Advertisement

ಚಾಂಪಿಯನ್‌ ಪಟ್ಟಕ್ಕೆ ಇಂದು ಫೈಟ್‌

01:35 AM Jul 14, 2019 | Sriram |

4ನೇ ಫೈನಲ್‌ನಲ್ಲಾದರೂ ಅದೃಷ್ಟ ಕೈಹಿಡಿಯುವ ನಿರೀಕ್ಷೆಯಲ್ಲಿ ಇಂಗ್ಲೆಂಡ್‌ನ್ಯೂಜಿಲ್ಯಾಂಡಿಗೆ ವಿಲಿಯಮ್ಸನ್‌,ಟೇಲರ್‌, ಬೌಲರ್‌ಗಳೇ ಶಕ್ತಿ

Advertisement

ಲಂಡನ್‌: ಕಳೆದ ಒಂದೂವರೆ ತಿಂಗಳಿಂದ ಕ್ರಿಕೆಟ್‌ ಜನಕರ ನಾಡಿನಲ್ಲಿ ಸಾಗಿದ ವಿಶ್ವಕಪ್‌ ಕ್ರಿಕೆಟ್‌ ಕೂಟ ಅಂತಿಮ ಹಂತಕ್ಕೆ ತಲುಪಿದೆ. ಇಲ್ಲಿನ ಐತಿಹಾಸಿಕ ಲಾರ್ಡ್ಸ್‌ ಮೈದಾನದಲ್ಲಿ ಹೊಸ ತಂಡವೊಂದು ವಿಶ್ವ ಚಾಂಪಿಯನ್‌ ಪಟ್ಟಕ್ಕೇರಲಿದೆ.

ಚಾಂಪಿಯನ್‌ ಪಟ್ಟಕ್ಕೇರಲು ರವಿವಾರ ನಡೆಯುವ ಫೈನಲ್‌ ಸಮರದಲ್ಲಿ ನ್ಯೂಜಿಲ್ಯಾಂಡ್‌ ಮತ್ತು ಇಂಗ್ಲೆಂಡ್‌ ಪರಸ್ಪರ ಮುಖಾಮುಖೀಯಾಗಲಿದೆ. ಅದೃಷ್ಟದ ಬಲದಿಂದ ನಾಕೌಟ್‌ ಹಂತಕ್ಕೇರಿ ಬಲಿಷ್ಠ ಭಾರತವನ್ನು ಬಗ್ಗುಬಡಿದ ನ್ಯೂಜಿಲ್ಯಾಂಡ್‌ ಮತ್ತು ಆತಿಥ್ಯ ಯೋಗದ ಇಂಗ್ಲೆಂಡ್‌ ತಂಡವು ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯವನ್ನು ಉರುಳಿಸಿ ಫೈನಲಿಗೇರಿದ ಸಾಧನೆ ಮಾಡಿದ್ದವು.

ಇಂಗ್ಲೆಂಡ್‌ ಫೇವರಿಟ್‌
ತವರಿನ ಅಭಿಮಾನಿಗಳ ಲಾಭದ ಜತೆ ಬಲಿಷ್ಠ ಬ್ಯಾಟಿಂಗ್‌ ಶಕ್ತಿ ಹೊಂದಿರುವ ಇಂಗ್ಲೆಂಡ್‌ ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡವೆನಿಸಿದೆ. ನಾಲ್ಕನೇ ಬಾರಿ ಅದೃಷ್ಟ ಕೈಹಿಡಿಯುವ ನಿರೀಕ್ಷೆಯನ್ನು ಹೊಂದಿದೆ. 1979, 1987 ಮತ್ತು 1992ರ ವಿಶ್ವಕಪ್‌ನ ಫೈನಲ್‌ನಲ್ಲಿ ಇಂಗ್ಲೆಂಡ್‌ ಸೋತು ನಿರಾಶೆ ಅನುಭವಿಸಿತ್ತು. ಜಾನಿ ಬೇರ್‌ಸ್ಟೊ, ಜಾಸನ್‌ ರಾಯ್‌, ಜೋ ರೂಟ್‌, ಜಾಸ್‌ ಬಟ್ಲರ್‌ ಮತ್ತು ಬೆನ್‌ ಸ್ಟೋಕ್ಸ್‌ ಇಂಗ್ಲೆಂಡಿನ ಬ್ಯಾಟಿಂಗ್‌ ಶಕ್ತಿಯಾಗಿದ್ದಾರೆ. ಅವರಲ್ಲಿ ಒಂದಿಬ್ಬರು ಮಿಂಚಿದರೂ ಇಂಗ್ಲೆಂಡ್‌ ಲಾರ್ಡ್ಸ್‌ನಲ್ಲಿ ವಿಜಯೋತ್ಸವ ಆಚರಿಸುವುದು ಗ್ಯಾರಂಟಿ.

