ಮೈಸೂರು: ಶಿಸ್ತು, ಒಳ್ಳೆಯ ನಡತೆ, ನೈತಿಕ ಮೌಲ್ಯಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ಮೈಸೂರಿನ ರಾಮಕೃಷ್ಣ ಆಶ್ರಮದ ಸಂತ ಮಹೇಶ್ ಆತ್ಮಾನಂದ ಜೀ ಹೇಳಿದರು.
ದಟ್ಟಗಳ್ಳಿಯ ಎಸ್.ಜಿ. ವಿಶ್ವಪ್ರಜ್ಞ ಸಂಯುಕ್ತ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಬ್ಲೊಸಮ್ಸ್ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹನೀಯರ ಜೀವನ ಚರಿತ್ರೆ ಅಧ್ಯಯನ ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಾಳಜಿ ಹೆಚ್ಚುತ್ತದೆ ಎಂದು ಹೇಳಿದರು.
ಸಮಾಜ ಪ್ರತಿಯೊಬ್ಬರೂ ಸಾಧನೆಯ ಉನ್ನತಿಗೇರಲು ಬೇಕಾದ ಹಲವಾರು ಮಾರ್ಗಗಳನ್ನು ನಮ್ಮ ಮುಂದಿಟ್ಟಿವೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ದುರ್ಬಲರಾಗಿದ್ದಂತಹ ವ್ಯಕ್ತಿಗಳು ತಮ್ಮ ಸತತ ಪ್ರಯತ್ನದಿಂದ ಸಾಧನೆ ಮಾಡಿರುವ ಇತಿಹಾಸ ನಮ್ಮ ಕಣ್ಣ ಮುಂದಿದೆ.
ಅದಕ್ಕೆ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ, ಜಗತ್ತಿನ ಶ್ರೇಷ್ಠ ಉದ್ಯಮಿ ಬಿಲ್ ಗೇಟ್ಸ್ ಮೊದಲಾದವರನ್ನು ಉದಾಹರಣೆ ನೀಡಿ, ಇಂಥವರ ಜೀವನ ನಿಮ್ಮ ಬದುಕಿಗೆ ಸ್ಫೂರ್ತಿದಾಯಕವಾಗಿರಬೇಕು ಎಂದು ಹೇಳಿದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದು ಗುರಿಯಿಟ್ಟುಕೊಂಡು, ಸತತ ಪ್ರಯತ್ನದಿಂದ ಜೀವನದಲ್ಲಿ ಯಶಸ್ಸನ್ನು ಕಾಣಬಹುದಾಗಿದೆ.
ಹಿಂದಿನ ಕಾಲದಲ್ಲಿ ಹತ್ತು ಕಿ.ಮೀ ಗಳಿಗೊಂದು ಶಾಲೆ ಇರುತ್ತಿದ್ದವು. ಆದರೆ, ಇಂದಿನ ದಿನಗಳಲ್ಲಿ ಪರಿಸ್ಥಿತಿ ಹಾಗಿಲ್ಲ, ಒಂದು ಕಿ.ಮೀ ಗೆ ಹತ್ತು ಶಾಲೆಗಳಿವೆ. ಇದು ನಿಮ್ಮ ಸೌಭಾಗ್ಯ, ಕಾಲೇಜುಗಳಲ್ಲಿ ನಿಮಗೆ ಒದಗಿಸುವ ಎಲ್ಲಾ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡು ಉನ್ನತ ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕುವೆಂಪು ವಿವಿ ವಿಶ್ರಾಂತ ಕುಲಪತಿ ಪ್ರೊ.ಪಿ.ವೆಂಕಟರಾಮಯ್ಯ ಹಾಗೂ ಬೆಂಗಳೂರಿನ ಪೊ›ಫೆಷನಲ್ ಅಕಾಡೆಮಿಯ ಸಿಎ ತರಬೇತುದಾರ ಎನ್.ನಾಗರಾಜ್ ಹಾಜರಿದ್ದರು. ವ್ಯವಸ್ಥಾಪಕ ಟ್ರಸ್ಟಿ ವಿಶ್ವನಾಥ್ ಶೇಷಾಚಲ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.