Advertisement

ಜಿಲ್ಲಾದ್ಯಂತ ಪರಿಸರ ದಿನಾಚರಣೆ

07:06 AM Jun 06, 2019 | Team Udayavani |

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 5 ಲಕ್ಷ ಸಸಿ ನೆಡುವ ಗುರಿ ಹೊಂದಿದ್ದು ಅದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿ.ಎಸ್‌.ಕರೀಗೌಡ ತಿಳಿಸಿದರು.

Advertisement

ತಾಲೂಕಿನ ಚಪ್ಪರದ ಕಲ್ಲು ಸರ್ಕಲ್‌ ಬಳಿ ಇರುವ ಜಿಲ್ಲಾ ಸಂಕೀರ್ಣ ಮುಂಭಾಗದಲ್ಲಿ ಜಿಲ್ಲಾಡಳಿತ, ಜಿಪಂ, ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ನಡೆದ ಸಸಿ ನೆಡುವ ಕಾರ್ಯಕ್ರಮದಲ್ಲಿ ಸಸಿ ನೆಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಮನುಷ್ಯನಿಗೆ 7 ಸಸಿಗಳ ಅವಶ್ಯವಿದ್ದು ಪ್ರತಿಯೊಬ್ಬರೂ ಸಸಿಗಳನ್ನು ನೆಡಬೇಕು. ಸಸಿಗಳನ್ನು ನೆಟ್ಟರೆ ಸಾಲದು ಅವುಗಳ ಪೋಷಣೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ. ಸಸಿ ನೆಡುವುದರ ಮುಂಚೆ 2 ಲೀಟರ್‌ನ ಬಾಟಲ್‌ ನ್ನು ಇಡಬೇಕು. ಆ ಸಂಗ್ರಹಿಸಿದ ನೀರನ್ನು ಸಸಿಗಳಿಗೆ ಹಾಕಬೇಕು ಎಂದು ಹೇಳಿದರು.

ಪ್ರತಿಯೊಬ್ಬರೂ ಪರಿಸರದ ಸಂಬಂಧದ ಬಗ್ಗೆ ತಿಳಿದುಕೊಳ್ಳಬೇಕು. ಪ್ರಕೃತಿಯಿಂದ ತಮಗೆ ಸಿಗುತ್ತಿರುವ ಅನುಕೂಲಗಳನ್ನು ಬಳಸಿಕೊಳ್ಳುತ್ತೇವೆ. ತಾಪಮಾನ ಹೆಚ್ಚಾಗುತ್ತಿದ್ದು, ಮಳೆಯ ಪ್ರಮಾಣ ಕಡಿಮೆಯಾಗಿದೆ. ನೀರಿಗಾಗಿ ಅರಣ್ಯ ಎಂಬ ಸಂದೇಶವನ್ನು ಕೊಡಲಾಗುತ್ತಿದೆ. ನೀರು ಇಲ್ಲದಿದ್ದರೆ ಯಾರೂ ಸಹ ಬದುಕಲು ಆಗುವುದಿಲ್ಲ, ನೀರಿನ ಮಹತ್ವವನ್ನು ತಿಳಿದುಕೊಳ್ಳಿ ಎಂದರು.

ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆರ್‌.ಲತಾ ಮಾತ‌ನಾಡಿ, ಪರಿಸರದ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಬೇಕಿದ್ದು ಮೊದಲು ಬೇರೊಬ್ಬರನ್ನು ಬೆಟ್ಟುಮಾಡಿ ತೋರಿಸುವ ಬದಲು ತಾವು ಸರಿಯಾದ ರೀತಿಯಲ್ಲಿ ಇದ್ದೇವೆಯೇ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.

Advertisement

ವಾಹನಗಳು ಹೆಚ್ಚಾದಂತೆ ಹೊಗೆ ಹೆಚ್ಚು ಇರುವುದರಿಂದ ಪರಿಸರ ಮಾಲಿನ್ಯವಾಗುತ್ತಿದೆ. ಅಂದಿನ ಕಾಲದಲ್ಲಿ ಅರಣ್ಯೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದರಿಂದಾಗಿ ಮಳೆ ಪ್ರಮಾಣ ಹೆಚ್ಚಾಗುತ್ತಿತ್ತು. ಆದರೆ, ಇತ್ತೀಚಿನಲ್ಲಿ ಮಾನವನ ಸ್ವಾರ್ಥಕ್ಕಾಗಿ ಮರಗಿಡಗಳನ್ನು ನಾಶ ಪಡಿಸುತ್ತಿದ್ದಾನೆ. ಅನುಕೂಲ ಮಾಡಿಕೊಳ್ಳಲು ಮಾನವ ಮರಗಳನ್ನು ಕಡಿಯುತ್ತಾನೆಂದರು.

ಜಿಲ್ಲಾ ಸಾಮಾಜಿಕ ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರು ಮಾತನಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇ.33, ಅರಣ್ಯ ವಿರಬೇಕಾಗಿತ್ತು. ಆದರೆ, ಅದರಲ್ಲಿ ಶೇ.17 ಅರಣ್ಯ ಇದೆ. ವಿವಿಧ ಸಮಾಜ ಮತ್ತು ಸಮುದಾಯದ ಜನರು ಸಕ್ರಿಯವಾಗಿ ಪಾಲ್ಗೊಳ್ಳಲು ಪ್ರೇರೇಪಿಸಬೇಕು.

ಪರಿಸರ ಸಂರಕ್ಷಣೆ ಮಾನದಂಡಗಳ ಅಭಿವೃದ್ಧಿ ಕಡೆ ಕ್ರಿಯಾಶೀಲ ಪ್ರತಿನಿಧಿಗಳಾಗಬೇಕು. ಜಗತ್ತಿನೆಲ್ಲಡೆ ಮಾನವ ಪ್ರಾಣಿ ಪಕ್ಷಿಗಳ ಉಸಿರಾದ ಹಸಿರನ್ನು ಉಳಿಸಲು ಮತ್ತು ಪರಿಸರದ ಉಳಿವಿಗಾಗಿ ಜನ ಜಾಗೃತಿ ಮೂಡಿಸಬೇಕು. ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಮಹಾಯುದ್ಧವಾಗಬೇಕಾದರೆ ನೀರು, ಗಾಳಿ, ಪರಿಸರಕ್ಕಾಗಿ ಯುದ್ಧಮಾಡುವ ದಿನಗಳು ಸಮೀಪಿಸುತ್ತವೆ ಎಂದು ಎಚ್ಚರಿಸಿದರು.

ಈ ವೇಳೆ ಜಿಪಂ ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷೆ ಕನ್ಯಾಕುಮಾರಿ, ತಾಪಂ ಅಧ್ಯಕ್ಷೆ ಭಾರತಿ, ತಹಶೀಲ್ದಾರ್‌ ಕೇಶವ ಮೂರ್ತಿ, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಕೆ.ಪೂವಯ್ಯ, ವಲಯ ಅರಣ್ಯಾಧಿಕಾರಿ ಪುಷ್ಪಾ, ವಿವಿಧ ಸಂಘಟನೆೆಗಳ ಪದಾಧಿಕಾರಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next