Advertisement

DK; 27ನೇ ವರ್ಷಕ್ಕೆ ರಾಜಕೀಯ ಪ್ರವೇಶ…ಟ್ರಬಲ್‌ ಶೂಟರ್‌ ಡಿಕೆಶಿ ರಾಜಕೀಯದ ಏಳು..ಬೀಳು

05:33 PM May 18, 2023 | Team Udayavani |

ಕಾಂಗ್ರೆಸ್‌ ಪಕ್ಷದ ಟ್ರಬಲ್‌ ಶೂಟರ್‌, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಉಪಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದ್ದಾರೆ. ವಿದ್ಯಾರ್ಥಿ ದಿಸೆಯಿಂದಲೇ ರಾಜಕೀಯ ಪ್ರವೇಶಿಸಿದ್ದ ಡಿಕೆ ಶಿವಕುಮಾರ್‌ ಅವರ ಕುರಿತ ರಾಜಕೀಯ ಪಯಣದ ಪರಿಚಯ ಇಲ್ಲಿದೆ..

Advertisement

ವಿದ್ಯಾರ್ಥಿ ಮುಖಂಡ:

ಕನಕಪುರ ತಾಲ್ಲೂಕು, ದೊಡ್ಡಆಲಹಳ್ಳಿ ಗ್ರಾಮದ ಕೆಂಪೇಗೌಡ ಹಾಗೂ ಗೌರಮ್ಮದಂಪತಿಯ ಪ್ರಥಮ ಪುತ್ರನಾಗಿ ಜನಿಸಿದ ಡಿ.ಕೆ. ಶಿವಕುಮಾರ್ (ಜನನ 15ನೇ ಮೇ 1962) ತಮ್ಮ ತಂದೆಯಿಂದಲೇ ನಾಯಕತ್ವದ ಗುಣಗಳನ್ನು ಪಡೆದುಕೊಂಡು ಬಂದರು.  18ನೇ ವಯಸ್ಸಿನಲ್ಲಿಯೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ವಿಭಾಗವಾದ NSUI ಗೆ ಸೇರ್ಪಡೆಗೊಂಡು ಅಲ್ಪಾವಧಿಯಲ್ಲಿಯೇ ಬೆಂಗಳೂರು ಜಿಲ್ಲೆಯ ಘಟಕದ ಅಧ್ಯಕ್ಷರಾಗಿ(1981-83) ಕಾರ್ಯನಿರ್ವಹಿಸಿದ್ದರು.

ತದನಂತರ ವಿದ್ಯಾಭ್ಯಾಸಕ್ಕೆಂದು ಬೆಂಗಳೂರು ಸೇರಿದ ಡಿ.ಕೆ. ಶಿವಕುಮಾರ್ ಆರ್.ಸಿ. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಯುವ ಕಾಂಗ್ರೆಸ್‍ಗೆ ಸೇರಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು.  ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್‍ ಅಧ್ಯಕ್ಷರಾಗಿ ಕನಕಪುರ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರಗಳನ್ನು ನಡೆಸಿಕೊಟ್ಟಿದ್ದರು.

Advertisement

1985ರಲ್ಲಿ ಸಾತನೂರು ವಿಧಾನಸಭಾಕ್ಷೇತ್ರದಲ್ಲಿ ಅಂದಿನ ಪ್ರಭಾವಿ ಜನತಾದಳ ಮುಖಂಡರಾದ ಹೆಚ್.ಡಿ. ದೇವೇಗೌಡ ಅವರ ವಿರುದ್ಧ ಕಾಂಗ್ರೆಸ್ ಪಕ್ಷದಲ್ಲಿ ಉತ್ತಮ ಅಭ್ಯರ್ಥಿ ಸಿಗುವುದು ದುರ್ಲಭವಾದಾಗ ಪಕ್ಷದ ವರಿಷ್ಠರ ಕಣ್ಣು ಡಿ.ಕೆ. ಶಿವಕುಮಾರ್ ಮೇಲೆ ಬಿತ್ತು.  ಹೀಗಾಗಿ ರಾಜಕಾರಣದ ಪರಿಚಯವೇ ಇಲ್ಲದಿದ್ದ ಡಿ.ಕೆ. ಶಿವಕುಮಾರ್ ಅವರನ್ನು ಹೆಚ್.ಡಿ. ದೇವೇಗೌಡ ಅವರ ವಿರುದ್ದ ಸ್ಪರ್ಧಿಸಲು ಪಕ್ಷದ ಅಭ್ಯರ್ಥಿಯನ್ನಾಗಿ ನಿಲ್ಲಿಸಲಾಯಿತು.  ಸಾಕಷ್ಟು ಪ್ರಬಲ ಪ್ರತಿರೋಧವನ್ನೇ ತೋರಿದ ಡಿ.ಕೆ. ಶಿವಕುಮಾರ್ ಚುನಾವಣೆಯಲ್ಲಿ ಹೆಚ್.ಡಿ. ದೇವೇಗೌಡರು ಅತ್ಯಂತ ಪ್ರಯಾಸದ ಜಯ ಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.

