ಬೆಂಗಳೂರು: ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಬಿಬಿಎಂಪಿ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಗಣೇಶನ ಮೂರ್ತಿಗಳ ವಿಸರ್ಜನೆಯಿಂದ ಜಲಮೂಲಕ್ಕೆ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸಿರುವ ಪಾಲಿಕೆ ಅದಕ್ಕಾಗಿಯೇ ಪುಷ್ಕರಣಿಗಳನ್ನು ನಿರ್ಮಿಸಿದೆ. ಸಂಚಾರಿ ನೀರಿನ ಘಟಕಗಳ ವ್ಯವಸ್ಥೆ ಮಾಡಿದೆ. ಜತೆಗೆ ಮಣ್ಣಿನ ಸಣ್ಣ ಮೂರ್ತಿಗಳನ್ನೇ ಬಳಸುವಂತೆ ಮೇಯರ್ ಪದ್ಮಾವತಿ ಜನರಲ್ಲಿ ಮನವಿಯನ್ನೂ ಮಾಡಿದ್ದಾರೆ. ಈ ಕುರಿತು ಬುಧವಾರ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಪರಿಸರ ಸ್ನೇಹಿ ಮೂರ್ತಿಗಳನ್ನು ಪೂಜಿಸುವಂತೆ ಈಗಾಗಲೇ ನಗರದ ಜನತೆಗೆ ಮನವಿ ಮಾಡಲಾಗಿದೆ. ಆ ಹಿನ್ನೆಲೆಯಲ್ಲಿ ಕಳೆದ ಬಾರಿಗಿಂತ ನಗರದಲ್ಲಿ ಪಿಒಪಿ ಗಣೇಶ ಮೂರ್ತಿಗಳ ಸಂಖ್ಯೆಯಲ್ಲಿ ಕಡಿಮೆಯಾಗಿದೆ ಎಂದರು. ನಗರದಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗಾಗಿ 36 ಕೆರೆಗಳಲ್ಲಿ ಪುಷ್ಕರಣೆಗಳನ್ನು ನಿರ್ಮಿಸಿ ಅವಕಾಶ ನೀಡಲಾಗಿದೆ. ಪಾಲಿಕೆಯ ವತಿಯಿಂದ 250 ಸಂಚರಿ ತಾತ್ಕಾಲಿಕ ವಿಸರ್ಜನಾ ಘಟಕಗಳ ವ್ಯವಸ್ಥೆ ಮಾಡಲಾಗಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ 42 ಮೊಬೈಲ್ ವಿಸರ್ಜನಾ ಘಟಕಗಳನ್ನು ನೀಡಲಾಗಿದೆ. ಆ ಹಿನ್ನೆಲೆಯಲ್ಲಿ ಸಾರ್ವಜನಿಕರು ಪರಿಸರ ಸ್ನೇಹಿ ಹಾಗೂ ಚಿಕ್ಕ ಮೂರ್ತಿಗಳನ್ನು ಪೂಜಿಸಲು ಮುಂದಾಗಬೇಕು. ಆ ಮೂಲಕ ನಗರದ ಜಲಮೂಲಗಳ ರಕ್ಷಣೆಗೆ ಮುಂದಾಗಬೇಕು ಎಂದು ಕೋರಿದರು. ಗಣೇಶ ಮೂರ್ತಿಗಳ ವಿಸರ್ಜನೆಯ ವೇಳೆ ಪಾಲಿಕೆಯಿಂದ ಗುರುತಿಸಲ್ಪಟ್ಟಿರುವ ಕೆರೆಗಳು ಹಾಗೂ ಪುಷ್ಕರಣಿಗಳಲ್ಲಿ ವಿದ್ಯುತ್ ದೀಪದ ವ್ಯವಸ್ಥೆ, ಸಹಾಯ ಕೇಂದ್ರ, ಭದ್ರತಾ ಸಿಬ್ಬಂದಿ, ಸ್ವಯಂ ಸೇವಕರ ನೇಮಕ, ನುರಿತ ಈಜು ತಜ್ಞರ ನಿಯೋಜನೆ, ಗ್ಯಾಂಗ್‌ಮನ್‌ಗಳ ನಿಯೋಜನೆ ಸೇರಿದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದು, ಸಂಬಂಧಿಸಿದ ಎಲ್ಲ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲಾಗಿದೆ ಎಂದು ಮಾಹಿತಿ ನೀಡಿದರು. ಇದರೊಂದಿಗೆ ಎಲ್ಲ ವಿಸರ್ಜನ ಸ್ಥಳಗಳ ದ್ವಾರಗಳಲ್ಲಿ ಪೂಜೆಗೆ ಪಯೋಗಿಸುವ ಹಸಿ ಕಸವಿಲೇವಾರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ರಾತ್ರಿ 10.30ರ ನಂತರ ನಿಗದಿಪಡಿಸಿರುವ ಕೆರೆ ಹಾಗೂ ಪುಷ್ಕರಣಿಗಳಲ್ಲಿ ವಿಸರ್ಜನೆಗೆ ಅವಕಾಶ ನೀಡುವುದಿಲ್ಲ. ಇದರೊಂದಿಗೆ ವಿಸರ್ಜನೆಯ ವೇಳೆ ಕೆರೆಯ ಬಳಿ ಪಟಾಕಿ ಸಿಡಿಸುವುದು, ಧ್ವನಿವರ್ಧಕಗಳನ್ನು ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಗೌರಿ-ಗಣೇಶನಿಗೆ ಖರೀದಿ ಜೋರು
