Advertisement

ಶಾಲಾ ದಾಖಲಾತಿಯಲಿ ತಂದೆ ಜಾತಿ ನಮೂದಿಸಿ

04:09 PM Sep 20, 2022 | Team Udayavani |

ಹಾವೇರಿ: ಶಾಲಾ ದಾಖಲಾತಿ ವೇಳೆ ಮಕ್ಕಳ ಜಾತಿ ನಮೂದಿಸುವಾಗ ಮಗುವಿನ ತಂದೆಯ ಜಾತಿ ಹಾಗೂ ಹಿನ್ನೆಲೆಯನ್ನು ಪರಿಶೀಲಿಸಿ ದೃಢೀಕರಿಸಿಕೊಂಡು ಶಾಲಾ ದಾಖಲಾತಿಗಳಲ್ಲಿ ನಮೂದಿಸಬೇಕೆಂದು, ಜಿಲ್ಲೆಯ ಎಲ್ಲ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಸುತ್ತೋಲೆ ಹೊರಡಿಸಲು ಡಿಡಿಪಿಐ ಅವರಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.

Advertisement

ಸ್ಥಳೀಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋ ಜನೆಗಳಡಿ (ವಿಶೇಷ ಘಟಕ/ಗಿರಿಜನ ಉಪಯೋಜನೆ) ಅನುಷ್ಠಾನ ಜಿಲ್ಲಾಮಟ್ಟದ ಮೇಲ್ವಿಚಾರಣಾ ಸಮಿತಿ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ನಿಯಂತ್ರಣ ಹಾಗೂ ಜಾಗೃತ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮೀಸಲಾತಿ ಸೌಲಭ್ಯದ ಹಿನ್ನೆಲೆಯಲ್ಲಿ ಶೈಕ್ಷಣಿಕ ದಾಖಲೆಗಳಲ್ಲಿ ಸುಳ್ಳು ಜಾತಿ ನಮೂದು ಮಾಡುತ್ತಿರುವ ಕುರಿತಂತೆ ಸಮಿತಿ ಸದಸ್ಯರು ದೂರುಗಳನ್ನು ಸಲ್ಲಿಸಿದ್ದಾರೆ. ಈ ರೀತಿ ಆಗದಂತೆ ಎಚ್ಚರ ವಹಿಸಲು ಸೂಚನೆ ನೀಡಿದರು.

ಜಾಗೃತಿ ಸಮಿತಿಯ ಅಧಿಕಾರೇತರ ಸದಸ್ಯರು ಈ ಜಿಲ್ಲೆಯಲ್ಲಿ ಬೇಡ ಜಂಗಮ ಹಾಗೂ ಇತರ ಜಾತಿಯ ಕೆಲವರು ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಪಡೆಯುತ್ತಿದ್ದಾರೆ. ಶಾಲಾ ದಾಖಲಾತಿಗಳಲ್ಲಿ ಸುಳ್ಳು ಜಾತಿ ನಮೂದಿಸುತ್ತಿದ್ದಾರೆ. ಖಾಸಗಿ ಶಾಲೆಯೊಂದರಲ್ಲಿ ಹೆಚ್ಚಾಗಿ ಈ ರೀತಿಯ ಪ್ರಕರಣಗಳು ನಡೆಯುತ್ತಿರುವ ಕುರಿತಂತೆ ಸಭೆಯಲ್ಲಿ ದೂರಿದ್ದಾರೆ. ಹಾಗಾಗಿ, ಇಂತಹ ಪ್ರಕರಣಗಳು ನಡೆದಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಹಾವೇರಿ ನಗರದ ವಾಲ್ಮೀಕಿ ಭವನದ ಮುಂದುವರಿದ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಯಿಂದಲೇ ಕೈಗೊಳ್ಳುವಂತೆ ಸೂಚನೆ ನೀಡಿದರು.

Advertisement

ಅಂದಲಗಿ ಗ್ರಾಮ ಠಾಣಾ ಪ್ರದೇಶದಲ್ಲಿ ನಿವೇಶನ ರಹಿತರಿಗೆ ನಿವೇಶನ ರಚಿಸಲು ಅನುಕೂಲವಾಗುವಂತೆ ಸರ್ವೇ ಮಾಡಿ ಹದ್ದುಬಸ್ತ್ ಕಾರ್ಯ ಕೈಗೊಂಡು, ಮುಂದಿನ ಜಾಗೃತಿ ಸಮಿತಿ ಸಭೆಯೊಳಗೆ ಸೂಕ್ತ ಕ್ರಮ ಕೈಗೊಳ್ಳಲು ಸವಣೂರ ಉಪವಿಭಾಗಾಧಿಕಾರಿಗಳಿಗೆ ಜವಾಬ್ದಾರಿ ನೀಡಿದರು.