ಈ ಕೂಟದಲ್ಲಿ ರಾಯ್‌ ಮತ್ತು ಬೇರ್‌ಸ್ಟೊ ಪ್ರಚಂಡ ಫಾರ್ಮ್ನಲ್ಲಿದ್ದಾರೆ. ಆರಂಭಿಕರಾದ ಅವರಿಬ್ಬರು 400 ಪ್ಲಸ್‌ ರನ್‌ ಪೇರಿಸಿದ ಸಾಧನೆ ಮಾಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಜೋ ರೂಟ್‌ ಭರ್ಜರಿಯಾಗಿ ಆಡುತ್ತಿದ್ದಾರೆ. ಅವರು ಈಗಾಗಲೇ ಈ ಕೂಟದಲ್ಲಿ 549 ರನ್‌ ಪೇರಿಸಿದ್ದಾರೆ. ಬೆನ್‌ ಸ್ಟೋಕ್ಸ್‌, ಬಟ್ಲರ್‌ ಮತ್ತೆ ಮಿಂಚಿದರೆ ತಂಡ ಬೃಹತ್‌ ಮೊತ್ತ ಪೇರಿಸಬಹುದು.

Advertisement

ಲಾರ್ಡ್ಸ್‌ ಪಿಚ್‌ ಯಾವುದೇ ಸ್ಥಿತಿಯಲ್ಲಿದ್ದರೂ ಇಂಗ್ಲೆಂಡಿನ ಬೌಲಿಂಗ್‌ ಕೂಡ ಅಷ್ಟೇ ಪರಿಣಾಮಕಾರಿಯಾಗಿದೆ. ಜೋಫ‌Å ಆರ್ಚರ್‌, ಕ್ರಿಸ್‌ ವೋಕ್ಸ್‌, ಲಿಯಮ್‌ ಪ್ಲಂಕೆಟ್‌ ಉತ್ತಮ ದಾಳಿ ಸಂಘಟಿಸಿದ್ದಾರೆ. ಅವರೊಂದಿಗೆ ಮಾರ್ಕ್‌ ವುಡ್‌ ಮತ್ತು ರಶೀದ್‌ ಕೂಡ ಪರಿಣಾಮಕಾರಿಯಾಗಿ ದಾಳಿ ನಡೆಸಿದ್ದಾರೆ.

ಈ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ಅಮೋಘ ನಿರ್ವಹಣೆ ನೀಡುತ್ತ ಮುನ್ನಡೆದಿದೆ. ಲೀಗ್‌ ಹಂತದಲ್ಲಿ ನ್ಯೂಜಿಲ್ಯಾಂಡ್‌ ತಂಡವನ್ನು ಭಾರೀ ಅಂತರದಿಂದ ಸೋಲಿಸಿದ ಇಂಗ್ಲೆಂಡ್‌ ಅಧಿಕಾರಯುತವಾಗಿ ಸೆಮಿಫೈನಲ್‌ ತಲುಪಿ ಮೆರೆದಿದೆ. ಹಾಲಿ ಚಾಂಪಿಯನ್‌ ಆಸ್ಟ್ರೇಲಿಯವನ್ನು ಪಂದ್ಯದ ಪ್ರತಿಯೊಂದು ವಿಭಾಗದಲ್ಲೂ ಬಗ್ಗುಬಡಿದ ಇಂಗ್ಲೆಂಡ್‌ ಫೈನಲಿಗೇರಿದೆ.

