ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದ ನಿವಾಸಿ, ಪರಿಸರ ಪ್ರೇಮಿ ಮಹಮ್ಮದ್ ರಫಿ ಎನ್ನುವರು ಬರೊಬ್ಬರಿ 300 ಎಕರೆ ಪ್ರದೇಶದಲ್ಲಿ ಆರು ಸಾವಿರಕ್ಕೂ ಅಧಿಕ ಗಿಡಗಳಿರುವ ದೊಡ್ಡ ಕಾಡನ್ನೇ ಬೆಳೆಸಿದ್ದಾರೆ. ಇವರಿಗೆ ಯಾವುದೇ ಪ್ರಚಾರದ ಗೀಳಿಲ್ಲ. ಪ್ರಚಾರದ ಗೋಜಿಗೂ ಹೋಗಲ್ಲ. ಎಲ್ಲರೂ ಸೇರಿ ಪರಿಸರ ಉಳಿಸೋಣ, ಅದು ನೆಮ್ಮೆಲ್ಲರನ್ನು ಕಾಪಾಡುತ್ತದೆ ಎನ್ನುವುದೊಂದೇ ಇವರ ಮಾತಾಗಿದೆ.
ಹೌದು. ಮಹಮ್ಮದ್ ರಫಿ ಅವರು ತಾಪಂ ಮಾಜಿ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ಆದರೆ ಇವರ ರಾಜಕಾರಣವೇ ಬೇರೆ, ಪರಿಸರ ಜಾಗೃತಿಯೇ ಬೇರೆಯಾಗಿದೆ. ಶ್ರೀರಾಮನಗರ ಸೇರಿ ಇತರೆ ಭಾಗದಲ್ಲಿ ಅರಣ್ಯ ಪ್ರದೇಶವಿದೆ. ಅಲ್ಲಿ ಬರೊಬ್ಬರಿ ಆರು ಸಾವಿರಕ್ಕೂ ಹೆಚ್ಚು ಗಿಡಗಳನ್ನು ಇವರು ಬೆಳೆಸಿದ್ದಾರೆ.
ಪ್ರತಿ ರವಿವಾರ ಪರಿಸರ ಸಂರಕ್ಷಣೆಗಾಗಿ ಇವರ ಸೇವೆ ಮೀಸಲಿರುತ್ತದೆ. ಶಾಲೆ, ಕಾಲೇಜು, ಆಸ್ಪತ್ರೆ, ರಸ್ತೆ ಪಕ್ಕದಲ್ಲಿ ಸಸಿಗಳನ್ನು ನೆಡುವುದು, ಅವುಗಳ ಸುತ್ತ ಸ್ವಚ್ಛತೆ ಮಾಡುವುದು, ಅವುಗಳ ಆರೈಕೆ ಮಾಡುವುದು, ನೀರು ಪೂರೈಸುವುದು ಇವರ ಸೇವೆಯಾಗಿದೆ. ಯಾವುದೇ ಸಭೆ, ಸಮಾರಂಭಗಳಿಗೆ ತೆರಳಿದರೂ ಸಸಿ ಕೊಟ್ಟು ಶುಭ ಕೋರುವುದು ಇವರ ಸಂಪ್ರದಾಯವಾಗಿದೆ. ಇವರಿಗೆ ಓರ್ವ ವೈದ್ಯ ಪರಿಸರ ಬೆಳೆಸಲು ಪ್ರೇರಣೆಯಂತೆ.
ಆ ವೈದ್ಯ ನಿತ್ಯವೂ ಗಂಗಾವತಿಯಿಂದ ಶ್ರೀರಾಮನಗರಕ್ಕೆ ಸೈಕಲ್‌ನಲ್ಲಿ ಆಗಮಿಸಿ ಸಸಿಗಳಿಗೆ ನೀರುಣಿಸುತ್ತಿದ್ದರಂತೆ. ಇದನ್ನು ನೋಡಿದ ರಫಿಕ್ ಅವರು ದೂರದಿಂದ ಬರುವ ವೈದ್ಯರೇ ಇಂತಹ ಸೇವೆ ಮಾಡುತ್ತಿದ್ದಾರೆಂದರೆ ನಾವು ಇಲ್ಲೇ ಇದ್ದುಕೊಂಡು ಇಂತಹ ಪರಿಸರ ಸೇವೆ ಮಾಡೋಣ. ಆ ಪರಿಸರವೇ ನಮ್ಮನ್ನು ಉಳಿಸಲಿದೆ ಎಂದು 2016ರಿಂದ ಈ ಸೇವೆ ಆರಂಭಿಸಿದ್ದಾರೆ. ಕಳೆದ ಐದು ವರ್ಷದಲ್ಲಿ ದೊಡ್ಡ ಕಾಡನ್ನೇ ಸೃಷ್ಟಿ ಮಾಡಿದ್ದಾರೆ.
ಇವರ ಬಗ್ಗೆ ಏಷ್ಟೇ ಪ್ರಚಾರ ಮಾಡುತ್ತೇವೆ ಎಂದರೂ ಬೇಡವೆಂದು ಹಿಂಜರಿಯುತ್ತಾರೆ. ಇವರ ಪರಿಸರ ಕಾಳಜಿ ಪ್ರೇರಣೆಯಿಂದ ಹತ್ತಾರು ಗ್ರಾಮಗಳ ಯುವಕರ ತಂಡವು ತಮ್ಮೂರಿನಲ್ಲೂ ಸಸಿ ಬೆಳೆಸಿ ಪರಿಸರ ಸಂರಕ್ಷಣೆ ಮಾಡುವ ಕಾಯಕದಲ್ಲಿ ತೊಡಗಿದ್ದಾರೆ. ಮಹಮ್ಮದ್ ರಫಿಕ್ ಅವರು ಬೆಳೆಸಿದ ಕಾಡು ನೋಡಿ ನಿಜಕ್ಕೂ ವಿಜ್ಞಾನಿಗಳ ತಂಡವೇ ಮೂಕ ವಿಸ್ಮಿತವಾಗಿದೆ. ಇವರ ಕಾರ್ಯದ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದೆ.
ದತ್ತು ಕಮ್ಮಾರ