Advertisement
ಈ ಚಿತ್ರದೊಳಗೊಂದು ನೀತಿಪಾಠ ಕೂಡಾ ಇದೆ. ಆದರೆ, ಮನರಂಜನೆಯ ಹಾದಿಯಲ್ಲಿ ಅದನ್ನು ಹುಡುಕುವುದು ಪ್ರೇಕ್ಷಕನಿಗೆ ಬಿಟ್ಟ ವಿಚಾರ. ಇಷ್ಟು ದಿನ ಲವ್, ಬ್ರೇಕಪ್, ಕಲಹದ ಸುತ್ತ ಸಿನಿಮಾ ಮಾಡುತ್ತಿದ್ದ ಭಟ್ರಾ, ಈ ಬಾರಿ “ಪಂಚತಂತ್ರ’ದಲ್ಲಿ ಸಂಪೂರ್ಣ ಹೊಸದನ್ನು ಪ್ರಯತ್ನಿಸಿದ್ದಾರೆ ಮತ್ತು ಅದನ್ನು ನೀಟಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ ಕೂಡಾ.
Related Articles
Advertisement
ಈ ಸಿನಿಮಾದ ಹೈಲೈಟ್ ಎಂದರೆ ಅದು ಕಾರ್ ರೇಸ್. ಹಿರಿಯರ ಹಾಗೂ ಕಿರಿಯರ ನಡುವಿನ ಕಾರು ರೇಸ್ ಆರಂಭವಾಗುವ ಮೂಲಕ ಸಿನಿಮಾ ಇನ್ನೊಂದು ಮಗ್ಗುಲಿಗೆ ತೆರೆದುಕೊಳ್ಳುತ್ತದೆ. ಸಿನಿಮಾದ ನಿಜವಾದ ಜೀವಾಳ ಕೂಡಾ ಈ ರೇಸ್ ಎಂದರೆ ತಪ್ಲಲ್ಲ. ಕನ್ನಡಕ್ಕೆ ರೇಸ್, ಸ್ಫೋರ್ಟ್ಸ್ ಹಿನ್ನೆಲೆಯ ಸಿನಿಮಾಗಳು ಹೊಸದು. ಅದರಲ್ಲೂ ಕಾರ್ ರೇಸ್ ದೃಶ್ಯಗಳು ದೊಡ್ಡ ಮಟ್ಟದಲ್ಲಿ ಬಂದಂತಿಲ್ಲ.
ಆದರೆ, “ಪಂಚತಂತ್ರ’ ಚಿತ್ರ ಕಾರ್ ರೇಸ್‌ಗೆ ಹೆಚ್ಚಿನ ಮಹತ್ವ ನೀಡಿದೆ. ಸುಮಾರು 25 ನಿಮಿಷ ಕಾರು ರೇಸ್ ದೃಶ್ಯ ತುಂಬಿಕೊಂಡಿದೆ. ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುವಲ್ಲೂ ಈ ದೃಶ್ಯ ಯಶಸ್ವಿಯಾಗಿದೆ. ಪಕ್ಕಾ ಪ್ರೊಫೆಶನಲ್ ಆಗಿ ಈ ರೇಸ್ ಅನ್ನು ಚಿತ್ರೀಕರಿಸಿರುವುದು ಕೂಡಾ ಒಂದು ಹೈಲೈಟ್. ರೇಸ್ ಮಧ್ಯೆಯೂ ಭಟ್ಟರು ಮನರಂಜನೆಯನ್ನು ಬಿಟ್ಟುಕೊಟ್ಟಿಲ್ಲ.
