ಲಂಡನ್: ಇಲ್ಲಿನ ಓವಲ್‌ನಲ್ಲಿ ನಡೆದ 100ನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು ಮೊಯಿನ್ ಅಲಿ ಅವರ ಹ್ಯಾಟ್ರಿಕ್ ವಿಕೆಟ್ ಸಾಧನೆಯಿಂದಾಗಿ ದಕ್ಷಿಣ ಆಫ್ರಿಕಾ ತಂಡವನ್ನು 239 ರನ್ನುಗಳಿಂದ ಭರ್ಜರಿಯಾಗಿ ಸೋಲಿಸಿದೆ.
ಗೆಲ್ಲಲು 491 ರನ್ ತೆಗೆಯುವ ಕಠಿನ ಸವಾಲು ಪಡೆದ ದಕ್ಷಿಣ ಆಫ್ರಿಕಾ ತಂಡವು ಪಂದ್ಯದ ಐದನೇ ದಿನವಾದ ಸೋಮವಾರ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ 252 ರನ್ನಿಗೆ ಆಲೌಟಾಗಿ ಸೋಲನ್ನು ಒಪ್ಪಿಕೊಂಡಿತು. ಈ ಗೆಲುವಿನಿಂದ ಇಂಗ್ಲೆಂಡ್ ನಾಲ್ಕು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಸರಣಿ ನಿರ್ಣಾಯಕ ಟೆಸ್ಟ್ ಪಂದ್ಯ ಓಲ್ಡ್ ಟ್ರಾಪೋರ್ಡ್‌ನಲ್ಲಿ ಆ. 4ರಿಂದ 8ರ ವರೆಗೆ ನಡೆಯಲಿದೆ.
ಎಲ್ಗರ್ ಶತಕ: ಇಂಗ್ಲೆಂಡ್ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಆರಂಭಿಕ ಆಟಗಾರ ಡೀನ್ ಎಲ್ಗರ್ ಹೋರಾಟ ನಡೆಸುವ ಸೂಚನೆ ನೀಡಿದರು. ಆದರೆ ಅವರಿಗೆ ತಂಡದ ಉಳಿದ ಆಟಗಾರರು ಉತ್ತಮ ರೀತಿಯಲ್ಲಿ ಬೆಂಬಲ ನೀಡಿಲ್ಲ. ಎಂಟನೆಯವರಾಗಿ ಔಟಾಗುವ ಮೊದಲು 228 ಎಸೆತ ಎದುರಿಸಿದ್ದ ಅವರು 20 ಬೌಂಡರಿ ನೆರವಿನಿಂದ 136 ರನ್ ಗಳಿಸಿದ್ದರು. ಇದು ಅವರ ಟೆಸ್ಟ್‌ನಲ್ಲಿ ದಾಖಲಾದ ಎಂಟನೇ ಶತಕವಾಗಿದೆ.
ಎಲ್ಗರ್ ವಿಕೆಟ್ ಕಿತ್ತ ಮೊಯಿನ್ ಅಲಿ ಅನಂತರ ಸತತ ಎರಡು ಎಸೆತಗಳಲ್ಲಿ ಕಾಗಿಸೊ ರಬಾಡ ಮತ್ತು ಮಾರ್ನೆ ಮಾರ್ಕೆಲ್ ಅವರ ವಿಕೆಟನ್ನು ಕಿತ್ತು ಹ್ಯಾಟ್ರಿಕ್ ಸಾಧಿಸಿದರು. ಇದು ಓವಲ್ ಮೈದಾನದಲ್ಲಿ ದಾಖಲಾದ ಮೊದಲ ಹ್ಯಾಟ್ರಿಕ್ ವಿಕೆಟ್ ಸಾಧನೆಯಾಗಿದೆ. ಈ ಪಂದ್ಯ ಇಲ್ಲಿ ನಡೆದ 100ನೇ ಪಂದ್ಯವಾಗಿದೆ. 79 ವರ್ಷಗಳ ಬಳಿಕ ಇಂಗ್ಲೆಂಡಿನ ಸ್ಪಿನ್ನರೊಬ್ಬರ ಮೊದಲ ಹ್ಯಾಟ್ರಿಕ್ ಸಾಧನೆಯೂ ಆಗಿದೆ. ಎಲ್ಗರ್ ಅವರಿಗೆ ತೆಂಬ ಬವುಮ ಮಾತ್ರ ಸ್ವಲ್ಪಮಟ್ಟಿಗೆ ಬೆಂಬಲ ನೀಡಿ ದ್ದರು. ಅವರಿಬ್ಬರು ಐದನೇ ವಿಕೆಟಿಗೆ 108 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡಿ ದ್ದರು. ಬವುಮ 32 ರನ್ ಹೊಡೆದರು. ಆದರೆ ಅನುಭವಿ ಆಟಗಾರರಾದ ಹಾಶಿಮ್ ಆಮ್ಲ, ಕ್ವಿಂಟನ್ ಡಿ ಕಾಕ್ ಮತ್ತು ಡು ಪ್ಲೆಸಿಸ್ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದರು.
ಸಂಕ್ಷಿಪ್ತ ಸ್ಕೋರು
ಇಂಗ್ಲೆಂಡ್ 353 ಮತ್ತು 313ಕ್ಕೆ 8 ಡಿಕ್ಲೇರ್x (ಬೇರ್‌ಸ್ಟೋ 63, ವೆಸ್ಲೆ 59, ರೂಟ್ 50); ದಕ್ಷಿಣ ಆಫ್ರಿಕಾ 175 ಮತ್ತು 252 (ಡೀನ್ ಎಲ್ಗರ್ 136, ತೆಂಬ ಬವುಮ 32, ಕ್ರಿಸ್ ಮಾರಿಸ್ 24, ಕೇಶವ್ ಮಹಾರಾಜ್ 24, ರೋಲ್ಯಾಂಡ್ ಜೋನ್ಸ್ 72ಕ್ಕೆ 3, ಬೆನ್ ಸ್ಟೋಕ್ಸ್ 51ಕ್ಕೆ 2, ಮೊಯಿನ್ ಅಲಿ 45ಕ್ಕೆ 4).