ಹ್ಯಾಮಿಲ್ಟನ್: ಹೊಸ ಚೆಂಡಿನ ದಾಳಿ ಯಲ್ಲಿ ಭಾರೀ ಯಶಸ್ಸು ಸಾಧಿಸಿದ ಆತಿಥೇಯ ನ್ಯೂಜಿಲ್ಯಾಂಡ್ ತಂಡವು ಇಂಗ್ಲೆಂಡ್ ತಂಡದೆದುರಿನ ಮೂರನೇ ಟೆಸ್ಟ್ ಪಂದ್ಯವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ. ದ್ವಿತೀಯ ದಿನದಾಟದ ಅಂತ್ಯಕ್ಕೆ ನ್ಯೂಜಿಲ್ಯಾಂಡ್ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮೂರು ವಿಕೆಟಿಗೆ 136 ರನ್ ಗಳಿಸಿದ್ದು ಒಟ್ಟಾರೆ 340 ರನ್ ಮುನ್ನಡೆಯಲ್ಲಿದೆ.
ಈ ಮೊದಲು ಮ್ಯಾಟ್ ಹೆನ್ರಿ, ವಿಲ್ ಒ’ರೂರ್ಕ್ ಮತ್ತು ಮಿಚೆಲ್ ಸ್ಯಾಂಟ್ನರ್ ಅವರ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡವು ಕೇವಲ 143 ರನ್ನಿಗೆ ಆಲೌಟಾಯಿತು. ಇದ ರಿಂದಾಗಿ ನ್ಯೂಜಿಲ್ಯಾಂಡ್ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 204 ರನ್ ಮುನ್ನಡೆ ಸಾಧಿಸುವಂತಾಯಿತು. ಈ ಮೂವರು ಬೌಲರ್ ಇಂಗ್ಲೆಂಡಿನ 10 ವಿಕೆಟ್ ಹಾರಿಸಿ ಭಾರೀ ಹೊಡೆತ ನೀಡಿದ್ದರು.
ದಿನದಾಟ ಮುಗಿಯಲು ಸ್ವಲ್ಪ ಸಮಯ ವಿರುವಾಗ ವಿಲ್ ಯಂಗ್ ಔಟಾದ ಕಾರಣ ಒ’ರೂರ್ಕ್ ಎರಡನೇ ಬಾರಿ ಬ್ಯಾಟಿಂಗ್ ನಡೆಸಲು ಆಗಮಿಸಿದರು. ನೈಟ್‌ವಾಚ್‌ಮನ್ ಆಗಿ ಬಂದಿದ್ದ ಅವರು ಶೂನ್ಯಕ್ಕೆ ಔಟಾಗಿ ನಿರಾಶೆ ಮೂಡಿಸಿದರು. ದಿನದಾಟದ ಅಂತ್ಯಕ್ಕೆ ಕೇನ್ ವಿಲಿಯಮ್ಸನ್ 50 ಮತ್ತು ರಚಿನ್ ರವೀಂದ್ರ 2 ರನ್ನುಗಳಿಂದ ಆಡುತ್ತಿದ್ದರು. ಇದು ವಿಲಿಯಮ್ಸನ್ ಅವರ 38ನೇ ಅರ್ಧಶತಕವಾಗಿದೆ.
ಈ ಸರಣಿ ಬಳಿಕ ನಿವೃತ್ತಿಯಾಗಲಿರುವ ಟಿಮ್ ಸೌಥಿ ಅವರ ಬದಲಿಗೆ ಹೊಸ ಚೆಂಡಿನ ದಾಳಿಯ ನೇತೃತ್ವ ವಹಿಸಲಿರುವ ಹೆನ್ರಿ ಮತ್ತು ಒ’ರೂರ್ಕ್ ಈ ಪಂದ್ಯದಲ್ಲಿ ಗಮನಾರ್ಹ ದಾಳಿ ಸಂಘಟಿಸಿ ಇಂಗ್ಲೆಂಡ್ ಕುಸಿತಕ್ಕೆ ಕಾರಣರಾದರು. ಅವರಿಬ್ಬರು ಸೇರಿ 7 ವಿಕೆಟ್ ಹಾರಿಸಿದರು. ಸ್ಯಾಂಟ್ನರ್ 7 ರನ್ನಿಗೆ 3 ವಿಕೆಟ್ ಕಿತ್ತು ಇಂಗ್ಲೆಂಡಿನ ಇನ್ನಿಂಗ್ಸ್ ಅಂತ್ಯಗೊಳಿಸಿದರು. ಹೆನ್ನಿ 48 ರನ್ನಿಗೆ 4 ಮತ್ತು ಒ’ರೂರ್ಕ್ 33 ರನ್ನಿಗೆ 3 ವಿಕೆಟ್ ಉರುಳಿಸಿದರು.
ಸಂಕ್ಷಿಪ್ತ ಸ್ಕೋರು: ನ್ಯೂಜಿಲ್ಯಾಂಡ್ 347 ಮತ್ತು ಮೂರು ವಿಕೆಟಿಗೆ 136 (ವಿಲಿಯಮ್ಸನ್ 50 ಬ್ಯಾಟಿಂಗ್, ವಿಲ್ ಯಂಗ್ 60, ಬೆನ್ ಸ್ಟೋಕ್ಸ್ 45ಕ್ಕೆ 2), ಇಂಗ್ಲೆಂಡ್ 143 (ಜೋ ರೂಟ್ 32, ಬೆನ್ ಸ್ಟೋಕ್ಸ್27, ಮ್ಯಾಟ್ ಹೆನ್ರಿ 48ಕ್ಕೆ 4, ವಿಲ್ ಒ’ರೂರ್ಕ್ 33ಕ್ಕೆ 3, ಮಿಚೆಲ್ ಸ್ಯಾಂಟ್ನರ್ 7ಕ್ಕೆ 3).