ಹಾಗಾಗಿ, ಅಲ್ಲಲ್ಲಿ ರಂಗಾಯಣ ರಘು ಹಾಗೂ ಟೀಂನವರ ಮಜಾ ಸರಣಿ ಮುಂದುವರೆಯುತ್ತಲೇ ಇರುತ್ತದೆ. ಎಲ್ಲಾ ಓಕೆ, ರೇಸ್ ಯಾರು ಗೆಲ್ಲುತ್ತಾರೆ. ಅದೇ ಈ ಸಿನಿಮಾದ ಕುತೂಹಲ. ಅದನ್ನು ನೀವು ತೆರೆಮೇಲೆಯೇ ನೋಡಬೇಕು. ಒಂದು ಕಮರ್ಷಿಯಲ್ ಸಿನಿಮಾಕ್ಕೆ ಏನೇನು ಅಂಶಗಳು ಬೇಕೋ, ಅವೆಲ್ಲವನ್ನು ಅಚ್ಚುಕಟ್ಟಾಗಿ ಜೋಡಿಸಿದ್ದಾರೆ ಭಟ್ಟರು.
ಹಾಗಂತ ಯಾವುದನ್ನೂ ಅತಿ ಮಾಡಿಲ್ಲ. ಅದೇ ಕಾರಣದಿಂದ “ಪಂಚತಂತ್ರ’ ಮನರಂಜನೆಯಲ್ಲಿ ಹಿಂದೆ ಬೀಳುವುದಿಲ್ಲ. ಚಿತ್ರದಲ್ಲಿ ವಿಹಾನ್ ಹಾಗೂ ಸೋನಾಲ್ ನಾಯಕ-ನಾಯಕಿಯಾದರೂ, ನಟ ರಂಗಾಯಣ ರಘು ಅವರ ಪಾತ್ರ ಪ್ರಮುಖವಾಗಿದೆ. ಮತ್ತೂಮ್ಮೆ ಅವರಿಗೆ ತುಂಬಾ ಮಾತನಾಡುವ ಹಾಗೂ ಅವರ ಎಂದಿನ ಮ್ಯಾನರೀಸಂ ಅನ್ನು ಪ್ರದರ್ಶಿಸುವ ಅವಕಾಶ ಸಿಕ್ಕಿರುವುದರಿಂದ ಪಾತ್ರದಲ್ಲಿ ಮಿಂಚಿದ್ದಾರೆ.
ವಿಹಾನ್ ಹಾಗೂ ಸೋನಾಲ್ ಕೂಡಾ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅದರಲ್ಲೂ “ಶೃಂಗಾರದ ಹೊಂಗೆ ಮರ …’ ಹಾಡಲ್ಲಿ ಸಖತ್ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಲರಾಜುವಾಡಿ, ದೀಪಕ್ ರಾಜ್, ಅಕ್ಷರ, ಕರಿಸುಬ್ಬು ಸೇರಿದಂತೆ ಚಿತ್ರದಲ್ಲಿ ನಟಿಸಿದ ಪ್ರತಿಯೊಬ್ಬರು ಪಾತ್ರಕ್ಕೆ ಜೀವ ತುಂಬಿದ್ದಾರೆ. ಹರಿಕೃಷ್ಣ ಸಂಗೀತದ ಹಾಡುಗಳು ಇಷ್ಟವಾದರೆ, ಸುಜ್ಞಾನ್ ಛಾಯಾಗ್ರಹಣದಲ್ಲಿ “ಪಂಚತಂತ್ರ’ ಸುಂದರ.
ಚಿತ್ರ: ಪಂಚತಂತ್ರನಿರ್ಮಾಣ: ಹರಿಪ್ರಸಾದ್ ಜಯಣ್ಣ ಹಾಗೂ ಹೇಮಂತ್ ಪರಾಡ್ಕರ್
ನಿರ್ದೇಶನ: ಯೋಗರಾಜ್ ಭಟ್
ತಾರಾಗಣ: ವಿಹಾನ್, ಸೋನಾಲ್, ರಂಗಾಯಣ ರಘು, ಅಕ್ಷರ, ದೀಪಕ್ ಮತ್ತಿತರರು. * ರವಿಪ್ರಕಾಶ್ ರೈ