗಳೂರು ಭರತನಾಟ್ಯ ಪ್ರದರ್ಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next