Advertisement

ಮಹಾಕಾವ್ಯಗಳು ಬಹುಸಂಸ್ಕೃತಿ ವಾಹಕ

12:12 PM Jul 09, 2018 | Team Udayavani |

ಬೆಂಗಳೂರು: ಬಹುಸಂಸ್ಕೃತಿಯ ವಾಹಕವಾಗಿರುವ ರಾಮಾಯಣ ಹಾಗೂ ಮಹಾಭಾರತ ಮಹಾಕಾವ್ಯಗಳು ಎಲ್ಲ ಕಾಲದಲ್ಲಿಯೂ ಪ್ರಸ್ತುತ ಎಂದು ಸಂಸದ ವೀರಪ್ಪ ಮೊಯಿಲಿ ಅಭಿಪ್ರಾಯಪಟ್ಟಿದ್ದಾರೆ.

Advertisement

ಪಶ್ಚಿಮ ಕಾರ್ಡ್‌ ರಸ್ತೆಯ ಇಸ್ಕಾನ್‌ ಮಲ್ಟಿವಿಷನ್‌ ಥಿಯೇಟರ್‌ನಲ್ಲಿ ಭಾರತೀಯ ವಿದ್ಯಾಭವನ ಹಾಗೂ ಇಸ್ಕಾನ್‌ ಸಂಸ್ಥೆ ಹಮ್ಮಿಕೊಂಡಿದ್ದ ರಾಮಾಯಣ ಸಂದೇಶ ರಾಷ್ಟ್ರೀಯಾ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಪಂಚದಲ್ಲೇ ರಾಮಾಯಣ ಹಾಗೂ ಮಹಾಭಾರತದಷ್ಟು ಸಂಸ್ಕೃತಿ ಕಟ್ಟುವ ಕೆಲಸವನ್ನು ಮತ್ಯಾವ ಕಾವ್ಯಗಳು ಮಾಡಿಲ್ಲ.

ಭೂತ ಹಾಗೂ ವರ್ತಮಾನದಲ್ಲಿನ ಪ್ರತಿಯೊಂದು ಸಾಂಸ್ಕೃತಿಕ ಅಂಶಗಳನ್ನು ನಾವು ಈ ಮಹಾಕಾವ್ಯಗಳಲ್ಲಿ ಕಾಣಬಹುದು. ಹಾಗಾಗಿಯೇ ಭವಿಷ್ಯದಲ್ಲಿ ಸಂಸ್ಕೃತಿ ಜೀವಂತವಾಗಿರಬೇಕೆಂದರೆ ಜನರ ಮನದಲ್ಲಿ ಈ ಮಹಾಕಾವ್ಯಗಳು ನೆಲಸಲೇಬೇಕು ಎಂದು ಹೇಳಿದರು.

ಸಂಸ್ಕೃತಿ ಹಾಗೂ ನಗರೀಕರಗಳನ್ನು ಹೋಲಿಕೆ ಮಾಡಿ ನೋಡಿದರೆ ಮಹಾಭಾರತಕ್ಕಿಂತ ಮೊದಲು ರಾಮಾಯಣ ಸೃಷ್ಟಿಯಾಗಿದೆ. ರಾಮಾಯಣವು ಪ್ರಪಂಚದ ಅನೇಕ ದೇಶಗಳಲ್ಲಿ ಅಲ್ಲಿನ ಸಾಂಸ್ಕೃತಿಕ ಅಂಶಗಳ ಆಧಾರದ ಮೇಲೆ ರಚನೆಯಾಗಿ ಆ ದೇಶಗಳ ಮಹಾಕಾವ್ಯವಾಗಿರುವುದು ವಿಶೇಷ.

ರಾಮಾಯಣದಲ್ಲಿ ಭೌಗೋಳಿಕ ಹಿನ್ನೆಲೆಯಲ್ಲಿ ವಿವಿಧ ಸಂಸ್ಕೃತಿಗಳನ್ನು ವಿವರಿಸಿದ್ದು, ಮುಖ್ಯವಾಗಿ ಅಯೋಧ್ಯದ ಮೂಲಕ ನಗರ ಸಂಸ್ಕೃತಿ, ಕಿಷ್ಕಿಂದ ಮೂಲಕ ಅರಣ್ಯ ಸಂಸ್ಕೃತಿ ಹಾಗೂ ಲಂಕಾದ ಮೂಲಕ ದ್ವೀಪ ಸಂಸ್ಕೃತಿಗಳನ್ನು  ಸುವಿಸ್ತಾರವಾಗಿ ತಿಳಿಸಲಾಗಿದೆ. ಆದರೆ ಇಂದು ನಾವೆಲ್ಲ ನಗರ ಸಂಸ್ಕೃತಿಗೆ ಕಟ್ಟುಬಿದ್ದು, ನಗರೀಕರಣದ ಹೆಸರಿನಲ್ಲಿ ಅರಣ್ಯ ನಾಶಮಾಡುತ್ತಾ ಆ  ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.  
ಸತ್ಯ, ಧರ್ಮ, ಶಾಂತಿ, ಪ್ರೇಮ ಹಾಗೂ ಅಹಿಂಸೆ ಎಂಬ 5 ಮೌಲ್ಯಗಳಿಂದ ರಾಮಾಯಣ ರಚಿತವಾಗಿದ್ದು, ಆಳವಾಗಿ ಅಧ್ಯಯನ ಮಾಡುತ್ತಾ ಹೋದಂತೆ ಸಾಕಷ್ಟು ಹೊಸ ಹೊಸ ಅಂಶಗಳು ದೊರೆಯುತ್ತವೆ. ಹೀಗಾಗಿ, ಇಂದಿಗೂ ಅನೇಕ ಬರಹಗಾರರಿಗೆ ರಾಮಾಯಣ ಸಾಹಿತ್ಯ ಸಾಮಗ್ರಿಯಾಗಿದೆ. ಭಾರತದ ಎಲ್ಲಾ ಭಾಷೆಗಳಲ್ಲೂ ರಚನೆಯಾಗಿರುವುದಲ್ಲದೇ, 34 ವಿದೇಶಿ ಭಾಷೆಗಳಿಗೆ ಭಾಷಾಂತರವಾಗಿದೆ.

Advertisement

ಇನ್ನು 1000ಕ್ಕೂ ಹೆಚ್ಚು ರಾಮಾಯಣ ಆಧಾರಿತ  ಕೃತಿಗಳು ಪ್ರಕಟಗೊಂಡಿವೆ. ಆದರೆ, ಇಂತಹ ಮಹಾಕಾವ್ಯವನ್ನು ಒಂದು ಧರ್ಮಕ್ಕೆ ಸೀಮಿತ ಮಾಡಿ ಸಂಕುಚಿತಗೊಳಿಸಬಾರದು ಎಂದು ತಿಳಿಸಿದರು. ಭಾರತೀಯ ವಿದ್ಯಾಭವನದ ನಿರ್ದೇಶಕ ಸುರೇಶ್‌ ಹಾಗೂ ಇಸ್ಕಾನ್‌ ಸಂಸ್ಥೆಯ ಸದಸ್ಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next