ವಿಧಾನಸಭಾ ಚುನಾವಣೆಯಾದ ಕೆಲವೇ ದಿನಗಳಲ್ಲಿ 1987ರಲ್ಲಿ ಅವರು ಸಾತನೂರು ಕ್ಷೇತ್ರದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಗೆ ಸದಸ್ಯರಾಗಿ ಆಯ್ಕೆಗೊಂಡರು.

1989ರಲ್ಲಿ ಅಖಿಲ ಭಾರತೀಯ ಕಾಂಗ್ರೆಸ್ ಪಕ್ಷದ ಮುಖೇನ ಸಾತನೂರು ವಿಧಾನ ಸಭಾಕ್ಷೇತ್ರದಿಂದ ಸ್ಪರ್ಧಿಯನ್ನಾಗಿ ನಿಲ್ಲಿಸಲಾಯಿತು. ಅಭೂತಪೂರ್ವ ರೀತಿಯಲ್ಲಿ, ಕ್ಷೇತ್ರದಲ್ಲಿ ಬೇರೂರಿದ ಜನತಾದಳದ ಪ್ರಾಬಲ್ಯವನ್ನು ಮೊಟಕುಗೊಳಿಸಿದ ಡಿ.ಕೆ. ಶಿವಕುಮಾರ್ ಅತ್ಯಧಿಕ ಮತಗಳಿಂದ ಜಯಗಳಿಸಿದರು.

1991ರಲ್ಲಿ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್‍ ಅವರು ಅನಾರೋಗ್ಯದ ಕಾರಣ ಮುಖ್ಯಮಂತ್ರಿ ಪದವಿಯನ್ನು ತ್ಯಜಿಸಬೇಕಾಗಿ ಬಂದಾಗ ಅವರ ಉತ್ತರಾಧಿಕಾರಿಯನ್ನಾಗಿ ಸಾರೆಕೊಪ್ಪ ಬಂಗಾರಪ್ಪ ಅವರನ್ನು ಸರ್ವಾನುಮತದಿಂದ ಆಯ್ಕೆಯಾಗುವಂತೆ ಮಾಡುವಲ್ಲಿ ಡಿ.ಕೆ. ಶಿವಕುಮಾರ್ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು. ಇದಕ್ಕೆ ಬಹುಮಾನದ್ಯೋತಕವಾಗಿ ಬಂಗಾರಪ್ಪನವರು ಈ ಯುವಕನನ್ನು ರಾಜ್ಯಮಟ್ಟದ ಸಚಿವರನ್ನಾಗಿ ಮಾಡಿ ಬಂಧಿಖಾನೆ ಖಾತೆ ನೀಡಿದ್ದರು.

ಆದರೂ ಕಾಂಗ್ರೆಸ್ ಪಕ್ಷದಲ್ಲಿದ್ದ ಹಲವು ವಿರೋಧಿಗಳ ರಾಜಕೀಯ ಪಿತೂರಿಯಿಂದಾಗಿ 1994ರಲ್ಲಿ ಪಕ್ಷದ ಟಿಕೆಟ್ ವಿರೋಧಿಸಲಾಯಿತು, ಧೃತಿಗೆಡದೆ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಜಯಗಳಿಸಿ ಜಯದ ಪರಂಪರೆ ಮುಂದುವರೆಸಿದರು.

