Advertisement

ಮಕ್ಕಳನ್ನು ಶಾಲೆಗೆ ಸೇರಿಸಲು ಪೋಷಕರ ಜಿಜ್ಞಾಸೆ

09:05 PM Apr 28, 2022 | Team Udayavani |

ಬೆಂಗಳೂರು:  ರಾಜ್ಯದಲ್ಲಿ ಕೊರೊನಾ 4ನೇ ಅಲೆ ಆರಂಭವಾಗುತ್ತಿರುವ ಮುನ್ಸೂಚನೆ ನೀಡಿರುವುದು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಪ್ರವೇಶದ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆಯಿದೆ.

Advertisement

ಒಂದೆಡೆ ಶಿಕ್ಷಣ ಸಚಿವರು ನಾಲ್ಕನೇ ಅಲೆ ಮುನ್ಸೂಚನೆ ಇದ್ದರೂ ಮೇ 16 ರಿಂದ ಶಾಲೆ ಆರಂಭ ಎಂದು ಹೇಳಿದ್ದಾರೆ. ಮತ್ತೂಂದೆಡೆ ಆರೋಗ್ಯ ಸಚಿವರು ಜೂನ್‌ನಲ್ಲಿ ನಾಲ್ಕನೇ ಅಲೆ ಆರಂಭವಾದರೆ ಆಗಸ್ಟ್‌ವರೆಗೂ ಇರಲಿದೆ ಎಂದು ಅಂದಾಜಿಸಲಾಗಿ‌ದೆ ಎಂದು ತಿಳಿಸಿದ್ದಾರೆ. ಇದು ಪೋಷಕರಲ್ಲಿ  ಮಕ್ಕಳನ್ನು ಶಾಲೆಗೆ ಸೇರಿಸಬೇಕೇ ಬೇಡವೇ ಎಂಬ ಗೊಂದಲ ಮೂಡಿಸಿದೆ.

ಈಗಾಗಲೇ ಕಳೆದ ಎರಡು ವರ್ಷಗಳಲ್ಲಿ ಆನ್‌ಲೈನ್‌ ತರಗತಿಗಳು ಮಾತ್ರ ನಡೆಯುವಂತಾಗಿದ್ದು ಈ ವರ್ಷವೂ ಅದೇ ಆದರೆ ಹೇಗೆ ಎಂಬ ಚಿಂತೆಯಲ್ಲಿರುವ ಪೋಷಕರು, ಮಕ್ಕಳನ್ನು ಶಾಲೆಗೆ ಸೇರಿಸಬೇಕೋ ಬೇಡವೋ ಎಂಬ ಜಿಜ್ಞಾಸೆಗೆ ಒಳಗಾಗಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸಿ ಯಥಾಪ್ರಕಾರ ಶುಲ್ಕವನ್ನು ಪಾವತಿಸಲಾಗಿದೆ. ಆದರೆ, ಮಕ್ಕಳನ್ನು ಮನೆಯಲ್ಲಿಯೇ ಇರಿಸಿ ಆನ್‌ಲೈನ್‌ ಮೂಲಕ ಬೋಧನೆ ಮಾಡಲಾಗಿದೆ. ಇದರಿಂದ ಮಕ್ಕಳು ಕಲಿಕೆಯಲ್ಲಿ ಹಿಂದೆ ಬಿದ್ದಿದ್ದು, ಮತ್ತೆ ಅದನ್ನೇ ಈ ವರ್ಷವೂ ಮುಂದುವರಿಸುವುದಾದರೆ ಶಾಲೆಗೆ ಏಕೆ ಸೇರಿಸಬೇಕು ಎಂಬುದು ಪೋಷಕರ ವಾದವಾಗಿದೆ.

