Advertisement

ಎಣ್ಣೆಹೊಳೆ ಯೋಜನೆಯಿಂದ ಹರಿಯಲಿದೆ ನೀರಿನ ಹೊಳೆ

10:36 AM May 10, 2022 | Team Udayavani |

ಕಾರ್ಕಳ: ಪಶ್ಚಿಮ ಘಟ್ಟದ ಕಾಲಬುಡದಲ್ಲಿ ಕಾರ್ಕಳವಿದ್ದರೂ ಬೇಸಗೆಯಲ್ಲಿ ನೀರಿಗೆ ಬರ ಎದುರಾಗುತ್ತದೆ. ಶಾಶ್ವತ ನೀರಿನ ಪರಿಹಾರಕ್ಕೆ ನೀರಾವರಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಎಣ್ಣೆ ಹೊಳೆ ಏತ ನೀರಾವರಿ ಅದರಲ್ಲೊಂದು. ಉದ್ಘಾಟನೆಗೆ ಸಿಎಂ ಬರುವ ನಿರೀಕ್ಷೆ ಇದೆ.

Advertisement

ಕಾರ್ಕಳ ತಾ|ನ ಮರ್ಣೆ ಗ್ರಾಮದ ಎಣ್ಣೆಹೊಳೆ ಎಂಬಲ್ಲಿ ಸ್ವರ್ಣ ನದಿಗೆ 108 ಕೋ.ರೂ. ವೆತ್ಛದಲ್ಲಿ ಏತ ನೀರಾವರಿ ಯೋಜನೆ ಸಿದ್ಧಗೊಂಡಿದೆ. 2020 ರಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಕೊರೊನಾ, ಲಾಕ್‌ಡೌನ್‌ ಕಾರಣಗಳಿಂದ ತಡೆಯಾಗಿತ್ತು. ಅಣೆಕಟ್ಟು ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಗೇಟುಗಳನ್ನು ಹಾಕಲಾಗಿದೆ. ನೀರಿನ ಪೈಪ್‌ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ.. ಅಜೆಕಾರು ಗ್ರಾಮಕ್ಕೆ ಪ್ರಾಯೋಗಿಕವಾಗಿ ನೀರು ಹರಿಸಿ ಪರಿಶೀಲಿಸಲಾಗಿದೆ. 4 ನದಿಯಲ್ಲಿ ತುಂಬಾ ದೂರದವರೆಗೆ ನೀರು ಸಂಗ್ರಹವಾಗಿದೆ. ಸುಮಾರು 15 ಅಡಿಗಳಷ್ಟು ನೀರು ಸಂಗ್ರಹಣೆಗೊಳ್ಳುತ್ತಿದೆ.

ಉಡುಪಿ ಜಿಲ್ಲೆಯಲ್ಲಿ ಅತೀ ದೊಡ್ಡ ನೀರಾವರಿ ಯೋಜನೆ ಇದಾಗಿದೆ. ಹಲವು ಹೆಕ್ಟೇರ್‌ ಕೃಷಿ ಭೂಮಿಗೆ ನೀರುಣಿಸುವ ಈ ಬ್ರಹತ್‌ ಯೋಜನೆಯಿಂದ ಕಾರ್ಕಳ ಪುರಸಭೆ ವ್ಯಾಪ್ತಿಗೂ ನೀರು ಹರಿಸಲಾಗುತ್ತಿದೆ. ಪುರಸಭೆ ವ್ಯಾಪ್ತಿಯ ರಾಮಸಮುದ್ರ, ಆನೆಕೆರೆಗಳಿಗೆ ಹಾಗೂ ಮರ್ಣೆ, ಹಿರ್ಗಾನ, ಕುಕ್ಕುಂದೂರು ಗ್ರಾಮಗಳಲ್ಲಿ ಹರಿಯುವ ತೊರೆಗಳಿಗೆ ನೀರನ್ನು ಹಾಯಿಸಲಾಗುತ್ತದೆ. ಬೇಸಗೆ ಯಲ್ಲಿ ಈ ಕೆರೆ, ತೊರೆಗಳು ಬತ್ತದಂತೆ ನೋಡಿ ಕೊಳ್ಳಲಾಗುತ್ತಿದೆ. ರೈತರಿಗೆ ಕಡು ಬೇಸಗೆಯಲ್ಲೂ ನೀರಿನ ಲಭ್ಯವಿರುವಂತೆ ನೋಡಿಕೊಳ್ಳಲಾಗುತ್ತಿದೆ.

ಯೋಜನೆಗಳಿಂದ ನೀರು, ಅಂತರ್ಜಲ ಹೆಚ್ಚಳ

ಎಣ್ಣೆಹೊಳೆ ಯೋಜನೆಯಿಂದ ಹೆರ್ಮುಂಡೆ, ಹಂಚಿಕಟ್ಟೆ ಎಣ್ಣೆಹೊಳೆ ಗ್ರಾಮಗಳಲ್ಲಿ ನೂರಾರು ಮನೆಗಳ ಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಇತರ ಯೋಜನೆಗಳು ತಾ|ನಲ್ಲಿ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಸಹಕಾರಿಯಾಗಿವೆ. ಕ್ಷೇತ್ರದಲ್ಲಿ 350 ಕೋ.ರೂ. ವೆಚ್ಚದಲ್ಲಿ 230 ಕಿಂಡಿ ಅಣೆಕಟ್ಟುಗಳ ನಿರ್ಮಾಣ, 34 ಗ್ರಾ.ಪಂ. ಗಳ ಜನವಸತಿ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವ 129.74 ಕೋ.ರೂ. ವೆಚ್ಚದ ಜಲಮಿಷನ್‌ ಯೋಜನೆ. 10 ಕೋ.ರೂ. ವೆಚ್ಚದಲ್ಲಿ ವಿವಿಧ ನದಿ ದಂಡೆಗಳಿಗೆ ರಕ್ಷಣ ತಡೆಗೋಡೆ ನಿರ್ಮಾಣವಾಗಲಿದೆ. ಇವೆಲ್ಲವೂ ಅಂತರ್ಜಲ ಹೆಚ್ಚಳಕ್ಕೆ ಕಾರಣವಾಗಲಿದೆ. ವಾರಾಹಿ ಯೋಜನೆ ಮೂಲಕವೂ ಕಾರ್ಕಳಕ್ಕೆ ನೀರು ಹರಿದು ಬರಲಿದೆ.

