ಕೋಸ್ಟಲ್‌ವುಡ್ ಸಿನೆಮಾದಲ್ಲಿ ಹೊಸ ಮನ್ವಂತರ ಸೃಷ್ಟಿಸಿದ ಖ್ಯಾತ ನಿರ್ದೇಶಕ ಸೂರಜ್ ಶೆಟ್ಟಿ ಅವರ “ಇಂಗ್ಲಿಷ್’ ಕೋಸ್ಟಲ್‌ವುಡ್‌ನಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಕಾಮಿಡಿಯನ್ನೇ ಮುಖ್ಯ ನೆಲೆಯಲ್ಲಿಟ್ಟು ಮಾಡಿರುವ ಈ ಸಿನೆಮಾ ತುಳು ಸಿನೆಮಾಕ್ಕೆ ಹೊಸ ಭವಿಷ್ಯ ಒದಗಿಸಲಿದೆ ಎಂಬುದು ಕೋಸ್ಟಲ್‌ವುಡ್ ಅಭಿಪ್ರಾಯ.
ವಿಭಿನ್ನ ಟೈಟಲ್‌ಗಳ ಮೂಲಕವೇ ಕೋಸ್ಟಲ್‌ವುಡ್‌ನಲ್ಲಿ ಸಕ್ಸಸ್ ಸಿನೆಮಾಗಳನ್ನು ನೀಡಿದ ಸೂರಜ್ ಅವರ “ಎಕ್ಕಸಕ್ಕ’,”ಪಿಲಿಬೈಲ್ ಯಮುನಕ್ಕ’, “ಅಮ್ಮೆರ್ ಪೊಲೀಸಾ’ ಹಿಟ್ ಆದ ಬಳಿಕ ಈಗ ನಾಲ್ಕನೇ ಸಿನೆಮಾವಾಗಿ “ಇಂಗ್ಲಿಷ್’ ಮಾಡುತ್ತಿದ್ದಾರೆ. ಬಹುತೇಕ ಶೂಟಿಂಗ್ ಮುಗಿಸಿದ ಈ ಸಿನೆಮಾ ಕೊನೆಯ ಹಂತದ ಸಿದ್ಧತೆಯಲ್ಲಿದೆ. ಖ್ಯಾತ ಉದ್ಯಮಿ, “ಮಾರ್ಚ್ 22′, “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಎಂಬ ಕನ್ನಡ ಸಿನೆಮಾ ನಿರ್ಮಿಸಿದ ಹರೀಶ್ ಶೇರಿಗಾರ್ ನಿರ್ಮಾಣದಲ್ಲಿ “ಇಂಗ್ಲಿಷ್’ ರೆಡಿಯಾಗುತ್ತಿದೆ.
ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ದೀಪಕ್ ರೈ ಪಾಣಾಜೆ, ವಿಸ್ಮಯ ವಿನಾಯಕ್, ಸಂದೀಪ್ ಶೆಟ್ಟಿ, ಪ್ರಸನ್ನ ಬೈಲೂರು ಸೇರಿದಂತೆ ತುಳುನಾಡಿನ ಸ್ಟಾರ್ ಕಲಾವಿದರನ್ನು ಇಟ್ಟುಕೊಂಡು ಮಾಡಿರುವ ಸಿನೆಮಾ ಇದಾಗಿರುವುದರಿಂದ ಇಲ್ಲಿ ನಿರೀಕ್ಷೆ ಬಹಳಷ್ಟಿದೆ. ಪೃಥ್ವಿ ಅಂಬರ್ ಹಾಗೂ ನವ್ಯಾ ಪೂಜಾರಿ ಮುಖ್ಯಭೂಮಿಕೆಯಲ್ಲಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ, ಶಶಿರಾಜ್ ಕಾವೂರು ಹಾಗೂ ಅರ್ಜುನ್ ಲೂಯಿಸ್ ಸಾಹಿತ್ಯ, ಕೆಮರಾ ಕೃಷ್ಣ ಸಾರಥಿ, ಸಂಕಲನವನ್ನು ಮನು ನಡೆಸುತ್ತಿದ್ದಾರೆ.
ಅಮ್ಮೆರ್ ಪೊಲೀಸಾ ಸಿನೆಮಾದ ಬಳಿಕ ಸೂರಜ್ ಏನು ಮಾಡುತ್ತಾರೆ? ಎಂಬ ಪ್ರಶ್ನೆ ಕೋಸ್ಟಲ್‌ವುಡ್‌ನಲ್ಲಿ ಕೇಳಿಬರುತ್ತಿತ್ತು. ಆ ವೇಳೆಗೆ ಇಂಗ್ಲೀಷ್ ಸಿನೆಮಾದ ಬಗ್ಗೆ ಗುಸುಗುಸು ಕೇಳಿಬರುತ್ತಿತ್ತು. ಅದಾಗಲೇ ಸೂರಜ್ “ಸನ್ ಆಫ್ ಬಿಸತ್ತಿಬಾಬು’ ಎಂಬ ಸಿನೆಮಾ ಮಾಡುತ್ತಾರೆ ಎಂಬ ಸುದ್ದಿಯೂ ಕೋಸ್ಟಲ್‌ವುಡ್ ಗಲ್ಲಿಯಲ್ಲಿ ಹರಿದಾಡಿತ್ತು. ಅಷ್ಟರಲ್ಲೇ “ನಾನ್‌ವೆಜ್’ ಎಂಬ ಕನ್ನಡ ಸಿನೆಮಾ ಮಾಡುತ್ತಾರೆ ಎಂಬ ಬಗ್ಗೆಯೂ ಕೆಲವರು ಮಾತನಾಡಿದರು. ಹೀಗಾಗಿ ಸೂರಜ್ ಅಧಿಕೃತವಾಗಿ ತತ್‌ಕ್ಷಣಕ್ಕೆ ಯಾವ ಸಿನೆಮಾ ಮಾಡುತ್ತಾರೆ ಎಂಬ ಬಗ್ಗೆ ಕೋಸ್ಟಲ್‌ವುಡ್‌ನಲ್ಲಿ ಸಹಜವಾಗಿ ಕುತೂಹಲ ಸೃಷ್ಟಿಯಾಗಿತ್ತು. ಈಗ ಈ ಕುತೂಹಲಕ್ಕೆ ಬ್ರೇಕ್ ಬಿದ್ದಿದ್ದು, ಸಿನೆಮಾ ರಿಲೀಸ್‌ನ ಹೊಸ್ತಿಲಲ್ಲಿದೆ.