ಮಣಿಪಾಲ: ಪರಿಸರ ದಿನದ ಅಂಗವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ಜೂ. 5ರಿಂದ 12ರ ವರೆಗೆ 40 ಬಗೆಯ ಸಸಿಗಳ 3,500 ಕೆ.ಜಿ. ಬೀಜವನ್ನು ಸಾರ್ವಜನಿಕರಿಗೆ ವಿತರಿಸಲಾಗುತ್ತದೆ ಎಂದು ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನೆಟಾಲ್ಕರ್ ತಿಳಿಸಿದರು.
ಉದಯವಾಣಿ ವತಿಯಿಂದ ಅರಣ್ಯ ಮತ್ತು ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಶನಿವಾರ ಉದಯ ವಾಣಿ ಮಣಿಪಾಲ ಕೇಂದ್ರ ಕಚೇರಿ ಯಲ್ಲಿ ಆಯೋಜಿಸಿದ್ದ ಪರಿಸರ ದಿನಾ ಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ವಿಶೇಷ ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ ಗ್ರಾ.ಪಂ., ತಾ. ಪಂ. ಮಟ್ಟ ದಲ್ಲಿ ಶಾಲೆ, ಕಾಲೇಜು, ವಿವಿಧ ಇಲಾಖೆ, ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆಯಲಿದೆ ಎಂದರು.
ಮುಂದಿನ ಪೀಳಿಗೆಗಾಗಿ ಉಳಿಸೋಣ
ಸರಕಾರ ಮತ್ತು ಮಾಧ್ಯಮಗಳ ಸಹಭಾಗಿತ್ವದಿಂದ ಪರಿಸರ ಸಂರಕ್ಷಣೆ ಕೆಲಸ ಪರಿಣಾಮಕಾರಿಯಾಗಿ ನಡೆಯಲು ಸಾಧ್ಯವಿದೆ. ಮುಂದಿನ ಪೀಳಿಗೆಗೆ ಕಾಡು, ನದಿ, ಬೆಟ್ಟ ಇವುಗಳನ್ನು ಇದ್ದ ಹಾಗೇ ಉಳಿಸಿಕೊಂಡು ಮುನ್ನಡೆಯೋಣ. ಹಿಂದಿನವರು ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸಿ ಬಿಟ್ಟು ಹೋದ ಕಾರಣ ನಮಗೆ ಸಿಕ್ಕಿದೆ. ಈ ಪ್ರಜ್ಞೆಯೊಂದಿಗೆ ವಿಶ್ವ ಪರಿಸರ ದಿನದ ಆಶಯ, ಕಾಳಜಿ ನಿರಂತರ ಇರಬೇಕು ಎಂದು ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಆಶಿಸಿದರು.
Related Articles
ತರಂಗ ವಾರಪತ್ರಿಕೆ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್. ಪೈ ಅವರು ಅಧ್ಯಕ್ಷತೆ ವಹಿಸಿ, ಮರಗಳಿಂದ ಮಳೆ, ಮಳೆಯಿಂದ ಬೆಳೆ, ಬೆಳೆಯಿಂದ ಬದುಕು-ಈ ಸೂತ್ರವನ್ನು ಮರೆತರೆ, ಒಂದು ಕೊಂಡಿ ತಪ್ಪಿದರೆ ಅಪಾಯ ಎಂದು ಎಚ್ಚರಿಸಿದರು.
ಕುಂದಾಪುರ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಭುವನೇಶ್ವರಿ ಪರಿಸರ ದಿನದ ಸಂದೇಶ ನೀಡಿದರು. ಉಡುಪಿ ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್ಯ ಉಪಸ್ಥಿತರಿದ್ದರು.
ಎಂಎಂಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ವಿನೋದ್ ಕುಮಾರ್ ಸ್ವಾಗತಿಸಿದರು. ಡಿಜಿಎಂ (ವ್ಯಾಪಾರ ಮತ್ತು ಅಭಿವೃದ್ಧಿ) ಸತೀಶ್ ಶೆಣೈ ವಂದಿಸಿದರು. ಎಚ್.ಆರ್. ವಿಭಾಗದ ವ್ಯವಸ್ಥಾಪಕಿ ಉಷಾರಾಣಿ ಕಾಮತ್ ನಿರೂಪಿಸಿದರು.
ಸಾರ್ವಜನಿಕರಿಗೆ ಸಸಿ ವಿತರಣೆ
ರಕ್ತಚಂದನ, ಮಹಾಗನಿ, ತೇಗ, ಪುನರ್ಪುಳಿ, ಲಿಂಬೆ, ಕಾಳು ಮೆಣಸಿನ ಬಳ್ಳಿ, ಹಲಸು, ಮಾವು, ನೆಲ್ಲಿ, ಸೀತಾಫಲ ಸಹಿತ ವಿವಿಧ ತಳಿಯ ಸಾವಿರಕ್ಕೂ ಅಧಿಕ ಸಸಿಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು. ಶಾಲಾ ಮಕ್ಕಳಿಗೆ ಸಸಿ ವಿತರಿಸುವ ಮೂಲಕ ಜಿಲ್ಲಾಧಿಕಾರಿ ಕೂರ್ಮಾ ರಾವ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು ಸಸಿ ಪಡೆಯಲು ಬೆಳಗ್ಗೆ 10 ಗಂಟೆಗೆ ಬಂದಿದ್ದು, ಮಧ್ಯಾಹ್ನ 12 ಗಂಟೆಯೊಳಗೆ ಎಲ್ಲ ಸಸಿಗಳನ್ನು ಪಡೆದುಕೊಂಡದ್ದು ವಿಶೇಷವಾಗಿತ್ತು. ಗಣ್ಯರು ಜತೆ ಸೇರಿ ಸಸ್ಯವನ್ನು ನೆಟ್ಟರು.