2004ರಲ್ಲಿ ಡಿ.ಕೆ. ಶಿವಕುಮಾರ್ ಸಾತನೂರು ವಿಧಾನಸಭಾ ಕ್ಷೇತ್ರದಿಂದ 4ನೇ ಭಾರಿ ಆರಿಸಿ ಬಂದರೂ ಕೂಡ ಕಾಂಗ್ರೆಸ್ ಪಕ್ಷ ಬಹುಮತಗಳಿಸುವಲ್ಲಿ ವಿಫಲವಾಯಿತು. ಸ್ವಂತ ಶಕ್ತಿಯ ಮೇಲೆ ಸರ್ಕಾರ ರಚಿಸಲು ಅಗತ್ಯವಾದ ಬಹುಮತವಿಲ್ಲದ ಕಾರಣ ಬಿ.ಜೆ.ಪಿ. ಪಕ್ಷ ಅಧಿಕಾರಕ್ಕೇರದಂತೆ ತಡೆಯಲು ದೇವೇಗೌಡ ನೇತೃತ್ವದ ಪಕ್ಷವಾದ ಜೆ.ಡಿ.ಎಸ್.(ಜಾತ್ಯಾತೀತ) ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಯಿತು.  ಹೀಗೆ ರಾಜ್ಯದಲ್ಲಿ ಪ್ರಥಮ ಬಾರಿಗೆ ಉದಯಿಸಿದ ಕಾಂಗ್ರೆಸ್-ಜೆ.ಡಿ.ಎಸ್.(ಜಾ), ಸಮ್ಮಿಶ್ರ ಸರ್ಕಾರದಲ್ಲಿ ಡಿ.ಕೆ. ಶಿವಕುಮಾರ್ ಗೆ ಸ್ಥಾನವಿರಲಿಲ್ಲ, ಏಕೆಂದರೆ ಅವರು ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಯಾಗಬಾರದೆಂಬುದು ಶ್ರೀ ಹೆಚ್.ಡಿ. ದೇವೇಗೌಡರು ಷರತ್ತು ವಿಧಿಸಿದ್ದರು.

2006ರ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ವಿರುದ್ದ ರಾಜಕೀಯವಾಗಿ, ಸಾರ್ವಜನಿಕವಾಗಿ ಅಷ್ಟೇನು ಪರಿಚಿತರಲ್ಲದ ತೇಜಸ್ವಿನಿಗೌಡ ಅವರನ್ನು ನಿಲ್ಲಿಸಿ ಗೆಲ್ಲಿಸುವ ಮೂಲಕ ಡಿಕೆಶಿ 2004ರ ಸೇಡು ತೀರಿಸಿಕೊಂಡಿದ್ದರು.

1999ರಲ್ಲಿ ಎಸ್.ಎಂ. ಕೃಷ್ಣ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಗೊಂಡಾಗ ಡಿ.ಕೆ. ಶಿವಕುಮಾರ್ ಅವರ ಹಿಂದೆ ಬೆನ್ನೆಲುಬಾಗಿ ನಿಂತು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವ ರೀತಿಯಲ್ಲಿ ಜಯಗಳಿಸಿ ಸರ್ಕಾರ ರಚಿಸುವಲ್ಲಿ ಕಾರಣೀಭೂತರಾಗಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 132 ಸ್ಥಾನಗಳನ್ನು ಗಳಿಸಿ ಸ್ವಂತ ಬಲದ ಮೇಲೆ ಸರ್ಕಾರವನ್ನು ರಚಿಸಿತ್ತು.

1999ರಲ್ಲಿ ಡಿ.ಕೆ. ಶಿವಕುಮಾರ್ ಅವರಿಗೆ ಮತ್ತೊಮ್ಮೆ ಸಾತನೂರು ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿತ್ತು. ಈ ಭಾರಿ‌ ಅವರ ಎದುರಾಳಿ ಹೆಚ್.ಡಿ. ದೇವೇಗೌಡ ಅವರ ಪುತ್ರ ಹೆಚ್.ಡಿ. ಕುಮಾರಸ್ವಾಮಿ, ದೇವೇಗೌಡರು ರಾಜಕೀಯ ಸ್ಥಿತ್ಯಂತರದಿಂದ ಅಂದಿನ ಪ್ರಧಾನ ಮಂತ್ರಿಯಾಗಿದ್ದರು. ಅಂದು ಹೆಚ್.ಡಿ. ಕುಮಾರಸ್ವಾಮಿ ಚುನಾವಣೆಯಲ್ಲಿ ಪರಾಜಯಗೊಂಡಿದ್ದರು.  ಡಿ.ಕೆ. ಶಿವಕುಮಾರ್ ಸತತ 3ನೇ ಬಾರಿಗೆ ಗೆಲುವು ಸಾಧಿಸಿದ್ದರು. ಎಸ್.ಎಂ. ಕೃಷ್ಣ ಅವರು ಡಿಕೆಶಿಯನ್ನು ಕ್ಯಾಬಿನೆಟ್‍ ದರ್ಜೆ ಸಚಿವರನ್ನಾಗಿ ನೇಮಕ ಮಾಡಿದ್ದರು.

