Advertisement

ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಿ: ಸಚಿವ ಬಿ.ಸಿ. ನಾಗೇಶ್‌

06:03 PM Jan 20, 2022 | Team Udayavani |

ತಿಪಟೂರು: ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರಬೇಕು. ಪ್ರತಿ ಮಗುವಿಗೂ ಉತ್ತಮ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಸರ್ಕಾರಗಳು ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದ್ದು, ಪೋಷಕರು ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ದಾಖಲಿಸಿ ಸರ್ಕಾರಿ ಶಾಲೆ ಉಳಿಸಿ-ಬೆಳೆಸಬೇಕು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದರು.

Advertisement

ತಾಲೂಕಿನ ಹೊನ್ನವಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಬಾರ್ಡ್‌ ಯೋಜನೆಯಡಿ ನಿರ್ಮಾಣವಾದ ಕೊಠಡಿ ಹಾಗೂ ಪ್ರಯೋಗಾಲಯ ಉದ್ಘಾಟನೆ ಹಾಗೂ ಕರ್ನಾಟಕ ಪಬ್ಲಿಕ್‌ ಶಾಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಮಕ್ಕಳ ಶಿಕ್ಷಣಕ್ಕೆ ಇಲ್ಲಿನ ದಾನಿಗಳು ಭೂಮಿ ದಾನ ಮಾಡಿದ್ದು, ಸರ್ಕಾರದ ಅನುದಾನದಲ್ಲಿ ಶಾಲೆ, ಕಾಲೇಜು ತೆರೆಯಲಾಗಿದೆ. ಎಲ್‌ಕೆಜಿ ಯಿಂದ ದ್ವಿತೀಯ ಪಿಯುಸಿವರೆಗೂ
ಒಂದೇ ಕಡೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿದ್ದು, ಗ್ರಾಮಾಂತರ ಪ್ರದೇಶದ ಪೋಷಕರು ತಮ್ಮ ಮಕ್ಕಳನ್ನು ನಗರಗಳಿಗೆ ಕಳುಹಿಸದೆ, ಸ್ಥಳೀಯ ಸರ್ಕಾರಿ ಶಾಲೆಗಳಿಗೆ ಸೇರಿಸ ಬೇಕು ಎಂದು ಮನವಿ ಮಾಡಿದರು.

ಶಿಕ್ಷಣದ ಗುಣಮಟ್ಟಕ್ಕೆ ಆದ್ಯತೆ: ಇಲ್ಲಿ ನುರಿತ ಶಿಕ್ಷಕರಿದ್ದು, ಉತ್ತಮ ಫ‌ಲಿತಾಂಶ ಬರುತ್ತಿದೆ. ಮಕ್ಕಳು ಪ್ರಯೋಗಾಲಯ, ಹೆಚ್ಚುವರಿ ಕೊಠಡಿ ಸೌಲಭ್ಯ ಪಡೆದು ಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಶಿಕ್ಷಕರು ಸಿದ್ಧರಾಗಿ, ವಿದ್ಯಾರ್ಥಿಗಳನ್ನು ತಯಾರು ಮಾಡಬೇಕು. ಶಾಲಾ ಶಿಕ್ಷಕ ಕೊರತೆ ಕಡಿಮೆ ಮಾಡಲು ಸರ್ಕಾರ ಕಾರ್ಯೋನ್ಮುಖವಾಗಿದ್ದು, ಪ್ರಾಥಮಿಕ ಶಾಲೆಗೆ 15 ಸಾವಿರ ಹಾಗೂ ಪ್ರೌಢಶಾಲೆಗೆ 2 ಸಾವಿರ ಶಿಕ್ಷಕರನ್ನು ನೇಮಕ ಮಾಡಿ ಕೊಳ್ಳಲಿದೆ. ಶಿಕ್ಷಣದ ಗುಣಮಟ್ಟಕ್ಕೆ ಆದ್ಯತೆ ನೀಡುವ ಉದ್ದೇಶವಿದೆ ಎಂದರು.

ತಹಶೀಲ್ದಾರ್‌ ಚಂದ್ರಶೇಖರ್‌, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗಂಗಾಧರ್‌, ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ಹೊನ್ನೇಶ್‌, ತಿಮ್ಮಣ್ಣ, ಬಿಇಒ ಪ್ರಭುಸ್ವಾಮಿ, ಪ್ರಾಂಶುಪಾಲ ಬಿ.ನಾಗರಾಜು, ಎಸ್‌ ಡಿಎಂಸಿ ಅಧ್ಯಕ್ಷ ಶ್ರೀಕಂಠಮೂರ್ತಿ, ಪಿಡಿಒ ಲತಾ, ಪೊಲೀಸ್‌ ಇನ್ಸ್‌ಫೆಕ್ಟರ್‌ ಸರ್ದಾರ್‌, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿಸಲೇಹಳ್ಳಿ ಜಗದೀಶ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next