Advertisement

ಸಾವಿರನೇ ಟೆಸ್ಟ್‌ನಲ್ಲಿ ಗೆಲುವಿನ ಸಾಹಸ

06:55 AM Aug 05, 2018 | |

ಎಜ್‌ಬಾಸ್ಟನ್‌ (ಬರ್ಮಿಂಗ್‌ಹ್ಯಾಮ್‌): ಐತಿಹಾಸಿಕ ಸಾವಿರನೇ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಗೆಲುವಿನ ಸಾಹಸದೊಂದಿಗೆ ಮೆರೆದಿದೆ. ಬರ್ಮಿಂಗ್‌ಹ್ಯಾಮ್‌ ಮೇಲಾಟದಲ್ಲಿ ಪ್ರವಾಸಿ ಭಾರತವನ್ನು 31 ರನ್ನುಗಳಿಂದ ಮಣಿಸಿ ತನ್ನ ಚಾರಿತ್ರಿಕ ಕ್ರಿಕೆಟ್‌ ಗಳಿಗೆಗೆ ಸಾಕ್ಷಿಯಾಗಿದೆ.

Advertisement

ಬ್ಯಾಟಿಂಗಿಗೆ ಅತ್ಯಂತ ಕಠಿನವಾದ ಎಜ್‌ಬಾಸ್ಟನ್‌ ಟ್ರ್ಯಾಕ್‌ನಲ್ಲಿ 194 ರನ್ನುಗಳ ಗುರಿ ಪಡೆದಿದ್ದ ಭಾರತ, 4ನೇ ದಿನವಾದ ಶನಿವಾರ ಭೋಜನ ವಿರಾಮದ ಹೊತ್ತಿಗೆ ಸರಿಯಾಗಿ 162 ರನ್ನುಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರೊಂದಿಗೆ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಇಂಗ್ಲೆಂಡ್‌ 1-0 ಮುನ್ನಡೆ ಸಾಧಿಸಿತು.

ಕಾಡಿದ ಬೆನ್‌ ಸ್ಟೋಕ್ಸ್‌
4ನೇ ದಿನದಾಟದಲ್ಲಿ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಭಾರತಕ್ಕೆ ಫಾತಕವಾಗಿ ಪರಿಣಮಿಸಿದರು. ಉರುಳಿದ 5 ವಿಕೆಟ್‌ಗಳಲ್ಲಿ 3 ಸ್ಟೋಕ್ಸ್‌ ಪಾಲಾಯಿತು. ಇದರಲ್ಲಿ ಭಾರೀ ದೊಡ್ಡ ಬೇಟೆಯೆಂದರೆ ಕೊಹ್ಲಿ ವಿಕೆಟ್‌. ಅರ್ಧ ಶತಕ ಬಾರಿಸಿ ಮುಂದುವರಿಯುತ್ತಿದ್ದ ಭಾರತದ ಕಪ್ತಾನನನ್ನು ಸ್ಟೋಕ್ಸ್‌ ಲೆಗ್‌ ಬಿಫೋರ್‌ ಬಲೆಗೆ ಬೀಳಿಸಿದರು. ರೀವ್ಯೂ ತೆಗೆದುಕೊಂಡರೂ ಭಾರತಕ್ಕೆ ಲಾಭವಾಗಲಿಲ್ಲ. ಇಂಥದೊಂದು ಕ್ಷಣಕ್ಕಾಗಿಯೇ ಕಾಯುತ್ತಿದ್ದ ಇಂಗ್ಲೆಂಡ್‌ ಪಂದ್ಯವನ್ನೇ ಗೆದ್ದ ರೀತಿಯಲ್ಲಿ ಸಂಭ್ರಮಿಸಿತು. ಅದೇ ಓವರಿನಲ್ಲಿ ಶಮಿ ವಿಕೆಟನ್ನೂ ಹಾರಿಸಿದ ಸ್ಟೋಕ್ಸ್‌ ತಂಡವನ್ನು ಗೆಲುವಿನ ಬಾಗಿಲಿನ ಬಳಿ ತಂದು ನಿಲ್ಲಿಸಿದರು. ಕೊನೆಯಲ್ಲಿ ಪಾಂಡ್ಯ ಅವರನ್ನು ಕುಕ್‌ ಕೈಗೆ ಕ್ಯಾಚ್‌ ಕೊಡಿಸುವ ಮೂಲಕ ಸ್ಟೋಕ್ಸ್‌ ತಂಡದ ಜಯವನ್ನು ಸಾರಿದರು. ಸ್ಟೋಕ್ಸ್‌ ಸಾಧನೆ 40ಕ್ಕೆ 4.

ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗಲಿರುವುದರಿಂದ ಸ್ಟೋಕ್ಸ್‌ ದ್ವಿತೀಯ ಟೆಸ್ಟ್‌ ಆಡುವುದು ಅನುಮಾನ ಎನ್ನಲಾಗಿದೆ. ಈ ಪಂದ್ಯ ಐತಿಹಾಸಿಕ ಲಾರ್ಡ್ಸ್‌ ಅಂಗಳದಲ್ಲಿ ಗುರುವಾರದಿಂದ ಆರಂಭವಾಗಲಿದೆ.

ಅಡ್ಡಿಯಾದ “ಕೊಹ್ಲಿ ಫ್ಯಾಕ್ಟರ್‌’
5 ವಿಕೆಟಿಗೆ 110 ರನ್‌ ಮಾಡಿದಲ್ಲಿಂದ ದಿನದಾಟ ಮುಂದುವರಿಸಿದ ಭಾರತ, ನಾಯಕ ವಿರಾಟ್‌ ಕೊಹ್ಲಿ ಮೇಲೆ ಭಾರೀ ಭರವಸೆ ಇರಿಸಿತ್ತು. ಕೊಹ್ಲಿ ಕ್ರೀಸ್‌ ಆಕ್ರಮಿಸಿಕೊಂಡದ್ದೇ ಆದಲ್ಲಿ ಭಾರತದ ಗೆಲುವು ಖಚಿತ ಎಂಬ ಲೆಕ್ಕಾಚಾರ ಎಲ್ಲರದಾಗಿತ್ತು. ಹಾಗೆಯೇ ಇಂಗ್ಲೆಂಡ್‌ ಕೂಡ ಕೊಹ್ಲಿ ವಿಕೆಟ್‌ ಬೇಟೆಗೆ ಭಾರೀ ವ್ಯೂಹವನ್ನೇ ರಚಿಸಿತ್ತು. ಭಾರತೀಯ ಕಪ್ತಾನ ಮೊದಲ ಸರದಿಯಲ್ಲಿ ಆತಿಥೇಯರ ದಾಳಿಯನ್ನು ಪುಡಿಗುಟ್ಟಿ 149 ರನ್‌ ಪೇರಿಸಿದ್ದು ಆಂಗ್ಲರ ಪಾಲಿಗೆ ದುಃಸ್ವಪ್ನವಾಗಿ ಕಾಡುತ್ತಲೇ ಇತ್ತು. ಹೀಗಾಗಿ ಇಂಗ್ಲೆಂಡ್‌ ಗೆಲುವಿಗೆ “ಕೊಹ್ಲಿ ಫ್ಯಾಕ್ಟರ್‌’ ದೊಡ್ಡ ಅಡ್ಡಿಯಾಗಿದ್ದರಲ್ಲಿ ಅನುಮಾನವೇ ಇರಲಿಲ್ಲ. ಕೊನೆಗೂ ಕೊಹ್ಲಿ ಪತನವೇ ಪಂದ್ಯದ ಟರ್ನಿಂಗ್‌ ಪಾಯಿಂಟ್‌ ಎನಿಸಿಕೊಂಡಿತು.