2002ರಲ್ಲಿ ನಗರಾಭಿವೃದ್ಧಿ ಖಾತೆ ಸಚಿವರಾಗಿ ರಾಜ್ಯ ನಗರಯೋಜನಾ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.  ಸಚಿವ ಸಂಪುಟದ ಉಪ ಸಮಿತಿಯ ಅಧ್ಯಕ್ಷರಾಗಿ ಯುವಕರನ್ನು ಸಂಘಟಿಸಿ ಜೀವನದಲ್ಲಿ ನೆಲೆಗೊಳಿಸುವ “ರಾಜೀವ್‍ಯುವ ಶಕ್ತಿ” ಸಂಘಟನೆಗಳು ರಾಜ್ಯದಲ್ಲಿ ತಲೆಎತ್ತಲು ಕಾರಣೀಭೂತರಾದರು.  ವಿಶ್ವದಲ್ಲಿಯೇ ಮೊದಲನೆಯದು ಎನ್ನಿಸಿದ ಸ್ತ್ರೀ ಶಕ್ತಿ ಸಂಘಟನೆಗಳನ್ನು ಆರಂಭಿಸುವಲ್ಲಿ ಡಿ.ಕೆ. ಶಿವಕುಮಾರ್ ಅವರ ಪಾಲು ಮಹತ್ವದ್ದು.

2008ರಲ್ಲಿ ಎಸ್.ಎಂ. ಕೃಷ್ಣ ರಾಜ್ಯಪಾಲ ಪದವಿ ತ್ಯಜಿಸಿ ಪುನರ್ ರಾಜಕಾರಣಕ್ಕೆ ಬರಬೇಕು ಎಂದು ಬಯಸಿದಾಗ ಅವರನ್ನು ಕರೆತಂದು ಮತ್ತೊಮ್ಮೆ ಕರ್ನಾಟಕದಿಂದ ರಾಜ್ಯಸಭೆಗೆ ಅವರನ್ನು ಆಯ್ಕೆಮಾಡುವಲ್ಲಿ ಡಿ.ಕೆ. ಶಿವಕುಮಾರ್ ಮಹತ್ವದ ಪಾತ್ರ ವಹಿಸಿದ್ದರು.  ಆನಂತರ ಎಸ್.ಎಂ. ಕೃಷ್ಣ ಕೇಂದ್ರ ಸಚಿವ ಸಂಪುಟಕ್ಕೆ ಸೇರಿ ವಿದೇಶಾಂಗ ವ್ಯವಹಾರಗಳ ಮಹತ್ವದ ಖಾತೆಯನ್ನು ನಿಭಾಯಿಸಿದ್ದರು.

ಕನಕಪುರಕ್ಷೇತ್ರದಲ್ಲಿ ವಿಡಿಯೋ ಕಾನ್ಫರೆನ್ಸ್ ಸೌಲಭ್ಯವನ್ನು ಸ್ಥಾಪಿಸಿ ಆ ಮೂಲಕ ಕ್ಷೇತ್ರದ ಮತದಾರರೊಂದಿಗೆ ನೇರಾ ನೇರಾ ಸಂಪರ್ಕ ಸಾಧಿಸಿದ ದೇಶದ ಪ್ರಥಮ ಶಾಸಕರೆಂಬ ಕೀರ್ತಿಗೆ ಭಾಜನರಾದವರು ಡಿ.ಕೆ. ಶಿವಕುಮಾರ್, ಸಾತನೂರು ಹಾಗೂ ಕನಕಪುರ ಕಛೇರಿಗಳಲ್ಲಿ ಸ್ಥಾಪಿಸಿದ ವಿಡಿಯೋ ಸಂಪರ್ಕ ಸೌಲಭ್ಯದಿಂದಾಗಿ ಗ್ರಾಮೀಣ ಮತದಾರರು ತಮ್ಮ ಶಾಸಕರೊಂದಿಗೆ ನೇರಾನೇರಾ ಮಾತುಕತೆ ನಡೆಸಿ ತಮ್ಮ ಕುಂದುಕೊರತೆಗಳನ್ನು ಹೇಳಿಕೊಂಡು ಅವುಗಳಿಂದ ಪರಿಹಾರ ಪಡೆದುಕೊಳ್ಳಲು ಸಾಧ್ಯವಾಯಿತು.ಇದರಿಂದ ಸಾರ್ವಜನಿಕರ ಅಪಾರ ಹಣ ಹಾಗೂ ವೇಳೆಯು ಅಪವ್ಯಯವಾಗುವುದು ತಪ್ಪಿತು. ಈ ಬಗ್ಗೆ ರಾಷ್ಟ್ರ ಮಟ್ಟದ ಪತ್ರಿಕೆಗಳು ಅವರ ಸಾಧನೆಯ ಬಗ್ಗೆ ಲೇಖನ ಪ್ರಕಟಿಸಿದ್ದವು.