ಇಂಗ್ಲೆಂಡಿಗೆ ಗೆಲ್ಲುವ ಯೋಗ
ಕಳೆದ ಎರಡು ವಿಶ್ವಕಪ್‌ ವೇಳೆ ಆತಿಥ್ಯ ವಹಿಸಿದ ತಂಡವೇ ಪ್ರಶಸ್ತಿ ಗೆದ್ದಿರುವ ಕಾರಣ ಈ ಬಾರಿ ಇಂಗ್ಲೆಂಡಿಗೆ ಗೆಲ್ಲುವ ಯೋಗವಿದೆ. 2011ರಲ್ಲಿ ಆತಿಥ್ಯ ವಹಿಸಿದ ಭಾರತ ಫೈನಲ್‌ನಲ್ಲಿ ಶ್ರೀಲಂಕಾವನ್ನು ಮಣಿಸಿ ಪ್ರಶಸ್ತಿ ಜಯಿಸಿತ್ತು. 2015ರಲ್ಲಿ ಆಸ್ಟ್ರೇಲಿಯವು ವಿಶ್ವಕಪ್‌ನ ಆತಿಥ್ಯ ವಹಿಸಿತ್ತು. ಫೈನಲ್‌ನಲ್ಲಿ ನ್ಯೂಜಿಲ್ಯಾಂಡ್‌ ತಂಡವನ್ನು ಕೆಡಹಿ ಪ್ರಶಸ್ತಿ ಗೆದ್ದಿತ್ತು. ಈ ಬಾರಿಯ ವಿಶ್ವಕಪ್‌ನ ಆತಿಥ್ಯವನ್ನು ಇಂಗ್ಲೆಂಡ್‌ ವಹಿಸಿದೆ ಮಾತ್ರವಲ್ಲದೇ ಪ್ರಶಸ್ತಿ ಗೆಲ್ಲುವ ಹಂತದವರೆಗೆ ಏರಿದೆ.

ನ್ಯೂಜಿಲ್ಯಾಂಡಿಗೆ ಅದೃಷ್ಟದ ಬಲ
ಇಂಗ್ಲೆಂಡಿಗೆ ಹೋಲಿಸಿದರೆ ನ್ಯೂಜಿಲ್ಯಾಂಡಿನ ಬ್ಯಾಟಿಂಗ್‌ ಅಷ್ಟೊಂದು ಬಲಿಷ್ಠವಾಗಿಲ್ಲ. ಆರಂಭಿಕರಾದ ಮಾರ್ಟಿನ್‌ ಗಪ್ಟಿಲ್‌ ಮತ್ತು ಕಾಲಿನ್‌ ಮುನ್ರೊ ಮಿಂಚಲು ವಿಫ‌ಲರಾಗಿದ್ದಾರೆ. ನಾಯಕ ಕೇನ್‌ ವಿಲಿಯಮ್ಸನ್‌ ಮತ್ತು ರಾಸ್‌ ಟೇಲರ್‌ ಬ್ಯಾಟಿಂಗ್‌ ಶಕ್ತಿಯಾಗಿದ್ದಾರೆ. ವಿಲಿಯಮ್ಸನ್‌ ಇಷ್ಟರವರೆಗೆ 548 ರನ್‌ ಪೇರಿಸಿದರೆ ಟೇಲರ್‌ 335 ರನ್‌ ಗಳಿಸಿದ್ದಾರೆ. ಅವರಿಬ್ಬರೂ ಫೈನಲ್‌ನಲ್ಲೂ ಅಮೋಘವಾಗಿ ಆಡಿದರೆ ಕಿವೀಸ್‌ಗೂ ಅವಕಾಶವಿದೆ. ಅವರ ಮತ್ತು ಬೌಲರ್‌ಗಳ ಉತ್ತಮ ನಿರ್ವಹಣೆಯಿಂದ ನ್ಯೂಜಿಲ್ಯಾಂಡ್‌ ಫೈನಲ್‌ವರೆಗೆ ಮುನ್ನಡೆದಿದೆ. ಇದರ ಜತೆ ಅದೃಷ್ಟದ ಬಲವೂ ಇತ್ತು.