Advertisement

ಎಲ್ಲ ಬೌಲರ್‌ಗಳಿಗೂ ಯಶಸ್ಸು
ಮೂರನೇ ದಿನದಾಟದ ಕೊನೆಗೆ ವಿರಾಟ್‌ ಕೊಹ್ಲಿ ಮತ್ತು ದಿನೇಶ್‌ ಕಾರ್ತಿಕ್‌ ಕ್ರೀಸಿನಲ್ಲಿ ಉಳಿದಿದ್ದರು. ಜೇಮ್ಸ್‌ ಆ್ಯಂಡರ್ಸನ್‌ ಎಸೆದ ದಿನದ ಮೊದಲ ಓವರಿನಲ್ಲೇ ಕಾರ್ತಿಕ್‌ (20) ಔಟಾದರು. ಕೊಹ್ಲಿ-ಪಾಂಡ್ಯ ಸೇರಿಕೊಂಡು ನಿಧಾನವಾಗಿ ಇನ್ನಿಂಗ್ಸ್‌ ಕಟ್ಟತೊಡಗಿದರು. ಸ್ಕೋರ್‌ 141ಕ್ಕೆ ತಲುಪಿದ ವೇಳೆ ಕೊಹ್ಲಿ ವಿಕೆಟ್‌ ಬಿತ್ತು. ಕಪ್ತಾನನ ಗಳಿಕೆ 51 ರನ್‌. 93 ಎಸೆತ ನಿಭಾಯಿಸಿದ ಅವರು 4 ಬೌಂಡರಿ ಹೊಡೆದರು.

ಕೊಹ್ಲಿ ನಿರ್ಗಮನದ ಬಳಿಕ ಹಾರ್ದಿಕ್‌ ಪಾಂಡ್ಯ ಭಾರತದ ಆಸೆಯನ್ನು ಮತ್ತೆ ಚಿಗುರಿಸಿದರು. ಎಂದಿನ ಆಕ್ರಮಣಕಾರಿ ಆಟವನ್ನು ಬಿಟ್ಟು ರಕ್ಷಣಾತ್ಮಕ ಬ್ಯಾಟಿಂಗಿಗೆ ಇಳಿದರು. ಆದರೆ ಒತ್ತಡವನ್ನು ನಿಭಾಯಿಸಲು ಅವರಿಂದಾಗಲಿಲ್ಲ. 61 ಎಸೆತ ಎದುರಿಸಿದ ಪಾಂಡ್ಯ 4 ಬೌಂಡರಿ ನೆರವಿನಿಂದ 31 ರನ್‌ ಮಾಡಿದರು.

