ಬೆಂಗಳೂರು: ರೈತರು ಎಷ್ಟೇ ಪ್ರಮಾಣದ ಬಿತ್ತನೆ ಬೀಜ ಉತ್ಪಾದಿಸಿದರೂ ಅದನ್ನು ಯೋಗ್ಯ ಬೆಲೆಗೆ ಖರೀದಿ ಮಾಡುವ ಭರವಸೆಯನ್ನು ಬೀಜ ನಿಗಮ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ರಾಜ್ಯ ಬೀಜ ನಿಗಮ ಹಾಗೂ ಅಂತಾರಾಷ್ಟ್ರೀಯ ಪುಷ್ಪ ಹರಾಜು ನಿಗಮ, ಹೆಬ್ಟಾಳದಲ್ಲಿ ಸೋಮವಾರ ನೂತನವಾಗಿ ನಿರ್ಮಿಸಿರುವ ಬೀಜ ಭವನ, ಪುಷ್ಪ ಸ್ಟುಡಿಯೋ ಮತ್ತು ತರಬೇತಿ ಕೇಂದ್ರ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿ ಅವರು, ರೈತರು ಎಷ್ಟು ಪ್ರಮಾಣದ ಬಿತ್ತನೆ ಬೀಜ ಉತ್ಪಾದಿಸಿದರೆ, ಅಷ್ಟನ್ನು ತಾವು ಖರೀದಿಸುವುದಾಗಿ ಬೀಜ ನಿಗಮ ಭರವಸೆ ನೀಡಿ, ಖರೀದಿಸಿದರೆ, ರೈತರು ಉತ್ತಮ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಹಿಂದೆ ರೈತರು ತಮಗೆ ಬೇಕಾದ ಗುಣಮಟ್ಟದ ಬಿತ್ತನೆ ಬೀಜಗಳನ್ನು ತಾವೇ ಉತ್ಪಾದನೆ ಮಾಡಿಟ್ಟುಕೊಳ್ಳುತ್ತಿದ್ದರು. ಈಗ ಖಾಸಗಿ ಸಂಸ್ಥೆಗಳು ಮತ್ತು ಸರ್ಕಾರ ಪೂರೈಸುವ ಬಿತ್ತನೆ ಬೀಜಗಳನ್ನು ಅವಲಂಬಿಸುವ ಸ್ಥಿತಿ ಇದೆ. ಖಾಸಗಿ ಸಂಸ್ಥೆಗಳ ಬಿತ್ತನೆ ಬೀಜ ಕಳಪೆ ಮತ್ತು ದುಬಾರಿಯೂ ಆಗಿರುತ್ತದೆ. ಇದಕ್ಕೆ ಕಡಿವಾಣ ಹಾಕಬೇಕು. ಅದಕ್ಕಾಗಿ ರೈತರು ತಾವಾಗಿಯೇ ಬಿತ್ತನೆ ಬೀಜ ಉತ್ಪಾದನೆ ಮಾಡಿಕೊಳ್ಳಲು ಕೃಷಿ ಇಲಾಖೆ ಮತ್ತು ಬೀಜ ನಿಗಮ ಪ್ರೋತ್ಸಾಹ ನೀಡಬೇಕು ಎಂದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿತ್ತನೆ ಬೀಜಕ್ಕಾಗಿ ಹೋರಾಟ ನಡೆಸಿದ ರೈತರ ಮೇಲೆ ಗೋಲಿಬಾರ್ ನಡೆದಿತ್ತು. ಕೃಷಿ ಸಚಿವ ಕೃಷ್ಣ ಭೈರೇಗೌಡರು, ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೃಷಿ ಪರಿಕರಗಳನ್ನು ಪೂರೈಸಲು ಕ್ರಮ ಕೈಗೊಂಡಿದ್ದರಿಂದ ನಾಲ್ಕೂವರೆ ವರ್ಷದಲ್ಲಿ ರೈತರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಹಾಗಾಗಿ ಕೃಷ್ಣಭೈರೇಗೌಡ ಮತ್ತು ಅವರ ಅಧಿಕಾರಿ ವರ್ಗದವರಿಗೆ ಅಭಿನಂದನೆಗಳು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಚಿವರಾದ ಕೆ.ಜೆ.ಜಾರ್ಜ್, ಕೃಷ್ಣ ಬೈರೇಗೌಡ, ವಿಧಾನ ಪರಿಷತ್ ಸದಸ್ಯ ಬೈರತಿ ಸುರೇಶ್, ಶಾಸಕ ರಾಜಶೇಖರ ಪಾಟೀಲ ಹುಮ್ನಾಬಾದ್, ಕೃಷಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಮತ್ತಿತರರು ಉಪಸ್ಥಿತರಿದ್ದರು.
“ಪ್ರಯೋಗಾಲಯದಿಂದ ಜಮೀನಿಗೆ’ ಎಂಬ ಹಳೆಯ ಘೋಷಣೆ ಬದಲಿಗೆ, “ಜಮೀನಿಂದ ಪ್ರಯೋಗಾಲಯದತ್ತ’ ಎಂಬ ಪರಿಕಲ್ಪನೆ ಜಾರಿಯಾಗಬೇಕು. ಲಾಭದಾಯಕ ಬೆಳೆ ಬೆಳೆಯಲು ಕೃಷಿ ವಿವಿ, ಕೃಷಿ ಇಲಾಖೆ ರೈತರಿಗೆ ಸಲಹೆ ನೀಡಬೇಕು. ಆಗ ರೈತರು ಕೂಡ ಆರ್ಥಿಕಾಭಿವೃದ್ಧಿ ಹೊಂದಲು ಸಾಧ್ಯ.
-ಸಿದ್ದರಾಮಯ್ಯ, ಮುಖ್ಯಮಂತ್ರಿ