1992ರ ವಿಶ್ವಕಪ್‌ನಲ್ಲಿ ಪಾಕಿಸ್ಥಾನವು
ಅದೃಷ್ಟದ ಬಲದಿಂದ ನಾಕೌಟ್‌ ಹಂತಕ್ಕೇರಿ ಪ್ರಚಂಡ ನಿರ್ವಹಣೆ ನೀಡುತ್ತ ಪ್ರಶಸ್ತಿ ಜಯಿಸಿತ್ತು. ಈ ಬಾರಿ ಅದೇ ರೀತಿ ನ್ಯೂಜಿಲ್ಯಾಂಡ್‌ ಕೂಡ ಅದೃಷ್ಟದ ಬಲದಿಂದ ನಾಕೌಟ್‌ ಹಂತಕ್ಕೇರಿದ್ದು ಸೆಮಿಫೈನಲ್‌ನಲ್ಲಿ ಬಲಿಷ್ಠ ಭಾರತವನ್ನು ಬೌಲರ್‌ಗಳ ಸಹಾಯದಿಂದ ಕೆಡಹಿತ್ತು. ಟ್ರೆಂಟ್‌ ಬೌಲ್ಟ್ ಮತ್ತು ಮ್ಯಾಟ್‌ ಹೆನ್ರಿ ಮತ್ತೂಮ್ಮೆ ನಿಖರ ದಾಳಿ ಸಂಘಟಿಸಿದರೆ ನ್ಯೂಜಿಲ್ಯಾಂಡಿಗೂ ಪ್ರಶಸ್ತಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ.

ವಿಶ್ವಕಪ್‌ ಎತ್ತುವ ಬಗ್ಗೆ ಅಲೋಚನೆ ಮಾಡಿಲ್ಲ: ಮಾರ್ಗನ್‌
ಕ್ರೀಡೆ ಯಾವಾಗಲೂ ಚಂಚಲೆಯಾಗಿ ಇರುತ್ತದೆ. ಹಾಗಾಗಿ ಲಾರ್ಡ್ಸ್‌ ಬಾಲ್ಕನಿಯಲ್ಲಿ ವಿಶ್ವಕಪ್‌ ಎತ್ತಿ ಹಿಡಿಯುವ ಬಗ್ಗೆ ನಾನು ಅಲೋಚನೆ ಮಾಡಲಿಕ್ಕೆ ಹೋಗಲಿಲ್ಲ ಎಂದು ಇಂಗ್ಲೆಂಡ್‌ ನಾಯಕ ಮಾರ್ಗನ್‌ ಹೇಳಿದ್ದಾರೆ.

ಪ್ಲಸ್‌-
ಇಂಗ್ಲೆಂಡ್‌
·  ಆರಂಭಿಕರಾದ ಜಾಸನ್‌ ರಾಯ್‌ ಮತ್ತು ಜಾನಿ ಬೇರ್‌ಸ್ಟೊ ಅವರ ಪ್ರಚಂಡ ಫಾರ್ಮ್
·  ಬೌಲಿಂಗ್‌ ಕೊರತೆಯಿಂದ ಹಿನ್ನಡೆಯಾಗುತ್ತಿದ್ದ ಇಂಗ್ಲೆಂಡ್‌ಗೆ ವೋಕ್ಸ್‌, ಜೋಫ‌ ಆರ್ಚರ್‌ ಬಲತುಂಬಿದ್ದು ತಂಡಕ್ಕೆ ಹಿಚ್ಚಿನ ಬಲ ತಂದಿದೆ.
·  ತವರಿನ ಪಂದ್ಯವಾದ್ದರಿಂದ ಹೆಚ್ಚಿನ ಒತ್ತಡದಲ್ಲಿ ಆಡುವ ಸ್ಥಿತಿ.
·  ಫೇವರಿಟ್‌ ತಂಡವಾಗಿದ್ದರಿಂದ ಆಟಗಾರರ ಮೇಲೆ ಒತ್ತಡ ಅಧಿಕ.

