ಮೈಸೂರು: ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜನಸಂಖ್ಯೆ ಕಾರಣದಿಂದ ಪರಿಸರವನ್ನು ಉಳಿಸದಿದ್ದರೆ ಮುಂದಿನ ದಿನಗಳಲ್ಲಿ ಉಸಿರಾಡಲು ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾದರೂ ಅಚ್ಚರಿಯಿಲ್ಲ ಎಂದು ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಕಳವಳ ವ್ಯಕ್ತಪಡಿಸಿದರು.
ನಗರದ ಹೆಬ್ಟಾಳು ಕೈಗಾರಿಕಾ ಪ್ರದೇಶದಲ್ಲಿರುವ ಕಂಟ್ರಿ ಇನ್ ಹೋಟೆಲ್‌ನಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಿರ್ಗತಿಕ ಮಹಿಳೆಯರಿಗೆ ಆಯೋಜಿಸಿದ್ದ ಭೋಜನ ಕೂಟದಲ್ಲಿ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ಪರಿಸರ ಸಂರಕ್ಷಣೆ ಮಾಡುವುದು ಅತ್ಯಂತ ಮುಖ್ಯವಾಗಿದ್ದು, ಪರಿಸರ ರಕ್ಷಣೆ ಎಲ್ಲರ ಮೊದಲ ಆದ್ಯತೆ ಆಗಬೇಕು. ಇದರಿಂದ ಪರಿಸರ ಸ್ವತ್ಛ ಹಾಗೂ ಆರೋಗ್ಯಯುತವಾಗಿ ಇರುವುದರ ಜತೆಗೆ ನಮ್ಮ ಆರೋಗ್ಯ ಸಹ ಉತ್ತಮವಾಗಲಿದೆ.
ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳು, ಸಂಘ ಸಂಸ್ಥೆಗಳು ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು ಎಂದು ಹೇಳಿದರು. ಮಂಡಕಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಮನೋಜ್ ಕುಮಾರ್ ಸಿಂಗ್ ಮಾತನಾಡಿ, ಪರಿಸರವನ್ನು ಹಾಳು ಮಾಡುವ ಕಾರ್ಯ ಮಾಡುವುದು ದುರಾದೃಷ್ಟಕರ ಸಂಗತಿಯಾಗಿದ್ದು, ಈ ನಿಟ್ಟಿನಲ್ಲಿ ನಮ್ಮ ಮನೆ ಮಾತ್ರವಲ್ಲದೆ ಸುತ್ತಮುತ್ತಲ ಪರಿಸರವನ್ನು ಸಹ ಸ್ವತ್ಛವಾಗಿಟ್ಟುಕೊಳ್ಳಬೇಕು.
ಆ ಮೂಲಕ ಮುಂದಿನ ಪೀಳಿಗೆಗೆ ಆರೋಗ್ಯಯುತ ಹಾಗೂ ಉತ್ತಮ ಸಮಾಜ ನೀಡಬಹುದು. ಈ ಹಿನ್ನೆಲೆ ವಿಮಾನ ನಿಲ್ದಾಣವನ್ನು ಹಸಿರೀಕರಣಗೊಳಿಸಲು 500ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದ್ದು, ಎರಡು ಬಾರಿ ಸ್ವತ್ಛನಗರಿ ಎಂಬ ಕೀರ್ತಿ ಪಡೆದಿರುವ ಮೈಸೂರು ಮೂರನೇ ಬಾರಿ ಸ್ವತ್ಛನಗರಿಯನ್ನಾಗಿ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದರು.
ಕಾರ್ಯಕ್ರಮದ ಅಂಗವಾಗಿ ನಿರ್ಗತಿಕ ಮಹಿಳೆಯರಿಗೆ ಕಂಟ್ರಿ ಇನ್ ಹೋಟೆಲ್ ವತಿಯಿಂದ ಭೋಜನ ವ್ಯವಸ್ಥೆ ಏರ್ಪಡಿಸಲಾಗಿತ್ತು. ಮೇಯರ್ ಎಂ.ಜೆ.ರವಿಕುಮಾರ್, ಚಲನಚಿತ್ರ ನಟಿ ರೂಪಿಕಾ, ಸೇಫ್ ವೀಲ್ಸ್ ಮಾಲೀಕ ಬಿ.ಎಸ್.ಪ್ರಶಾಂತ್, ಮೈರಾ ಸ್ಕೂಲ್‌ನ ಮುಖ್ಯಸ್ಥೆ ಡಾ.ಶಾಲಿನಿ ಅರಸ್ ಇನ್ನಿತರರು ಹಾಜರಿದ್ದರು.