ಮಹಾನಗರ: ಭಾರತ ಸರಕಾರ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ಮಂಗಳೂರು ಹಾಗೂ ಮಂಗಳೂರು ಸೈಕ್ಲಿಂಗ್ ಕ್ಲಬ್ ಇವುಗಳ ಆಶ್ರಯದಲ್ಲಿ “ವಿಶ್ವ ಪರಿಸರ ದಿನಾಚರಣೆ’ ನಗರದಲ್ಲಿ ನಡೆಯಿತು.
ಈ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಜಾಥಾಕ್ಕೆ ಮಹಾನಗರ ಪಾಲಿಕೆಯ ಮುಂಭಾಗದಿಂದ ಚಾಲನೆ ನೀಡಲಾಯಿತು.
ನೆಹರೂ ಯುವ ಕೇಂದ್ರ ಮಂಗಳೂರು ಇದರ ಜಿಲ್ಲಾ ಸಮನ್ವಯ ಅಧಿಕಾರಿ ರಘುವೀರ್ ಸೂಟರ್ ಪೇಟೆ ಕಾರ್ಯಕ್ರಮ ಉದ್ಘಾಟಿಸಿದರು. ವಾಯು ಮಾಲಿನ್ಯವನ್ನು ತಡೆಗಟ್ಟುವ ಜವಾಬ್ದಾರಿ ನಾಗರಿಕರಲ್ಲಿ ಮೂಡಬೇಕು ಮತ್ತು ಈ ಬಗ್ಗೆ ಪ್ರತಿಯೊಬ್ಬರು ಸ್ವಯಂ ಪ್ರೇರಿತವಾಗಿ ಪರಿಸರ ರಕ್ಷಣೆಗೆ ಮುಂದಾಗಬೇಕು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸಾರಿಗೆ ಉಪಯೋಗ ಮಾಡಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ಅಧ್ಯಕ್ಷ ಅನಿಲ್ ಶೇಟ್ ಅಧ್ಯಕ್ಷತೆ ವಹಿಸಿದ್ದರು. ನೆಹರೂ ಯುವ ಕೇಂದ್ರ ಮಂಗಳೂರು ಇದರ ಸ್ವಯಂಸೇವಕ ತಿಲಕ್ ಕುಮಾರ್ ಉಪಸ್ಥಿತರಿದ್ದರು.