ಮೈನಸ್‌
ನ್ಯೂಜಿಲ್ಯಾಂಡ್‌:
·  ನಾಯಕ ವಿಲಿಯಮ್ಸನ್‌ ಮತ್ತು ರಾಸ್‌ ಟೇಲರ್‌ ಬೃಹತ್‌ ಮೊತ್ತದ ಜತೆಯಾಟ ತಂಡಕ್ಕೆ ಬಲ.
·  ತಂಡದ ಬೌಲಿಂಗ್‌ ಮತ್ತು ಫೀಲ್ಡಿಂಗ್‌ ಉತ್ತಮವಾಗಿರುವುದು ಕಿವೀಸ್‌ಗೆ ಆನೆ ಬಲ.
·  ಆರಂಭಿಕ ಆಟಗಾರರಾದ ಗಪ್ಟಿಲ್‌, ಕಾಲಿನ್‌ ಮುನ್ರೊ ಬ್ಯಾಟಿಂಗ್‌ ವೈಫ‌ಲ್ಯ.
·  ನಿಧಾನಗತಿಯ ರನ್‌ ಗಳಿಕೆ, ವಿಲಿಯಮ್ಸನ್‌-ಟೇಲರ್‌ ಮಾತ್ರ ನಂಬಿಗಸ್ಥ ಆಟಗಾರರು.

ಉಭಯ ತಂಡಗಳು
ಇಂಗ್ಲೆಂಡ್‌: ಜಾಸನ್‌ ರಾಯ್‌, ಜಾನಿ ಬೇರ್‌ಸ್ಟೊ, ಜೋ ರೂಟ್‌, ಇಯಾನ್‌ ಮಾರ್ಗನ್‌, ಬೆನ್‌ ಸ್ಟೋಕ್ಸ್‌, ಜಾಸ್‌ ಬಟ್ಲರ್‌, ಕ್ರಿಸ್‌ ವೋಕ್ಸ್‌, ಲಿಯಮ್‌ ಪ್ಲಂಕೆಟ್‌/ಮೊಯಿನ್‌ ಅಲಿ, ಆದಿಲ್‌ ರಶೀದ್‌, ಜೋಫ‌ಆರ್ಚರ್‌, ಮಾರ್ಕ್‌ ವುಡ್‌.

ನ್ಯೂಜಿಲ್ಯಾಂಡ್‌: ಮಾರ್ಟಿನ್‌ ಗಪ್ಟಿಲ್‌, ಕಾಲಿನ್‌ ಮುನ್ರೊ, ಕೇನ್‌ ವಿಲಿಯಮ್ಸನ್‌ (ನಾಯಕ), ರಾಸ್‌ ಟೇಲರ್‌, ಟಾಮ್‌ ಲ್ಯಾಥಂ, ಜಿಮ್ಮಿ ನೀಶಮ್‌, ಕಾಲಿನ್‌ ಡಿ ಗ್ರ್ಯಾಂಡ್‌ ಹೋಮ್‌, ಮಿಚೆಲ್‌ ಸ್ಯಾಂಟ್ನರ್‌, ಲಾಕಿ ಫ‌ರ್ಗ್ಯುಸನ್‌, ಮ್ಯಾಟ್‌ ಹೆನ್ರಿ, ಟ್ರೆಂಟ್‌ ಬೌಲ್ಟ್.

Advertisement

Udayavani is now on Telegram. Click here to join our channel and stay updated with the latest news.

Next