ಬನಹಟ್ಟಿ: ರಬಕವಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಡಿ-ದರ್ಜೆಯ ನೌಕರ ಕಲ್ಲಯ್ಯ ಪೂಜೇರಿ ಗಿಡ-ಮರಗಳನ್ನು ರಕ್ಷಣೆ ಮಾಡುವ ಮೂಲಕ ಸೇವಾ ನಿವೃತ್ತಿ ಬಳಿಕವೂ ಪರಿಸರ ಕಾಳಜಿ ತೋರಿದ್ದಾರೆ.
2019ರ ಅಕ್ಟೋಬರ್‌ನಲ್ಲಿ ಕಲ್ಲಯ್ಯ ಸೇವಾ ನಿವೃತ್ತಿ ಹೊಂದಿದ್ದಾರೆ. ಸೇವಾ ಅವಧಿ ಯಲ್ಲಿ ರಬಕವಿ ಗುಡ್ಡದ ಮೇಲಿನ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಅಂದಾಜು84ಕ್ಕೂ ಅಧಿಕ ಗಿಡಗಳನ್ನು ನೆಟ್ಟು ಸ್ವಂತ ಖರ್ಚಿನಲ್ಲಿಯೇ ಅವುಗಳ ಪಾಲನೆ ಪೋಷಣೆ ಮಾಡಿದ್ದಾರೆ. ಪ್ರತಿದಿನ ಶಾಲಾವಧಿ ಪ್ರಾರಂಭವಾಗುವ ಮುಂಚಿತವಾಗಿಯೇ ಶಾಲೆಗೆ ಬಂದು ಗಿಡಗಳಿಗೆ ನೀರುಣಿಸುವುದು ಮತ್ತು ಅವುಗಳ ಸಂಪೂರ್ಣ ನಿರ್ವಹಣೆ ಮಾಡುತ್ತಿದ್ದರು.
ನೀರಿನ ಅಭಾವ ಹೆಚ್ಚಾಗಿರುವುದರಿಂದ ಇದ್ದ ಅಲ್ಪಸ್ವಲ್ಪ ನೀರಿನಲ್ಲಿಯೇ ತಮ್ಮ ಕೈಯಿಂದ ಹಣ ವ್ಯಯ ಮಾಡಿ ಹನಿ ನೀರಾವರಿ ಪದ್ದತಿ ಅಳವಡಿಸಿಕೊಂಡು ಈ ಗಿಡಗಳನ್ನು ಬೆಳೆಸಿದ್ದಾರೆ. ಬಣಗುಡುತ್ತಿರುವ ಈ ಪ್ರದೇಶದಲ್ಲಿ ಗಿಡಗಳನ್ನು ನೆಟ್ಟಿದ್ದರಿಂದ ಶಾಲೆಯ ಸುತ್ತಮುತ್ತಲ ಪರಿಸರ ಹಚ್ಚ ಹಸಿರಾಗಿ ಕಾಣುತ್ತಿದೆ. ಈ ಹಿಂದೆಯೂ ಸಹ ಜಮಖಂಡಿ ತಾಲೂಕಿನ ಮೈಗೂರ ಸರ್ಕಾರಿ ಪ್ರೌಢಶಾಲೆಯಲ್ಲೂ ಕಲ್ಲಯ್ಯ 700 ಗಿಡ ಬೆಳೆಸಿ ಎಲೆ ಮರೆ ಕಾಯಿಯಂತೆ ಪರಿಸರ ಪ್ರೇಮಿಯಾಗಿದ್ದಾರೆ.
ನಾನು ಈ ಶಾಲೆ ಮೈದಾನದಲ್ಲಿ ಕಣಗಲ, ಹೊಂಗೆ ಮರ, ಬೇವು, ನುಗ್ಗೆ ಸೇರಿದಂತೆ ಅನೇಕ ಮಾದರಿಯ ಗಿಡಗಳನ್ನು ಬೆಳೆಸಿದ್ದೇನೆ. ಇಲ್ಲಿನ ನುಗ್ಗೆ ಗಿಡಗಳಲ್ಲಿನ ಕಾಯಿಗಳನ್ನೇ ಬಿಸಿ ಊಟಕ್ಕೆ ನಿತ್ಯ ಬಳಸುತ್ತಾರೆ.-
ಕಲ್ಲಯ್ಯ ಪೂಜಾರಿ, ಪರಿಸರ ಪ್ರೇಮಿ. ರಬಕವಿ.
–ಕಿರಣ ಶ್ರೀಶೈಲ ಆಳಗಿ