2013ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಪೀಠಕ್ಕೆ ಮರಳಿ ಬಂದು ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಗಳಾಗಿ ಆಯ್ಕೆಯಾಗಿದ್ದರು. ಪಕ್ಷ ಅಧಿಕಾರಕ್ಕೆ ಬಂದ ಏಳೇ ತಿಂಗಳ ಅಲ್ಪಅವಧಿಯ ನಂತರ ಡಿ.ಕೆ. ಶಿವಕುಮಾರ್ ಸಿದ್ಧರಾಮಯ್ಯ ಸಂಪುಟದಲ್ಲಿ ಸಚಿವ ಸ್ಥಾನ ಪಡೆದುಕೊಂಡರು. ಇಂಧನ ಖಾತೆಯಂತಹ ಪ್ರಮುಖ ಖಾತೆಯನ್ನುಅವರಿಗೆ ನೀಡಲಾಗಿತ್ತು.

2018ರಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮೊದಲಿಗೆ ಜಲಸಂಪನ್ಮೂಲ ನಂತರ ಹೆಚ್ಚುವರಿಯಾಗಿ ಕನ್ನಡ ಮತ್ತು ಸಂಸ್ಕೃತಿ ಖಾತೆಯನ್ನು ಪಡೆದ ಡಿ.ಕೆ.ಶಿವಕುಮಾರ್‍ ಅವರು ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದ್ದರು.

ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷದ ಸಂಘಟನೆ:

ಇದಾದ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಖಾಲಿ ಇದ್ದ ನಾಯಕತ್ವದ ಸ್ಥಾನಕ್ಕೆ ಅಂದರೆ  2020ರ ಮಾರ್ಚ್‌ 11ರಂದು  ಸೋನಿಯಾ ಗಾಂಧಿ ಅವರು ಡಿ.ಕೆ. ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದ್ದರು. ಸುದೀರ್ಘ ಕಾಲದ ರಾಜಕೀಯದಲ್ಲಿ ಡಿಕೆಶಿ ಇದೀಗ ಉಪಮುಖ್ಯಮಂತ್ರಿ ಸ್ಥಾನದ ಗದ್ದುಗೆ ಏರಿದಂತಾಗಿದೆ.

ಶಿವಕುಮಾರ್‌ ಮತ್ತು ವಿವಾದ…ಕೇಸ್‌ ಗಳು…

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ 2018ರಲ್ಲಿ ಡಿಕೆ ಶಿವಕುಮಾರ್‌ ಮತ್ತು ನವದೆಹಲಿ ಕರ್ನಾಟಕ ಭವನದ ನೌಕರ ಎ.ಹನುಮಂತ್ಯ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿತ್ತು.

ತೆರಿಗೆ ವಂಚನೆ ಮತ್ತು ಹವಾಲಾ ಆರೋಪದ ಕುರಿತು ಆದಾಯ ತೆರಿಗೆ ಇಲಾಖೆ ಡಿಕೆ ಶಿವಕುಮಾರ್‌ ಮತ್ತು ಇತರರ ವಿರುದ್ಧ ಬೆಂಗಳೂರು ಕೋರ್ಟ್‌ ನಲ್ಲಿ ಆರೋಪ ಪಟ್ಟಿ ಸಲ್ಲಿಸಿತ್ತು. ಆದಾಯ ತೆರಿಗೆ ಇಲಾಖೆ, ಇ.ಡಿ ಸತತವಾಗಿ ದಾಳಿ ನಡೆಸುವ ಮೂಲಕ ಡಿಕೆಶಿ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಿತ್ತು.

ಅಕ್ರಮ ಹಣ ವರ್ಗಾವಣೆ ನಿಗ್ರಹ ಕಾಯ್ದೆಯಡಿಯಲ್ಲಿ ಡಿಕೆಶಿಯನ್ನು 2019ರ ಸೆಪ್ಟೆಂಬರ್‌ 3ರಂದು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಬಳಿಕ 2019ರ ಅಕ್ಟೋಬರ್‌ ನಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next