ಅಲೆಮಾರಿ ಜನಾಂಗಗಳಿಗೆ ವಸತಿ ಸೌಲಭ್ಯ ನೀಡಲು ಅಗತ್ಯ ದಾಖಲಾತಿಗಳನ್ನು ಸಂಗ್ರಹಿಸಿ ರಾಜೀವಗಾಂಧಿ ಪೋರ್ಟಲ್‌ನಲ್ಲಿ ನಮೂದಿಸಲು ಹಾಗೂ ನಿವೇಶನ ರಹಿತರಗೆ ಖಾಸಗಿ ಜಮೀನು ಖರೀದಿಸುವ ಕುರಿತಂತೆ ಪರಿಶೀಲನೆ ನಡೆಸಲು ನಿಗಮದ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.

ಈಗಾಗಲೇ 91 ಅರ್ಜಿಗಳು ಸ್ವೀಕೃತಗೊಂಡಿದ್ದು, 71 ಜನರ ದಾಖಲೆಗಳನ್ನು ಪೋರ್ಟಲ್‌ನಲ್ಲಿ ನಮೂದಿಸುವುದಾಗಿ ಮಾಹಿತಿ ನೀಡಿದರು. ಪರಿಶಿಷ್ಟ ವರ್ಗದ 700 ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಪ್ರೋತ್ಸಾಹಧನ ಬಿಡುಗಡೆಯಾಗಿಲ್ಲ. ಈ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ತ್ವರಿತ ಬಿಡುಗಡೆಗೆ ಸದಸ್ಯರು ಮನವಿ ಮಾಡಿಕೊಂಡರು. ಸಮುದಾಯದೊಳಗೆ ವಿವಾಹವಾದ ಪ್ರಕರಣಗಳಲ್ಲಿ ಪ್ರೋತ್ಸಾಹಧನ ನೀಡಬೇಕು. ಕೋವಿಡ್‌ನಿಂದ ಮೃತರಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವರಿಗೆ ಪರಿಹಾರ ನೀಡುವಂತೆ ಮನವಿ ಮಾಡಿದರು.

ಸವಣೂರ ತಾಲೂಕಿನ ಕಳಗೊಂಡ ಮತ್ತು ಅಲ್ಲಿಪುರ ಗ್ರಾಮದಲ್ಲಿ ಮಳೆ ನೀರಿನಿಂದ ಪರಿಶಿಷ್ಟರ ಕಾಲೋನಿಯಲ್ಲಿ ನೀರು ತುಂಬಿದೆ. ನೀರನ್ನು ಹೊರಹಾಕುವ ಕುರಿತಂತೆ ಸದಸ್ಯರು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ, ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಲು ಉಪವಿಭಾಗಾಧಿಕಾರಿಗಳಿಗೆ ಸೂಚನೆ ನೀಡಿದರು.

ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ದೌರ್ಜನ್ಯ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ಕುರಿತಂತೆ ಫಾಲೋವಪ್‌ ಮಾಡಿ. ಗಳಗನಾಥ, ಮೇವುಂಡಿ ದಲಿತರ ಸಮಸ್ಯೆಗಳ ಕುರಿತಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವಂತೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಹಮ್ಮದ್‌ ರೋಷನ್‌, ಅಧಿಕಾರೇತರ ಸದಸ್ಯರಾದ ರಮೇಶ ಆನವಟ್ಟಿ, ಮುತ್ತುರಾಜ ಮಾದರ, ಶ್ರೀಧರ ಆನವಟ್ಟಿ, ಶಿದ್ಧಲಿಂಗ ಹೊನ್ನಪ್ಪ, ಹೊನ್ನಪ್ಪ ಯಲಿಗಾರ, ಪಕ್ಕೀರೇಶ ಕಾಳಿ, ಎನ್‌.ಎನ್‌.ಗಾಳೆಮ್ಮನವರ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸೋಮಶೇಖರ್‌ ಮುಳ್ಳಳಿ, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳೆಗಡ್ಡಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ ಹೆಬ್ಬಳ್ಳಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರದೀಪ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಎಚ್‌.ಎಸ್‌.ರಾಘವೇಂದ್ರಸ್ವಾಮಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|ಪಿ.ಆರ್‌.ಹಾವನೂರ, ಕೃಷಿ ಇಲಾಖೆ ಉಪನಿರ್ದೇಶಕ ಹುಲಿರಾಜು, ಡಿವೈಎಸ್ಪಿ ಶಿವಾನಂದ ಚಲವಾದಿ, ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಅಣ್ಣಯ್ಯ ಇತರರಿದ್ದರು.

ರಾಣಿಬೆನ್ನೂರ ತಾಲೂಕಿನ ಚಿಕ್ಕಮಾದೂರ ಗ್ರಾಮದಲ್ಲಿ ಪರಿಶಿಷ್ಟರ ಜಮೀನಿನಲ್ಲಿ ಕೃಷಿ ಇಲಾಖೆ ಗೋದಾಮು ನಿರ್ಮಾಣ ಮಾಡಿದ್ದರೆ, ಈ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು. ಪರಿಶಿಷ್ಟರ ಮಾಲಿಕತ್ವದಲ್ಲಿದ್ದರೆ ಪರಿಹಾರ ನೀಡಬೇಕು. ಇಲ್ಲ ಕಟ್ಟಡ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು.  –ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next