ಬೆಂಗಳೂರು: ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ನಾಗಕರಿರು ಬುಧವಾರ ಗೌರಿಗೆ ಬಾಗೀನ ಸೇರಿದಂತೆ ಹಬ್ಬದ ವಿವಿಧ ಸಾಮಗ್ರಿಗಳನ್ನು ಖರೀದಿಸುವಲ್ಲಿ ತಲ್ಲೀನರಾಗಿದ್ದರು. ಹಬ್ಬದ ಪೂರ್ವಸಿದ್ಧತೆಗಾಗಿ ಮನೆ, ದೇವಾಲಯಗಳ ಸ್ವತ್ಛತೆ ಹಾಗೂ ವಿವಿಧ ಬಗೆಯ ತಿಂಡಿ ತಿನಿಸುಗಳ ತಯಾರಿಸಿಡುವ ಕೆಲಸವೂ ಕೂಡ ಜೋರಾಗಿಯೆ ನಡೆದಿತ್ತು. ಹಬ್ಬದ ಪ್ರಯುಕ್ತ ನಗರದ ಬಡಾವಣೆಗಳ ರಸ್ತೆಗಳ ಪಾದಚಾರಿ ಮಾರ್ಗಗಳು ಮಿನಿ ಮಾರುಕಟ್ಟೆಯಾಗಿ ಪರಿವರ್ತನೆಗೊಂಡಿದ್ದವು.
ಪಿಒಪಿ ಗಣೇಶ ವಿಸರ್ಜನೆ ಅವಕಾಶ ಇದೆಯೇ?
ಬಿಬಿಎಂಪಿ ವ್ಯಾಪ್ತಿಯಲ್ಲಿ ಪಿಒಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಲಾಗಿದೆ. ಆದರೂ ನಗರಕ್ಕೆ ನೂರಾರು ಗಣೇಶಗಳು ಬಂದಿರುವುದರಿಂದ ವಿಸರ್ಜನೆಯ ವೇಳೆ ಅವಕಾಶ ನೀಡದಿದ್ದರೆ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ಸಾಧ್ಯತೆಯಿದೆ. ಹೀಗಾಗಿ ವಿಸರ್ಜಿಸಲು ಅವಕಾಶ ನೀಡಲಾಗುವುದು. ಆದರೆ, ಮಣ್ಣಿನ ಗಣಪತಿ ಮೂರ್ತಿಗಳಿಗೆ ನೀಡುವಷ್ಟು ಸಮಯವನ್ನು ಪಿಒಪಿ ಗಣೇಶ ಮೂರ್ತಿಗಳಿಗೆ
ನೀಡದೆ ಕೆಲವೇ ಗಂಟೆಗಳಲ್ಲಿ ನೀರಿನಿಂದ ತೆಗೆಯಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ತಿಳಿಸಿದರು. ತೆಂಗಿನಕಾಯಿ ದುಬಾರಿ: ಗಣೇಶ ಹಬ್ಬದ ಪೂಜೆಗೆ ತೆಂಗಿನಕಾಯಿಗಳ ಬಳಕೆ ಹೆಚ್ಚು. ಮಳೆ ಕೊರತೆ ಮತ್ತು ಬರಗಾಲದ ಹಿನ್ನೆಲೆಯಲ್ಲಿ ತೆಂಗಿನಕಾಯಿಯ ಬೆಲೆ ಏರಿಕೆಯಾಗಿದೆ. ಹಬ್ಬಕ್ಕೆ ತೆಂಗಿನ ಕಾಯಿಗೆ ಬೇಡಿಕೆ ಹೆಚ್ಚಾಗಿದ್ದು, ಬೆಲೆಯೂ ಕೂಡ ಮತ್ತಷ್ಟು ದುಬಾರಿಯಾಗಿದೆ. ಸಗಟು ದರದಲ್ಲಿ ಗಾತ್ರದ ಆಧಾರದ ಮೇಲೆ ಪ್ರತಿ ತೆಂಗಿನ ಕಾಯಿಗೆ 10-12 ರೂ.ನಿಂದ ಆರಂಭಗೊಂಡು 23 ರೂ.ಗಳ ವರೆಗೂ ದರವಿದೆ. ಆದರೆ ಚಿಲ್ಲರೆ ಮಾರುಕಟ್ಟೆ ದರ ದಲ್ಲಿ 15 ರೂ.ಗಳಿಂದ 30 ರೂ.ಗಳವರೆಗೆ ಬೆಲೆ ಇದೆ. ಹಾಪ್ ಕಾಮ್ಸ್ ನಲ್ಲಿ ಸಣ್ಣ ಕಾಯಿಗೆ 22 ರೂ., ಮಧ್ಯಮ ಗಾತ್ರಕ್ಕೆ 29 ರೂ. ಮತ್ತು ದೊಡ್ಡಗಾತ್ರದ ತೆಂಗಿನ ಕಾಯಿಗೆ 32 ರೂ.ಇದೆ.
