ನವದೆಹಲಿ: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲುಶಿಕ್ಷೆ ಅನುಭವಿಸುತ್ತಿರುವ ಎಐಎಡಿಎಂಕೆ ನಾಯಕಿ ವಿಕೆ ಶಶಿಕಲಾಗೆ ಮತ್ತೊಂದು ಮುಖಭಂಗ ಎಂಬಂತೆ ಭಾರೀ ರಾಜಕೀಯ ಜಟಾಪಟಿಗೆ ಕಾರಣವಾಗಿದ್ದ ಎಐಎಡಿಎಂಕೆ ಪಕ್ಷದ ಎರಡೆಲೆ ಚಿಹ್ನೆ ಇದೀಗ ತಮಿಳುನಾಡು ಮುಖ್ಯಮಂತ್ರಿ ಇಕೆ ಪಳನಿಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಬಣಕ್ಕೆ ಕೇಂದ್ರ ಚುನಾವಣಾ ಆಯೋಗ ನೀಡುವ ಮೂಲಕ ಮಹತ್ವದ ತೀರ್ಪು ನೀಡಿದೆ ಎಂದು ಮಾಧ್ಯಮದ ವರದಿ ಹೇಳಿದೆ.
ಎಐಎಡಿಎಂಕೆ ಪಕ್ಷದ ಎರಡೆಲೆ ಚಿಹ್ನೆಯನ್ನು ಡಿಸಿಎಂ ಓ ಪನ್ನೀರ್ ಸೆಲ್ವಂ ಹಾಗೂ ಸಿಎಂ ಇ ಪಳನಿಸ್ವಾಮಿಗೆ ಬಣಕ್ಕೆ ಚುನಾವಣಾ ಆಯೋಗ ನೀಡಿದೆ ಎಂದು ವರದಿ ವಿವರಿಸಿದೆ. ತಮ್ಮಿಬ್ಬರ ಬಣವೇ ನಿಜವಾದ ಎಐಎಡಿಎಂಕೆ ಎಂದು ವಾದಿಸಿದ್ದವು.
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಸೋದರ ಸಂಬಂಧಿ ಟಿಟಿವಿ ದಿನಕರನ್ ಎರಡೆಲೆ ಚಿಹ್ನೆಗಾಗಿ ಚುನಾವಣಾ ಆಯೋಗದ ಮೊರೆ ಹೋಗಿದ್ದರು. ಆ ಮೂಲಕ ಎಐಎಡಿಎಂಕೆ ಪಕ್ಷದ ಮೇಲೆ ತಮ್ಮ ಹಿಡಿತ ಸಾಧಿಸಲು ಹರಸಾಹಸ ಪಟ್ಟಿದ್ದರು. ಏತನ್ಮಧ್ಯೆ ಚುನಾವಣಾ ಆಯೋಗ ಟಿಟಿವಿ ದಿನಕರನ್ ಸಲ್ಲಿಸಿದ್ದ ಮನವಿಯನ್ನು ಆಯೋಗ ತಿರಸ್ಕರಿಸಿದೆ ಎಂದು ವರದಿ ಹೇಳಿದೆ. ಆದರೆ ಈ ಬಗ್ಗೆ ಚುನಾವಣಾ ಆಯೋಗ ಅಧಿಕೃತ ಹೇಳಿಕೆ ನೀಡಲು ಬಾಕಿ ಇದೆ.
ಈ ಹಿಂದೆ ಜಯಾ ನಿಧನದ ಬಳಿಕ ಅವರ ಆರ್ ಕೆ ನಗರ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆ ಸಂದರ್ಭದಲ್ಲಿ ಶಶಿಕಲಾ ಬಣ ಹಾಗೂ ಪಳನಿಸ್ವಾಮಿ ಬಣ ನಡುವೆ ಜಿದ್ದಾಜಿದ್ದಿ ನಡೆದಿತ್ತು. ಈ ಹಿಂದೆಯೂ ಎಐಎಡಿಎಂಕೆ ಪಕ್ಷದ ಸ್ಥಾಪಕ ಎಂಜಿಆರ್ ನಿಧನದ ಹೊಂದಿದ ಸಂದರ್ಭದಲ್ಲಿ ಎಂಜಿ ಆರ್ ಪತ್ನಿ ಜಾನಕಿ ಮತ್ತು ಜಯಲಲಿತಾ ನಡುವೆ ನಡೆದ ಜಿದ್ದಾಜಿದ್ದಿಯಲ್ಲಿ ದಿವಂಗತ ಜಯಾ ಪಕ್ಷದ ಚಿಹ್ನೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು.