Advertisement

Super 8; ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ 7 ರನ್ ಜಯ: ಸೆಮಿ ಹಾದಿಯಲ್ಲಿ

12:12 AM Jun 22, 2024 | Team Udayavani |

ಗ್ರಾಸ್‌ ಐಲೆಟ್‌: ಇಂಗ್ಲೆಂಡ್‌ ಎದುರಿನ ಶುಕ್ರವಾರದ ಸೂಪರ್‌-8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 7 ರನ್ ಗಳ ರೋಚಕ ಜಯ ಸಾಧಿಸಿ ಸೆಮಿ ಫೈನಲ್ ಪ್ರವೇಶಕ್ಕೆ ಸಿದ್ದವಾಗಿ ನಿಂತಿದೆ. ಎರಡೂ ಸೂಪರ್‌-8 ಪಂದ್ಯ ಗೆದ್ದಿರುವ ದಕ್ಷಿಣ ಆಫ್ರಿಕಾ ಮುಂದಿನ ಪಂದ್ಯವನ್ನು ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ.

Advertisement

ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ 6 ವಿಕೆಟಿಗೆ 163 ರನ್‌ ಗಳಿಸಿದೆ. ಆರಂಭಕಾರ ಕ್ವಿಂಟನ್‌ ಡಿ ಕಾಕ್‌ ಸತತ 2ನೇ ಅರ್ಧ ಶತಕ ಬಾರಿಸಿ ಮಿಂಚಿದರು.ಅಮೆರಿಕ ಎದುರಿನ ಮೊದಲ ಮುಖಾಮುಖಿಯಲ್ಲಿ 74 ರನ್‌ ಹೊಡೆದಿದ್ದ ಡಿ ಕಾಕ್‌, ಇಂಗ್ಲೆಂಡ್‌ ವಿರುದ್ಧ 65 ರನ್‌ ಬಾರಿಸಿ ಪಂದ್ಯ ಶ್ರೇಷ್ಠ ಎನಿಸಿಕೊಂಡರು. 38 ಎಸೆತಗಳ ಈ ಸೊಗಸಾದ ಆಟದಲ್ಲಿ 4 ಬೌಂಡರಿ, 4 ಸಿಕ್ಸರ್‌ ಸೇರಿತ್ತು.

ಗುರಿ ಬೆನ್ನಟ್ಟಿದ ಇಂಗ್ಲೆಂಡ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 156 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಇಂಗ್ಲೆಂಡ್ ಪರ ಮಧ್ಯಮ ಕ್ರಮಾಂಕದಲ್ಲಿ ಹ್ಯಾರಿ ಬ್ರೂಕ್ 53(37 ಎಸೆತ) ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್33(17 ಎಸೆತ) ಗೆಲುವಿನ ಆಸೆ ಮೂಡಿಸಿದರಾದರೂ ಇಬ್ಬರೂ ಔಟಾಗಿ ಸೋಲಿನತ್ತ ಮುಖ ಮಾಡಿತು. ಕೊನೆಯಲ್ಲಿ 10 ರನ್ ಗಳಿಸಿ ಸ್ಯಾಮ್ ಕರ್ರನ್ ಔಟಾಗದೆ ಉಳಿದರು. ಆರಂಭಿಕರಾದ ಸಾಲ್ಟ್ 11, ನಾಯಕ ಬಟ್ಲರ್ 17 ರನ್ ಗಳಿಸಿ ನಿರ್ಗಮಿಸಿದರು. ಜಾನಿ ಬೈರ್ಸ್ಟೋವ್ 16 ರನ್ ಗಳಿಸಿ ಔಟಾದರು.ಕೇಶವ್ ಮಹಾರಾಜ್ ಮತ್ತು ರಬಾಡ ತಲಾ 2 ವಿಕೆಟ್ ಕಿತ್ತರು.

43 ರನ್‌ ಹೊಡೆದ ಡೇವಿಡ್‌ ಮಿಲ್ಲರ್‌ ಮತ್ತೋರ್ವ ಪ್ರಮುಖ ಸ್ಕೋರರ್‌ (28 ಎಸೆತ, 4 ಬೌಂಡರಿ, 2 ಸಿಕ್ಸರ್‌). ಅರ್ಧ ಶತಕದ ಹಾದಿಯಲ್ಲಿದ್ದ ಅವರು ಅಂತಿಮ ಓವರ್‌ನಲ್ಲಿ ಔಟಾದರು. ರೀಝ ಹೆಂಡ್ರಿಕ್ಸ್‌ ಗಳಿಕೆ 19 ರನ್‌. ಇಂಗ್ಲೆಂಡ್‌ ಪರ ಜೋಫ್ರಾ ಆರ್ಚರ್‌ 40 ರನ್ನಿಗೆ 3 ವಿಕೆಟ್‌ ಉರುಳಿಸಿದರು. ಮೊಯಿನ್‌ ಅಲಿ ಮತ್ತು ಆದಿಲ್‌ ರಶೀದ್‌ ಒಂದೊಂದು ವಿಕೆಟ್‌ ಕೆಡವಿದರು. ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ ತಂಡಗಳೆರಡೂ ಮೊದಲ ಸೂಪರ್‌-8 ಪಂದ್ಯದಲ್ಲಿ ಜಯ ಸಾಧಿಸಿದ್ದವು.ಇಂದಿನ ಪಂದ್ಯದ ಸೋಲು ಇಂಗ್ಲೆಂಡ್ ಗೆ ಆಘಾತ ನೀಡಿದೆ ಆದರೂ ಸೆಮಿ ಪ್ರವೇಶಕ್ಕೆ ಇನ್ನೂ ಅವಕಾಶವಿದೆ.

Advertisement

Udayavani is now on Telegram. Click here to join our channel and stay updated with the latest news.

Next