ಮಡಿಕೇರಿ: ಭಾರತದ ಸಂವಿಧಾನ ಎಲ್ಲರಿಗೂ ಸಮಾನವಾದ ಹಕ್ಕುಗಳನ್ನು ನೀಡಿದೆ. ಅದನ್ನು ಸದುಪಯೋಗ ಪಡಿಸಿಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನೂ ಸೇವಾ ಪ್ರಾಧಿಕಾರದ ಅಧ್ಯಕ್ಷ ವೀರಪ್ಪ ವೀರಭದ್ರಪ್ಪ ಮಲ್ಲಾಪುರ ಅವರು ತಿಳಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಮತ್ತು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಗುರುವಾರ ನಡೆದ ಸಾಮಾಜಿಕ ನ್ಯಾಯ ದಿನಾಚರಣೆ ಮತ್ತು ಸಂವಿಧಾನ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನದ ಹಕ್ಕು ಪಡೆಯುವುದರ ಜೊತೆಗೆ ಕರ್ತವ್ಯಗಳನ್ನು ಪಾಲಿಸಬೇಕು. ವಿದ್ಯಾರ್ಥಿಗಳಿಗೆ ಕಾನೂನು ಮತ್ತು ಸಂವಿಧಾನದ ಅರಿವು ಅತ್ಯಗತ್ಯ. ವಿದ್ಯಾರ್ಥಿ ಜೀವನದಲ್ಲಿ ಗುರಿ ಸಾಧಿಸುವವರೆಗೂ ಸಹ ಏಕಾಗ್ರತೆ ಕಳೆದುಕೊಳ್ಳಬೇಡಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಸಾಮಾಜಿಕ ನ್ಯಾಯ ಮತ್ತು ಸಂವಿಧಾನ ವಿಚಾರವಾಗಿ ವಕೀಲರಾದ ಮನೋಜ್ ಬೋಪಯ್ಯ ಅವರು ಮಾತನಾಡಿ, ರಾಷ್ಟ್ರದ ಪ್ರತಿಯೊಬ್ಬ ಯುವಕ ಯುವತಿಯೂ ಸಹ ಸಂವಿಧಾನದ ಬಗ್ಗೆ ಅರಿವು ಹೊಂದಿರಬೇಕು ಎಂದರು.
ದೇಶದ ಪ್ರತಿಯೊಬ್ಬ ಪ್ರಜೆಯ ಜೀವನದ ಮೌಲ್ಯಮಾಪನ ಮಾಡಲು ಸಂವಿಧಾನ ಅರಿತುಕೊಳ್ಳುವುದು ಅತ್ಯಂತ ಅವಶ್ಯಕ ಎಂದರು. ಸಂವಿಧಾನ ಎಂದರೆ ಕುಟುಂಬದ ನಿಯಮವಿದ್ದಂತೆ ಅದನ್ನು ಪಾಲಿಸಲೇಬೇಕು. ಸಾಮಾಜಿಕ ಸಮಾನತೆ ನೀಡಲು ಸಂವಿಧಾನವು ಮೀಸಲಾತಿ ಜಾರಿಗೊಳಿಸಲಾಗಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳುವಂತಾಗಬೇಕು ಎಂದರು.
ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಸದಸ್ಯ ಕಾರ್ಯದರ್ಶಿ ನೂರುನ್ನೀಸಾ ,ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಜವರಪ್ಪ ಉಪಸ್ಥಿತರಿದ್ದರು. ಕವಿತಾ ಪ್ರಾರ್ಥಿಸಿದರು, ಕೀರ್ತನ ಸ್ವಾಗತಿಸಿದರು, ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.