ಹೂ ಕೆ.ಜಿಗೆ 1,200ರೂ: ಕನಕಾಂಬರ ಹೂವು ಕೆ.ಜಿ.ಗೆ 1,200-1,500 ರೂ. ದಾಟಿದ್ದು, ಗಂಟೆಗೊಮ್ಮೆ ದರದ ಏರಿಳಿತ ಮಾಮೂಲಾಗಿತ್ತು. ಮಲ್ಲಿಗೆ ಹೂವು ಕೆಜಿಗೆ 400ರಿಂದ 500 ರೂ. ತಲುಪಿದೆ. ಒಂದು ಮೊಳ ಕನಕಾಂಬರ ಹೂವಿಗೆ 80 ರಿಂದ 100 ರೂ. ಇತ್ತು. ಮಲ್ಲಿಗೆ ಹೂವು 40-50 ರೂ. ವರೆಗೆ ಇದೆ. ಕಾಕಡ ಹೂವು ಕೂಡ 40-50 ರೂ. ತಲುಪಿದೆ. ದೊಡ್ಡ ಗಾತ್ರದ ಬಾಳೆಕಂದು ಜೋಡಿಗೆ 50ರೂ. ಚಿಕ್ಕ ಗಾತ್ರಕ್ಕೆ 30 ರೂ.ನಂತೆ ಮಾರಾಟ ಮಾಡಲಾಗುತ್ತಿತ್ತು
ರಸ್ತೆಯ ಇಕ್ಕೆಲಗಳು ಹೂವು, ಹಣ್ಣು , ಮಾವಿನ ಸೊಪ್ಪು, ಬಾಳೆಕಂದು, ಗರಿಕೆ, ಬೇಲದ ಹಣ್ಣು , ಗೌರಿ-ಗಣೇಶ ಮೂರ್ತಿಗಳಿಂದ ತುಂಬಿದ್ದವು. ಗೌರಿಗೆ ಪ್ರಿಯವಾದ ಮಲ್ಲಿಗೆ, ಮಲ್ಲೆಹೂವು, ಗುಲಾಬಿ, ಬಟನ್ಸ್, ಸೇವಂತಿಗೆ, ಧವನ ಇತ್ಯಾದಿ ಹೂವುಗಳ ಮಾರಾಟ ಭರ್ಜರಿಯಾಗಿತ್ತು. ಗಣೇಶ, ಗೌರಿ ಹಬ್ಬದ ಸಡಗರಕ್ಕೆ ತಣ್ಣೀರು ಎರಚುತ್ತಿರುವ ಮಳೆಯಿಂದ ವ್ಯಾಪಾರಸ್ಥರು ಸಂಕಷ್ಟ ಎದುರಿಸುತ್ತಿದ್ದು, ಯಾವಾಗ ಮಳೆ ಧೋ..ಎಂದು ಸುರಿದು, ವಹಿವಾಟು ಅಸ್ತವ್ಯಸ್ತ ಮಾಡುತ್ತದೋ ಎಂಬ ಭಯದಲ್ಲೇ ವ್ಯಾಪಾರದಲ್ಲಿ ಮುಳುಗಿದ್ದರು. ಗೌರಿ, ಗಣೇಶ ಮೂರ್ತಿಗಳು ಮಳೆಗೆ ತೊಯ್ಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪ್ಲಾಸ್ಟಿಕ್ ಟಾರ್ಪಾಲ್, ಚಪ್ಪರ ಹಾಕಲಾಗಿತ್ತು.