Advertisement

ದಡ ಭಾಗದಲ್ಲಿ ತಡೆಗೋಡೆಯೂ ಆವಶ್ಯಕ

ಎಣ್ಣೆಹೊಳೆ ಏತ ನೀರಾವರಿ ಯೋಜನೆ ನಿರ್ಮಾಣ ಗೊಂಡ ಸ್ಥಳದ ದಡದಲ್ಲಿ ವಾಸಿಸುವ ಕುಟುಂಬಗಳ ಕೃಷಿ ಭೂಮಿಗೆ ಕೃತಕ ನೀರು ನುಗ್ಗುವ ಆತಂಕವೂ ಇದೆ. ನದಿಯಲ್ಲಿ ನೀರಿನ ಹರಿವು ಹೆಚ್ಚಿ ಎರಡೂ ಕಡೆಗಳ ಕೃಷಿ ಭೂಮಿಗೆ ನೆರೆ ನೀರು ಹರಿದಲ್ಲಿ ಕೃಷಿ ಫ‌ಸಲು ನಾಶವಾಗಲಿದೆ. ಇದಕ್ಕೆ ತಡೆಗೋಡೆ ನಿರ್ಮಿಸುವುದು, ಬೆಳೆಹಾನಿಗೆ ಪರಿಹಾರ ಕಲ್ಪಿಸುವ ಬಗ್ಗೆಯೂ ಚಿಂತನೆಗಳಾಗಬೇಕಿದೆ.

 ಜೂ.1ಕ್ಕೆ ಸಿ.ಎಂ ಭೇಟಿ

ಹಲವು ಕಾಮಗಾರಿ ಉದ್ಘಾಟನೆ ಸಿಎಂ ಬಸವರಾಜ ಬೊಮ್ಮಾಯಿ ಜೂ.1ರಂದು ಕಾರ್ಕಳ ಕ್ಷೇತ್ರಕ್ಕೆ ಆಗಮಿಸಿ ಉದ್ಘಾಟಿಸುವ ನಿರೀಕ್ಷೆಯಿದೆ. ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಭೂಮಿ ಪೂಜೆ ಅಂದು ನೆರವೇರಿಸಲಿದ್ದಾರೆ. ಎಣ್ಣೆಹೊಳೆ ಏತ ನೀರಾವರಿ ಯೋಜನೆಉದ್ಘಾಟನೆ, ಹೆಬ್ರಿಯಲ್ಲಿ 10 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ತಾ| ಕಚೇರಿ (ಮಿನಿವಿಧಾನಸೌಧ) ಉದ್ಘಾಟನೆ ನಡೆಸಿ, ಹೆಬ್ರಿಯಲ್ಲಿ 1.5 ಕೋ.ರೂ. ವೆಚ್ಚಧ ನೂತನ ಬಸ್‌ ನಿಲ್ದಾಣಕ್ಕೆ ಅವರು ಭೂಮಿ ಪೂಜೆ ನೆರವೇರಿಸುವರು. ಎಣ್ಣೆಹೊಳೆಯಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ.

ಅಂತರ್ಜಲ ಹೆಚ್ಚಳ

ಕೃಷಿ, ಕುಡಿಯುವ ನೀರಿಗೆ ಒತ್ತು ನೀಡುವ ಕಾರ್ಯ ಆರಂಭದಿಂದಲೂ ನಡೆಸುತ್ತ ಬರಲಾಗಿದೆ. ಏತ ನೀರಾವರಿಯಿಂದ ಕೃಷಿ ಚಟುವಟಿಕೆಗೆ, ಅಂತರ್ಜಲ ಹೆಚ್ಚಳಕ್ಕೆ ಸಹಕಾರಿಯಾಗಲಿದೆ. ಪ್ರತೀ ಮನೆಗೆ ಕುಡಿಯುವ ನೀರು ಹರಿಸುವ ಯೋಜನೆಗಳು ಕಾರ್ಯಗತ ಹಂತದಲ್ಲಿದೆ. ಒಟ್ಟಿನಲ್ಲಿ ಸಮಗ್ರ ಅಭಿವೃದ್ಧಿಯಲ್ಲಿ ಕೃಷಿ, ಕುಡಿಯುವ ನೀರಿಗೆ ಆದ್ಯತೆ ನೀಡಿ ದೂರದೃಷ್ಟಿತ್ವಕ್ಕೆ ಗಮನ ನೀಡಲಾಗಿದೆ. -ವಿ.ಸುನಿಲ್‌ಕುಮಾರ್‌ ಇಂಧನ, ಕನ್ನಡ, ಸಂಸ್ಕೃತಿ ಸಚಿವರು

ಬಾಲಕೃಷ್ಣ ಭೀಮಗುಳಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next