Advertisement

ಪರಿಸರ ದಿನಾಚರಣೆ ಶಾಶ್ವತ ಜಾಗೃತಿ ಮೂಡಿಸುವ ಕಾರ್ಯವಾಗಲಿ

10:51 AM Jun 05, 2020 | mahesh |

ಪರಿಸರ ರಕ್ಷಿಸುವ ಜವಾಬ್ದಾರಿ ಮಾನವರದ್ದಾಗಿದೆ. ಆದರೆ ಬಹುಪಾಲು ಜನರು ಇದನ್ನು ಸರಿಯಾಗಿ ನಿಭಯಿಸಿಲ್ಲ. ಜೂನ್‌ 5ರಂದು ಶಾಲೆಗಳಲ್ಲಿ ಸೇರಿದಂತೆ ಹಲವೆಡೆ ಗಿಡಗಳನ್ನು ನೀಡುವ ಮೂಲಕ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಆದರೆ ಇದು ಇನ್ನೂ ಆಚರಣೆಗೆ ಮಾತ್ರ ಸೀಮಿತವಾಗಿದೆ. ಮಾತ್ರವಲ್ಲದೇ ಪರಿಸರವು ಕೇವಲ ಪರಿಸರ ದಿನಾಚರಣೆಗೆ ಮಾತ್ರವೇ ಸೀಮಿತವಾದಂತಿದೆ. ಜತೆಗೆ ಕೆಲವು ಭಾಷಣಗಳಿಗೆ ಮಾತ್ರ ಸಾಕ್ಷಿಯಾಗಿದೆ. ಈ ದಿನಕ್ಕಿರುವ ಮಹತ್ವವನ್ನು ಪ್ರತಿಯೊಬ್ಬ ವ್ಯಕ್ತಿಯೂ ತಿಳಿಯಬೇಕಾಗಿದೆ.

Advertisement

ಇಂದಿನ ದಿನಗಳಲ್ಲಿ ಜೂನ್‌ 5ರಂದು ಮಾತ್ರ ಗಿಡ ನೆಡುವ ಮೂಲಕ “ಪರಿಸರ ಪ್ರೇಮಿ’ ಎನಿಸಿ ಅನಂತರ ಅದರ ಬಗ್ಗೆ ಯಾವುದೇ ರೀತಿಯ ಕಾಳಜಿ ವಹಿಸದೇ ಪರಿಸರದ ಕುರಿತಾದ ಭಾಷಣಗಳಿಗೆ ಸೀಮಿತವಾಗಿ ಬಿಟ್ಟಿದೆ. ಅನಂತರ ಪರಿಸರವು ನೆನಪಾಗಬೇಕೆಂದರೆ ಮುಂದಿನ ವರ್ಷದ ಜೂನ್‌ 5 ಬರಬೇಕು. ಇದು ಇಂದಿನ ಸ್ಥಿತಿ. ಶಾಲೆಗಳಲ್ಲಿ ಸಣ್ಣ ತರಗತಿಗಳಿಂದಲೇ ಪಠ್ಯಗಳಲ್ಲಿ ಪರಿಸರದ ಬಗ್ಗೆ ಮಾಹಿತಿ ನೀಡುವ ಮೂಲಕ ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು. ವಾರದಲ್ಲಿ ಒಂದು ಅವಧಿಯಾದರೂ ಪರಿಸರದ ಬಗ್ಗೆ ಮಾಹಿತಿ ನೀಡುವ ಮೂಲಕ ಚಿಕ್ಕ ವಯಸ್ಸಿನಿಂದಲೇ ಪರಿಸರದ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಲು ಸಹಕಾರಿಯಾಗಬಹುದು.

ಪರಿಸರದ ಪ್ರಾಮುಖ್ಯತೆಯು ಕುರಿತು ಪ್ರಚಾರ ನೀಡಬೇಕು. ಸಿನೆಮಾ ಸೇರಿದಂತೆ ಕೆಲವು ಪ್ರಮುಖ ಮನರಂಜನಾ ಮಾಧ್ಯಮಗಳಲ್ಲಿ ಇದರ ಕುರಿತಾಗಿ ಮಾಹಿತಿ ಕಾರ್ಯ ನಡೆಯಬೇಕು. ಉಳಿದಂತೆ ದಿನಪತ್ರಿಕೆಗಳಲ್ಲಿ ವಿಶೇಷ ವರದಿ, ದೃಶ್ಯ ಮಾಧ್ಯಮಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬೇಕು. ಯುವಜನಾಂಗವನ್ನು ಬಹುವಾಗಿ ಸೆಳೆದಿರುವ ಸಾಮಾಜಿಕ ಮಾಧ್ಯಮಗಳಲ್ಲಿ ಪರಿಸರದ ಕುರಿತು ಜಾಹೀರಾತು ನೀಡಬೇಕು. ಆ ಮೂಲಕ ಜನರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವಲ್ಲಿ ಸಹಕಾರಿಯಾಗಬಹುದು.

ಮಾಲಿನ್ಯ ಸೇರಿದಂತೆ ಇನ್ನಿತರ ರೀತಿಯಲ್ಲಿ ಪರಿಸರವನ್ನು ಹಾನಿಗೀಡು ಮಾಡುವುದರ ವಿರುದ್ಧ ಸರಕಾರವು ಕ್ರಮ ಕೈಗೊಳ್ಳಬೇಕು. ಆ ಮೂಲಕ ಪರಿಸರಕ್ಕಾಗುವ ಹಾನಿಯನ್ನು ಸ್ವಲ್ಪ ಮಟ್ಟಿಗೆ ತಡೆಯಬಹುದಾಗಿದೆ. ನಮ್ಮ ಜೀವನದಲ್ಲಿ ಪರಿಸರದ ಪಾತ್ರವು ಬಹುಮುಖ್ಯವಾಗಿದೆ. ಪರಿಸರವನ್ನು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ.

ಅಕ್ಷಯಕೃಷ್ಣ ಪಳ್ಳತ್ತಡ್ಕ, ಕಾಸರಗೋಡು

Advertisement
Advertisement

Udayavani is now on Telegram. Click here to join our channel and stay updated with the latest news.

Next