Advertisement

ಗೋಡಿನಾಳ ಸರ್ಕಾರಿ ಶಾಲೆ ಹಚ್ಚ ಹಸಿರು

02:09 PM Jun 05, 2022 | Team Udayavani |

ಕನಕಗಿರಿ: ಇತ್ತೀಚಿನ ದಿನಗಳಲ್ಲಿ ಪರಿಸರ ಸಂರಕ್ಷಣೆ ಮಾಡುವುದು ಅಪರೂಪ. ಆದರೆ ಸಮೀಪದ ಗೋಡಿನಾಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ರೀತಿಯ ಸಸಿಗಳನ್ನು ನೆಟ್ಟು ಹಚ್ಚ ಹಸಿರಿನ ಪರಿಸರ ನಿರ್ಮಾಣ ಮಾಡುವಲ್ಲಿ ಇಲ್ಲಿನ ಶಿಕ್ಷಕರು ಪ್ರಮುಖ ಪಾತ್ರ ವಹಿಸಿದ್ದಾರೆ.

Advertisement

ಬರದ ನೆಲದಲ್ಲಿ ಹಸಿರು ತೊಡಿಸಲಾಗಿದೆ. ಹಕ್ಕಿಗಳ ಕಲರವ ನಿರಂತರ ದಟ್ಟಾರಣ್ಯದಂತೆ ಕಾಣುವ ಈ ನೆಲ ತಪೋವನದ ಹೆಸರಿನಲ್ಲಿ ತಪೋಭೂಮಿಯಂತಿದೆ. ಚಿಕ್ಕ ಜಾಗದಲ್ಲೆಲ್ಲ ಗಿಡಗಳ ಸಾಲಿವೆ. ಖಾಸಗಿ ಜಾಗವಾದರೂ ಸರಿ, ಸರ್ಕಾರಿ ಜಾಗವಾದರೂ ಸರಿ ಸ್ವ ಇಚ್ಛೆಯಿಂದ ಸಸಿ ನೆಟ್ಟು ಬೆಳೆಸಲಾಗಿದೆ. ಬೇಸಿಗೆಯಲ್ಲಿ ನೀರಿನ ಹಾಹಾಕಾರವಿದ್ದರೂ ಟ್ಯಾಂಕರ್‌ ಮೂಲಕ ನೀರನ್ನು ಖರೀದಿಸಿ ಗಿಡಮರಗಳಿಗೆ ನೀರುಣಿಸಲಾಗಿದೆ. ಪಕ್ಷಿಗಳಿಗಾಗಿ ಬಾಟಲ್‌ ಕೊರೆದು ನೀರಿನ ತೊಟ್ಟಿ ನಿರ್ಮಿಸಿ, ಗಿಜುಗನ ಗೂಡನ್ನು ತಂದು ಮರಗಳಿಗೆ ಕಟ್ಟಿ ಪಕ್ಷಿಗಳ ಸಂತಾನೋತ್ಪತ್ತಿಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ರಾಸಾಯನಿಕ ಸಿಂಪಡಿಸದೆ ಸಾವಯವ ಪದ್ಧತಿಯಲ್ಲಿ ಉದ್ಯಾನವನ ನಿರ್ಮಿಸಿ ಪೋಷಣೆ ಮಾಡಲಾಗುತ್ತಿದೆ. ಅನೇಕ ದಿನಗಳ ಕಾಲ ನೀರಿಲ್ಲದಿದ್ದರೂ ಸಾವಯವ ಪದ್ಧತಿಯಲ್ಲಿ ಬೆಳೆದ ಗಿಡಮರಗಳು ಹಸಿರಾಗಿ ಉಳಿದಿವೆ. ಗಿಡ ಮರಗಳನ್ನು ಬೆಳೆಸುತ್ತಾ ಪ್ರೇರಣೆಯಾಗಿ ನಿಲ್ಲುವ ಶಾಲೆ ಶಿಕ್ಷಕರು ಪ್ರತಿ ಮನೆಯ ಮುಂದೆಯೂ ಕೂಡ ಸೌಂದರ್ಯವರ್ಧಕ ಗಿಡಮರಗಳನ್ನು ಬೆಳೆಸುವಲ್ಲಿ ಹಾಗೂ ಬೇರೆ ಬೇರೆ ಗಿಡಗಳ ಪೋಷಣೆಗೆ ಜನರು ನಿಲ್ಲುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರತಿ ವಿದ್ಯಾರ್ಥಿಗಳಿಗೊಂದು ಗಿಡ ನೀಡಿ ಪೋಷಣೆ ಮಾಡಿ ಸೊಂಪಾಗಿ ಬೆಳೆಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಮನೆಯ ಆವರಣ, ಸುತ್ತಮುತ್ತ ಜಾಗ ಸ್ವತ್ಛವಾಗಿಟ್ಟುಕೊಳ್ಳುವುದರ ಮೂಲಕ ಆ ಸ್ಥಳದಲ್ಲಿ ಗಿಡಗಳನ್ನು ಬೆಳೆಸುವಲ್ಲಿ ಪ್ರೇರಕ ಶಕ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. ಮಕ್ಕಳ ಹುಟ್ಟಿದ ದಿನಕ್ಕೊಂದು ಸಸಿ ತಂದು ನೆಟ್ಟು ಪೋಷಣೆ ಮಾಡಿ ತಮ್ಮ ಜನ್ಮದಿನವನ್ನು ವಿಶೇಷವಾಗಿ ಆಚರಿಸುವಲ್ಲಿ ಮಕ್ಕಳು ಮುಂದಾಗಿದ್ದಾರೆ.