4ನೇ ಅಲೆಯು ಜೂನ್‌ನಿಂದ ಸೆಪ್ಟೆಂಬರ್‌ ಅಥವಾ ಅಕ್ಟೋಬರ್‌ ವರೆಗೂ ಇರಬಹುದು ಎಂದು ಅಂದಾಜಿಸಲಾಗಿದೆ. ಇದರ ಪರಿಣಾಮ, ಸಂಪೂರ್ಣವಾಗಿ ಶೈಕ್ಷಣಿಕ ವರ್ಷದ ಮೇಲೆ ಬೀರಲಿದೆ. ಮೊದಲ ಅರ್ಧ ವರ್ಷ ಶಾಲೆ ನಡೆಯಲಿಲ್ಲವೆಂದರೆ, ನಂತರ ಅರ್ಧ ವರ್ಷ ನಡೆಯುವುದು ಅನುಮಾನ. ಹೀಗಾಗಿ, ಈ ವರ್ಷವೂ ಸಂಪೂರ್ಣ ಹಾಳಾದಂತೆಯೇ ಆಗುತ್ತದೆ. ಹೀಗಿದ್ದಮೇಲೆ ಶಾಲೆಗೆ ಶುಲ್ಕವನ್ನೇಕೆ ಪಾವತಿಸಬೇಕು ಎಂದು ಪ್ರಶ್ನಿಸುತ್ತಾರೆ ಪೋಷಕರಾದ ಲಕ್ಷ್ಮಣ್‌.

Advertisement

ನಿರಂತರ ಕಲಿಕೆಯಿಂದ ಮಕ್ಕಳು ವಂಚಿತ :

ಕಳೆದ ಎರಡು ವರ್ಷಗಳಿಂದ ಶಾಲೆಗಳು ನಡೆಯದಿರುವುದರಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿವೆ. ದಾಖಲಾತಿಗಳು ಅರ್ಧಂಬರ್ಧವಾಗಿವೆ. ಇಂತಹ ಸಮಯದಲ್ಲಿ ಮತ್ತೆ ಕೊರೊನಾ 4ನೇ ಅಲೆ ಬರುತ್ತಿದೆ ಎಂದು ಸರ್ಕಾರ ಹೇಳಿರುವುದರಿಂದ ಪಾಲಕ-ಪೋಷಕರು ಚಿಂತೆಗೆ ಒಳಗಾಗಿದ್ದಾರೆ. ಪಠ್ಯಪುಸ್ತಕ, ಸಮವಸ್ತ್ರಗಳನ್ನು ಖರೀದಿಸಬೇಕಾ ಅಥವಾ ಬೇಡವೇ ಎಂಬ ಗೊಂದಲದಲ್ಲಿದ್ದಾರೆ. ಪ್ರತಿ ವರ್ಷವೂ ಇದೇ ಆಗುತ್ತಿದೆ. ಮಕ್ಕಳು ನಿರಂತರ ಕಲಿಕೆಯಿಂದ ವಂಚಿತರಾಗುತ್ತಿದ್ದಾರೆ ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್‌) ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಶುಲ್ಕ ಪಾವತಿಸದ ಪೋಷಕರು :

4ನೇ ಅಲೆ ಎನ್ನುತ್ತಿದ್ದಂತೆ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ವರ್ಷವೂ ಕೊರೊನಾ ಬಂದರೆ ಮಕ್ಕಳನ್ನು ಶಾಲೆಗೆ ಸೇರಿಸದಿರುವುದು ಉತ್ತಮ ಎಂಬ ಮನಸ್ಥಿತಿಯಲ್ಲಿ ಯೋಚನೆ ಮಾಡುತ್ತಿದ್ದಾರೆ. ಇದು ಖಾಸಗಿ ಶಾಲೆಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ 3 ಅಲೆಯಲ್ಲಿ ಮಕ್ಕಳಿಗೆ ಯಾವುದೇ ಪರಿಣಾಮ ಬೀರಿಲ್ಲ. 4ನೇ ಅಲೆ ಕೂಡ ಮಕ್ಕಳಿಗೆ ತೊಂದರೆಯಾಗದ ರೀತಿಯಲ್ಲಿ ಸರ್ಕಾರ ಎಚ್ಚರಿಕೆ ವಹಿಸಬೇಕು. ಅನಿವಾರ್ಯವಾದರೆ ಮಾತ್ರ ಶಾಲೆಗಳನ್ನು ಮುಚ್ಚಬೇಕು. ಇಲ್ಲವಾದಲ್ಲಿ ಶಾಲೆಗಳು ನಡೆಯುವಂತೆ ನೋಡಿಕೊಳ್ಳಬೇಕು.ಡಿ. ಶಶಿಕುಮಾರ್‌, ಕ್ಯಾಮ್ಸ್‌ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next