Advertisement
ಈಗಾಗಲೇ ಕಾಡ್ಗಿಚ್ಚು 24 ಮಂದಿಯನ್ನು ಬಲಿ ಪಡೆದುಕೊಂಡಿದ್ದು, ಕೋಟ್ಯಂತರ ಪ್ರಾಣಿಗಳು ಸಜೀವ ದಹನವಾಗಿವೆ. ಶುಕ್ರವಾರ ಏಕಾಏಕಿ ಗಂಟೆಗೆ 90 ಕಿ.ಮೀ. ವೇಗದಲ್ಲಿ ಗಾಳಿ ಬೀಸಿರುವ ಕಾರಣ, ಬೇರೆ ಬೇರೆ ಕಡೆ ಎದ್ದಿದ್ದ ಕಾಡ್ಗಿಚ್ಚನ್ನು ಮತ್ತಷ್ಟು ವ್ಯಾಪಿಸುವಂತೆ ಮಾಡಿದ್ದು, ಅತಿದೊಡ್ಡ ಅಪಾಯದ ಮುನ್ಸೂಚನೆ ನೀಡಿದೆ. ಅತ್ಯಂತ ಕ್ಷಿಪ್ರವಾಗಿ ಬೆಂಕಿ ವ್ಯಾಪಿ ಸುತ್ತಿರುವ ಕಾರಣ ನ್ಯೂ ಸೌತ್ ವೇಲ್ಸ್ ಮತ್ತು ವಿಕ್ಟೋರಿಯಾದ ಜನರಲ್ಲಿ ಆತಂಕ ಮೂಡಿಸಿದೆ. ಈ ಕೂಡಲೇ ಎಲ್ಲರೂ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಕಾಡ್ಗಿಚ್ಚಿನಿಂದಾಗಿ ಒಂದೆಡೆ ನೀರಿಗೆ ತೀವ್ರ ಅಭಾವ ಉಂಟಾಗಿದೆ. ವಿಕ್ಟೋರಿಯಾದ ಮಲ್ಲಕೂಟಾ ಎಂಬ ಗ್ರಾಮವು ಇತರೆ ನಗರಗಳ ಸಂಪರ್ಕವನ್ನು ಕಡಿದುಕೊಂಡು ಸಂಕಷ್ಟ ಅನುಭವಿಸುತ್ತಿದೆ. ಅಲ್ಲಿರುವ ಪಬ್‌ಗಳಲ್ಲಿ ಬಿಯರ್ ಕೂಡ ಲಭ್ಯವಾಗದೇ ಜನ ಪರದಾಡುವಂತಾಗಿದೆ. ಈ ಪ್ರದೇಶದಲ್ಲಿ ಮದ್ಯವು ಅತ್ಯಗತ್ಯ ವಸ್ತುಗಳಲ್ಲಿ ಒಂದಾಗಿರುವ ಕಾರಣ, ಆಸ್ಟ್ರೇಲಿಯಾದ ನೌಕಾಪಡೆಯು 800 ಗ್ಯಾಲನ್ ಬಿಯರ್ ಅನ್ನು ವಿಮಾನದ ಮೂಲಕ ಸರಬರಾಜು ಮಾಡಿ, ನೊಂದಿರುವ ಜನರಿಗೆ ಈ ಬಿಯರ್ ಆದರೂ ಖುಷಿ ಕೊಡಲಿ ಎಂದಿದೆ. ಬಿಯರ್ ನೋಡಿ ಉಲ್ಲಸಿತರಾದ ಜನ, ‘ಗಾಡ್ ಬ್ಲೆಸ್ ದಿ ನೇವಿ’ ಎಂದು ಘೋಷಣೆ ಕೂಗಿದ್ದಾರೆ.