-ಮೆಹಬೂಬ್‌ ಗಂಗಾವತಿ

ಪರಿಸರ ಸ್ನೇಹಿ ಕೇಸೂರ ಗ್ರಾಪಂ

Advertisement

ದೋಟಿಹಾಳ: ಗ್ರಾಮ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿ 5-6 ವರ್ಷಗಳಲ್ಲಿ ಕೇಸೂರ ಗ್ರಾಪಂ 30 ಗುಂಟೆ ಜಾಗದಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮಾಡಿ ಉಳಿದ ಜಾಗದಲ್ಲಿ ವಿವಿಧ ಬಗೆ ಸಸಿಗಳನ್ನು ಬೆಳೆಸಿ ಗ್ರಾಪಂ ಕಂಗೊಳಿಸುವಂತೆ ಮಾಡಿದ್ದಾರೆ ಅಧಿಕಾರಿ ಮತ್ತು ಆಡಳಿತ ಮಂಡಳಿಯವರು. 2014ರಲ್ಲಿ ರಾಜ್ಯ ಸರಕಾರ ಗ್ರಾಪಂ ಮರುವಿಂಗಡನೆ ಮಾಡಿದ ವೇಳೆ ರಚನೆಯಾಗಿದ್ದು, ಸರಕಾರದ ಅನುದಾನ ಬಳಸಿಕೊಂಡು ಗ್ರಾಮಸ್ಥರು ಹಾಗೂ ಅಧಿಕಾರಿಗಳ ಸಹಕಾರದೊಂದಿಗೆ ಪರಿಸರ ಸ್ನೇಹಿ ಗ್ರಾಪಂ ಮಾಡಲು ಮುಂದಾಗಿದ್ದಾರೆ. 2014ರಲ್ಲಿ ದೋಟಿಹಾಳ ಗ್ರಾಪಂನಿಂದ ವಿಂಗಡನೆಗೊಂಡ ಕೇಸೂರು ಗ್ರಾಪಂ ಕಚೇರಿ ಮೊದಲು ಗ್ರಾಮದ ಸಮುದಾಯ ಭವನದಲ್ಲಿ ಆರಂಭಿಸಲಾಗಿತ್ತು. ನಂತರ ಸರಕಾರ ರಾಜೀವ ಗಾಂಧಿ ಸೇವಾ ಕೇಂದ್ರ ಹಾಗೂ ಉಗ್ರಾಣ ಕೊಠಡಿಗೆ ಮರುವಿಂಗಡನೆಗೊಂಡ ಗ್ರಾಪಂಗಳಿಗೆ ಅನುದಾನ ಬಿಡುಗಡೆ ಮಾಡಿತು. ಇದನ್ನು ಹಿಂದಿನ ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು ಗ್ರಾಪಂ ಕಚೇರಿಗೆ ಮೀಸಲಿದ್ದ ಸುಮಾರ 30 ಗುಂಟೆ ಜಾಗದಲ್ಲಿ ರಾಜೀವ್‌ ಗಾಂಧಿ ಸೇವಾ ಕೇಂದ್ರ ಮತ್ತು ಉಗ್ರಣ ಕೊಠಡಿ ನಿರ್ಮಿಸಿ ಉಳಿದ ಜಾಗದಲ್ಲಿ ಹಸಿರು ಬೆಳೆಸಲು 70ಕ್ಕೂ ಹೆಚ್ಚು ಸಸಿ ನೆಟ್ಟು ಕಂಗೊಳಿಸುವಂತೆ ಮಾಡಿದ್ದಾರೆ. ಗ್ರಾಪಂ ಆವರಣದ ಉದ್ಯಾನವನದಲ್ಲಿ ಸುಮಾರು 70ಕ್ಕೂ ಹೆಚ್ಚು ಸಸಿಗಳನ್ನು ಬೆಳೆಸಲಾಗಿದೆ. ಬೇವಿನ ಮರ, ತೆಂಗಿನ ಮರ, ನೇರಳೆ ಮರ, ನಿಂಬೆ, ಬಾದಾಮಿ, ಲಿಂಬೆಹಣ್ಣು ಗಿಡ, ಅಶೋಕ, ಸಿಲ್ವಾರ್‌, ಗುಲ್‌ ಮೊಹರ್‌, ಇನ್ನೂ ಅನೇಕ ಜಾತಿಯ ಸಸಿಗಳು ಬೆಳೆಸಲಾಗುತ್ತಿದೆ.

ಈ ಹಿಂದಿನ ಹಾಗೂ ಈಗಿನ ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರ ಪರಿಶ್ರಮದಿಂದ ಪರಿಸರ ಸ್ನೇಹಿ ಗ್ರಾಪಂ ನಿರ್ಮಾಣವಾಗಿದೆ. ಗ್ರಾಪಂ ಆವರಣದಲ್ಲಿ ಒಂದು ಗಿಡ ಬೆಳೆಸಲು ಅನೇಕ ತೊಂದರೆಗಳು ಬರುತ್ತವೆ. ಇವುಗಳನ್ನು ಮೀರಿ ಸುಂದರ ಉದ್ಯಾನವನ ಕಂಗೊಳಿಸುವಂತೆ ಮಾಡಲಾಗುತ್ತಿದೆ. ಇದು ಒಂದು ಹೆಮ್ಮೆಯ ವಿಷಯ. ಆಡಳಿತ ಮಂಡಳಿ ಮತ್ತು ಗ್ರಾಪಂ ಸಿಬ್ಬಂದಿ ನಡುವೆ ಉತ್ತಮ ಬಾಂಧವ್ಯದಿಂದ ಇದು ಸಾಧ್ಯವಾಗಿದೆ. –ಅಮೀನಸಾಬ್‌ ಅಲಂದಾರ, ಕೇಸೂರ ಪಿಡಿಒ

„ಮಲ್ಲಿಕಾರ್ಜುನ ಮೆದಿಕೇರಿ

Advertisement

Udayavani is now on Telegram. Click here to join our channel and stay updated with the latest news.

Next