Advertisement

ಹಿಂದೂ ಧರ್ಮ ರಕ್ಷಿಸಲು ಆಂಧ್ರದಲ್ಲಿ 3 ಸಾವಿರ ದೇವಾಲಯಗಳ ನಿರ್ಮಾಣ

06:17 PM Mar 01, 2023 | Team Udayavani |

ಅಮರಾವತಿ: ಆಂಧ್ರಪ್ರದೇಶದ ಪ್ರತಿ ಜಿಲ್ಲೆಗೂ ದೇವಸ್ಥಾನ ಇರುವುದನ್ನು ಖಚಿತಪಡಿಸಿಕೊಳ್ಳಲು ಉದ್ದೇಶಿಸಿರುವ ಸರಕಾರ, ರಾಜ್ಯದಲ್ಲಿ ದೇಗುಲಗಳ ನಿರ್ಮಾಣವನ್ನು ದೊಡ್ಡ ರೀತಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ನಿರ್ದೇಶನದ ಮೇರೆಗೆ, ಹಿಂದೂ ಧರ್ಮವನ್ನು ರಕ್ಷಿಸಲು ಮತ್ತು ಪ್ರಚಾರ ಮಾಡಲು ಈ ಉಪಕ್ರಮವನ್ನು ಘೋಷಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಕೊಟ್ಟು ಸತ್ಯನಾರಾಯಣ ಹೇಳಿದ್ದಾರೆ.

Advertisement

“ಹಿಂದೂ ನಂಬಿಕೆಯನ್ನು ಬೃಹತ್ ಪ್ರಮಾಣದಲ್ಲಿ ರಕ್ಷಿಸಲು ಮತ್ತು ಪ್ರಚಾರ ಮಾಡಲು, ದುರ್ಬಲ ವರ್ಗಗಳ ಪ್ರದೇಶಗಳಲ್ಲಿ ಹಿಂದೂ ದೇವಾಲಯಗಳ ನಿರ್ಮಾಣವನ್ನು ಪ್ರಾರಂಭಿಸಲಾಗಿದೆ” ಎಂದು ಧಾರ್ಮಿಕ ದತ್ತಿ ಸಚಿವರೂ ಆಗಿರುವ ಸತ್ಯನಾರಾಯಣ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಿರುಮಲ ತಿರುಪತಿ ದೇವಸ್ಥಾನದ ಶ್ರೀ ವಾಣಿ ಟ್ರಸ್ಟ್ ದೇವಾಲಯಗಳ ನಿರ್ಮಾಣಕ್ಕೆ ತಲಾ 10 ಲಕ್ಷ ರೂ. ವಿನಿಯೋಗಿಸಲಿದೆ. 1,330 ದೇವಾಲಯಗಳ ನಿರ್ಮಾಣ ಪ್ರಾರಂಭದ ಜೊತೆಗೆ, ಇನ್ನೂ 1,465 ಈ ಪಟ್ಟಿಗೆ ಸೇರಿಸಲಾಗಿದೆ. ಅದೇ ರೀತಿ ಕೆಲವು ಶಾಸಕರ ಮನವಿ ಮೇರೆಗೆ ಇನ್ನೂ 200 ದೇಗುಲಗಳನ್ನು ನಿರ್ಮಿಸಲಾಗುತ್ತಿದೆ. ಉಳಿದ ದೇವಸ್ಥಾನಗಳ ನಿರ್ಮಾಣವನ್ನು ಇತರೆ ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ದತ್ತಿ ಇಲಾಖೆಯ ಅಧೀನದಲ್ಲಿ 978 ದೇವಸ್ಥಾನಗಳ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಪ್ರತಿ 25 ದೇವಸ್ಥಾನಗಳ ಕಾಮಗಾರಿಯನ್ನು ಒಬ್ಬ ಸಹಾಯಕ ಎಂಜಿನಿಯರ್‌ಗೆ ವಹಿಸಲಾಗಿದೆ. ಕೆಲವು ದೇವಾಲಯಗಳ ಪುನರುಜ್ಜೀವನಕ್ಕಾಗಿ ಮತ್ತು ದೇವಾಲಯಗಳಲ್ಲಿ ಧಾರ್ಮಿಕ ಕ್ರಿಯೆಗಳನ್ನು ನಡೆಸಲು 270 ಕೋಟಿ ರೂ. ಸಿಜಿಎಫ್ ನಿಧಿಯಲ್ಲಿ 238 ಕೋಟಿ ರೂ.ಹಣವನ್ನು ಬಿಡುಗಡೆ ಮಾಡಲಾಗಿದೆ.ಅದೇ ರೀತಿ, ಪ್ರತಿ ದೇವಸ್ಥಾನಕ್ಕೆ 5,000 ರೂ ದರದಲ್ಲಿ ಧಾರ್ಮಿಕ ಕ್ರಿಯೆಗಳಿಗೆ (ದೂಪ ದೀಪ ನೈವೇದ್ಯಂ) ಹಣಕಾಸು ವರ್ಷದಲ್ಲಿ 28 ಕೋಟಿ ರೂ ಮೀಸಲಿಟ್ಟಿದ್ದು, ಈಗಾಗಲೇ 15 ಕೋಟಿ ರೂ. ನೀಡಲಾಗಿದೆ.

“ದೂಪ ದೀಪ ಯೋಜನೆಯಡಿ, 2019 ರ ವೇಳೆಗೆ ಕೇವಲ 1,561 ದೇವಾಲಯಗಳನ್ನು ನೋಂದಾಯಿಸಲಾಗಿದೆ, ಅದು ಈಗ 5,000 ಕ್ಕೆ ವಿಸ್ತರಿಸಿದೆ” ಎಂದು ಸತ್ಯನಾರಾಯಣ ವಿವರಗಳನ್ನು ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next