ಇಂಗ್ಲೆಂಡ್‌ ಸಾಂ ಕ ಬೌಲಿಂಗ್‌ ಮೂಲಕ ಧಾರಾಳ ಯಶಸ್ಸು ಕಂಡಿತು. ದಾಳಿಗಿಳಿದ ಎಲ್ಲ ಬೌಲರ್‌ಗಳೂ ವಿಕೆಟ್‌ ಬೇಟೆಯಾಡಿ ಪ್ರವಾಸಿಗರನ್ನು ಕಾಡಿದರು. ಅಮೋಘ ಆಲ್‌ರೌಂಡ್‌ ಪ್ರದರ್ಶನವಿತ್ತ ಸ್ಯಾಮ್‌ ಕರನ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಸ್ಕೋರ್‌ಪಟ್ಟಿ
* ಇಂಗ್ಲೆಂಡ್‌ ಪ್ರಥಮ ಇನ್ನಿಂಗ್ಸ್‌    287
* ಭಾರತ ಪ್ರಥಮ ಇನ್ನಿಂಗ್ಸ್‌    274
* ಇಂಗ್ಲೆಂಡ್‌ ದ್ವಿತೀಯ ಇನ್ನಿಂಗ್ಸ್‌    180
* ಭಾರತ ದ್ವಿತೀಯ ಇನ್ನಿಂಗ್ಸ್‌
(ಗೆಲುವಿನ ಗುರಿ 194 ರನ್‌)
ಮುರಳಿ ವಿಜಯ್‌    ಎಲ್‌ಬಿಡಬ್ಲ್ಯು ಬ್ರಾಡ್‌    6
ಶಿಖರ್‌ ಧವನ್‌    ಸಿ ಬೇರ್‌ಸ್ಟೊ ಬಿ ಬ್ರಾಡ್‌    13
ಕೆ.ಎಲ್‌. ರಾಹುಲ್‌    ಸಿ ಬೇರ್‌ಸ್ಟೊ ಬಿ ಸ್ಟೋಕ್ಸ್‌    13
ವಿರಾಟ್‌ ಕೊಹ್ಲಿ    ಎಲ್‌ಬಿಡಬ್ಲ್ಯು ಸ್ಟೋಕ್ಸ್‌    51
ಅಜಿಂಕ್ಯ ರಹಾನೆ    ಸಿ ಬೇರ್‌ಸ್ಟೊ ಬಿ ಕರನ್‌    2
ಆರ್‌. ಅಶ್ವಿ‌ನ್‌    ಸಿ ಬೇರ್‌ಸ್ಟೊ ಬಿ ಆ್ಯಂಡರ್ಸನ್‌    13
ದಿನೇಶ್‌ ಕಾರ್ತಿಕ್‌    ಸಿ ಮಾಲನ್‌ ಬಿ ಆ್ಯಂಡರ್ಸನ್‌    20
ಹಾರ್ದಿಕ್‌ ಪಾಂಡ್ಯ    ಸಿ ಕುಕ್‌ ಬಿ ಸ್ಟೋಕ್ಸ್‌    31
ಮೊಹಮ್ಮದ್‌ ಶಮಿ    ಸಿ ಬೇರ್‌ಸ್ಟೊ ಬಿ ಸ್ಟೋಕ್ಸ್‌    0
ಇಶಾಂತ್‌ ಶರ್ಮ    ಎಲ್‌ಬಿಡಬ್ಲ್ಯು ರಶೀದ್‌    11
ಉಮೇಶ್‌ ಯಾದವ್‌    ಔಟಾಗದೆ    0
ಇತರ        2
ಒಟ್ಟು  (ಆಲೌಟ್‌)        162
ವಿಕೆಟ್‌ ಪತನ: 1-19, 2-22, 3-46, 4-63, 5-78, 6-112, 7-141, 8-141, 9-154.
ಬೌಲಿಂಗ್‌:
ಜೇಮ್ಸ್‌ ಆ್ಯಂಡರ್ಸನ್‌        16-2-50-2
ಸ್ಟುವರ್ಟ್‌ ಬ್ರಾಡ್‌        14-2-43-2
ಬೆನ್‌ ಸ್ಟೋಕ್ಸ್‌        14.2-2-40-4
ಸ್ಯಾಮ್‌ ಕರನ್‌        6-0-18-1
ಆದಿಲ್‌ ರಶೀದ್‌        4-1-9-1
ಪಂದ್ಯಶ್ರೇಷ್ಠ: ಸ್ಯಾಮ್‌ ಕರನ್‌
2ನೇ ಟೆಸ್ಟ್‌: ಲಂಡನ್‌ (ಆ. 9-13)

ಅತಿರೇಕದ ವರ್ತನೆ ಇಶಾಂತ್‌ಗೆ ದಂಡ
ಅತಿರೇಕದ ಸಂಭ್ರಮಾಚರಣೆ ನಡೆಸಿ ಕ್ರಿಕೆಟ್‌ ನೀತಿಸಂಹಿತೆಯನ್ನು ಉಲ್ಲಂ ಸಿದ್ದಕ್ಕಾಗಿ ಭಾರತದ ಪೇಸ್‌ ಬೌಲರ್‌ ಇಶಾಂತ್‌ ಶರ್ಮ ಅವರಿಗೆ ಪಂದ್ಯದ ಸಂಭಾವನೆಯ ಶೇ. 15ರಷ್ಟು ದಂಡ ವಿಧಿಸಲಾಗಿದೆ. 3ನೇ ದಿನದಾಟದ ಬಳಿಕ ಮ್ಯಾಚ್‌ ರೆಫ್ರಿ ಜೆಫ್ ಕ್ರೋವ್‌ ಯಾವುದೇ ವಿಚಾರಣೆ ನಡೆಸದೆ ಈ ದಂಡವನ್ನು ಪ್ರಕಟಿಸಿದರು.

