ಬೆಳಗಾವಿ: ಕಳೆದ ಎರಡು ವರ್ಷಗಳಿಂದ ನ್ಯಾಯಾಲಯದ ಡಿಕ್ರಿ/ರಾಜಿ ಡಿಕ್ರಿಯ ಆಧಾರದಲ್ಲಿ ಆರ್‌ಟಿಸಿ ದಾಖಲಾಗದೆ ಅತಂತ್ರದಲ್ಲಿರುವ ಸಾರ್ವಜನಿಕರ ಪರವಾಗಿ ವಿಧಾನ ಪರಿಷತ್‌ನ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಗಮನ ಸೆಳೆದಿದ್ದಾರೆ.
ಅನೇಕ ವರ್ಷಗಳಿಂದ ದ.ಕ. ಸಹಿತ ಉಡುಪಿ ಜಿಲ್ಲೆಯಲ್ಲಿ ನ್ಯಾಯಾಲಯದ ಡಿಕ್ರಿ ಆಧಾರ ದಲ್ಲಿ ಆರ್‌ಟಿಸಿ ದಾಖಲಾಗದೆ 8 ಸಾವಿರಕ್ಕೂ ಅಧಿಕ ಪ್ರಕರಣಗಳಿವೆ. ಈ ಕುರಿತು ಉದಯವಾಣಿ ಮುಖ್ಯ ಆವೃತ್ತಿಯಲ್ಲಿ ವರದಿ ಸಹಿತ ಬಿತ್ತರಿಸಿ ಸರಕಾರದ ಗಮನ ಸೆಳೆಯಲಾಗಿತ್ತು.
ಒಂದು ವರ್ಷಗಳ ಬಳಿಕ ಪುತ್ತೂರು ಪ್ರಕರಣ ಹಾಗೂ ಬೆಳ್ತಂಗಡಿ ಪ್ರಕರಣವೊಂದಕ್ಕೆ ಸಂಬಂಧಿಸಿ ಕಕ್ಷಿದಾರರು ರಾಜ್ಯ ಉಚ್ಚ ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿಗಳು 11ಇ ನಕ್ಷೆ ಕಡ್ಡಾಯವಲ್ಲ ಎಂದು ಆದೇಶ ನೀಡಿ ಪಹಣಿ ದಾಖಲಿಸಲು ನಿರ್ದೇಶನ ನೀಡಿತ್ತು.
ಇದನ್ನೂ ಓದಿ:ರೌಡಿಶೀಟರ್ ಗಳ ಪರೇಡ್; ಖಡಕ್ ಎಚ್ಚರಿಕೆ ಕೊಟ್ಟ ಕೊಪ್ಪಳ ಎಸ್ಪಿ!
ಆದರೆ ಉಳಿದ ಸಾವಿರಾರು ಮಂದಿ ಪಹಣಿ ದಾಖಲಾಗದೆ, ಗೃಹ ನಿರ್ಮಾಣ ಸಹಿತ ಪ್ರತಿಯೊಂದು ಹಂತದ ಯೋಜನೆಗೆ ತಡೆಯಾ ಗಿದೆ. ಈ ವಿಚಾರವನ್ನು ಕೆ. ಹರೀಶ್ ಕುಮಾರ್ ಅಧಿವೇಶನದಲ್ಲಿ ಪ್ರಸ್ತಾವಿಸಿದ್ದು, ಇದಕ್ಕೆ ಕಂದಾಯ ಸಚಿವ ಆರ್. ಅಶೋಕ್ ಅವರ ಪರ ಉತ್ತರಿಸಿದ ಸಭಾ ನಾಯಕ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಈ ಬಗ್ಗೆ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಕೋರ್ಟ್ ಡಿಕ್ರಿಯಂತೆ ಪಹಣಿ ದಾಖಲಿಸಲು ಇರುವ ತೊಡಕು ಸರಿಪಡಿಸುವಂತೆ ಬೆಳ್ತಂಗಡಿ ವಕೀಲರ ಸಂಘ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್ ಮತ್ತು ಕೆ. ಹರೀಶ್ ಕುಮಾರ್ ಅವರಿಗೆ ಮನವಿಯನ್ನೂ ಸಲ್ಲಿಸಿತ್ತು.