ಶುಕ್ರವಾರ ಇಂಗ್ಲೆಂಡಿನ ದ್ವಿತೀಯ ಇನ್ನಿಂಗ್ಸ್‌ ವೇಳೆ ಡೇವಿಡ್‌ ಮಾಲನ್‌ ವಿಕೆಟ್‌ ಕಿತ್ತ ಸಂಭ್ರಮದಲ್ಲಿ ಈ ಘಟನೆ ನಡೆದಿತ್ತು. ಮಾಲನ್‌ ಪೆವಿಲಿಯನ್‌ನತ್ತ ಸಾಗುತ್ತಿದ್ದಾಗ ಅವರ ಸಮೀಪಕ್ಕೆ ತೆರಳಿದ ಇಶಾಂತ್‌ ಆಕ್ರಮಣಕಾರಿ ಹಾಗೂ ಅತಿರೇಕದ ಸಂಭ್ರಮ ನಡೆಸಿದ್ದರು.

ರಾತ್ರಿ ಗಡದ್ದಾಗಿ ನಿದ್ದೆ ಮಾಡುವೆ: ಸ್ಯಾಮ್‌ ಕರನ್‌
“ನನ್ನ ಪಾಲಿಗೆ ಇದೊಂದು ವಿಶೇಷ ಹಾಗೂ ಸ್ಮರಣೀಯ ಗಳಿಗೆ. ಈ ಕುರಿತು ಹೆಚ್ಚು ಪ್ರತಿಕ್ರಿಯಿಸಲಾರೆ. ಇಂದು ರಾತ್ರಿ ನಾನು ಗಡದ್ದಾಗಿ ನಿದ್ದೆ ಮಾಡಬೇಕು. ನಿನ್ನೆ ನಿದ್ದೆ ಇಲ್ಲದ ರಾತ್ರಿಯನ್ನು ಕಳೆದಿದ್ದೆ…’ ಎಂಬುದಾಗಿ ಪಂದ್ಯಶ್ರೇಷ್ಠ ಆಟಗಾರ ಸ್ಯಾಮ್‌ ಕರನ್‌ ಪ್ರತಿಕ್ರಿಯಿಸಿದ್ದಾರೆ.

“ಆ್ಯಂಡರ್ಸನ್‌ ಮೂರನೇ ದಿನದಾಟದ ಕೊನೆಯಲ್ಲಿ ಅಶ್ವಿ‌ನ್‌ ವಿಕೆಟ್‌ ಕಿತ್ತಾಗ ನಮಗೆ ಗೆಲುವಿನ ಭರವಸೆ ಮೂಡಿತ್ತು. ಆದರೆ ಕ್ರೀಸಿನಲ್ಲಿ ಉಳಿದಿದ್ದ ವಿರಾಟ್‌ ಕೊಹ್ಲಿಯದ್ದೇ ಚಿಂತೆಯಾಗಿತ್ತು. ಥ್ಯಾಂಕ್‌ಫ‌ುಲಿ, ಸ್ಟೋಕ್ಸ್‌ ಪಂದ್ಯದ ಚಿತ್ರಣವನ್ನೇ ಬದಲಿಸಿದರು…’ ಎಂದುನ ಕರನ್‌ ಹೇಳಿದರು. ಇದು ಅವರ ಕೇವಲ 2ನೇ ಟೆಸ್ಟ್‌ ಪಂದ್ಯ.

Advertisement

Udayavani is now on Telegram. Click here to join our channel and stay updated with the latest news.

Next