ಮುಂಬೈ: ಸದ್ಯ ಐಪಿಎಲ್ ಗುಂಗಿನಲ್ಲಿರುವ ಭಾರತ ಏಕದಿನ ವಿಶ್ವಕಪ್ ಗೂ ಸಿದ್ದತೆ ನಡೆಸುತ್ತಿದೆ. 2023ರ ಏಕದಿನ ವಿಶ್ವಕಪ್ ಅಹಮದಾಬಾದ್‌ನಲ್ಲಿ ಆರಂಭಗೊಂಡು ಮುಕ್ತಾಯವಾಗಲಿದೆ. ಅಕ್ಟೋಬರ್ 5 ರಂದು ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯ ಉದ್ಘಾಟನಾ ಪಂದ್ಯವಾಗಿದ್ದು, ನವೆಂಬರ್ 19 ರಂದು ಮೊಟೆರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ನಡೆಯಲಿದೆ.
ಭಾರತದ ಆರಂಭಿಕ ಪಂದ್ಯ ಆಸ್ಟ್ರೇಲಿಯಾ ವಿರುದ್ಧ ನಡೆಯಲಿದ್ದು, ಚೆನ್ನೈನಲ್ಲಿ ನಡೆಯುವ ಸಾಧ್ಯತೆಯಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಬ್ಲಾಕ್‌ಬಸ್ಟರ್ ಪಂದ್ಯವು ಭಾನುವಾರದಂದು ಅಕ್ಟೋಬರ್ 15 ರಂದು ಅಹಮದಾಬಾದ್ ನಲ್ಲಿ ನಡೆಯಲಿದೆ ಎಂದು ವಿಶ್ವಸನೀಯ ಮೂಲಗಳನ್ನು ಉಲ್ಲೇಖಿಸಿ ಕ್ರಿಕ್ ಬಜ್ ವರದಿ ಮಾಡಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶೀಘ್ರದಲ್ಲೇ ವೇಳಾಪಟ್ಟಿ ಬಿಡುಗಡೆ ಮಾಡಲಿದೆ.
ಏಷ್ಯಾ ಕಪ್ ನ ಮುಂದುವರಿದ ಬಿಕ್ಕಟ್ಟು ಮತ್ತು ಅನಿಶ್ಚಿತತೆಯಿಂದ ಸ್ವತಂತ್ರವಾಗಿ ವಿಶ್ವಕಪ್ ಗಾಗಿ ಪಾಕಿಸ್ತಾನ ಭಾರತಕ್ಕೆ ಪ್ರವಾಸ ಮಾಡಲು ಒಪ್ಪಿಕೊಂಡಿದೆ ಎಂದು ಕ್ರಿಕ್ ಬಜ್ ಖಚಿತಪಡಿಸಿದೆ.
Related Articles
ಇಲ್ಲಿಯವರೆಗಿನ ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ ಪಾಕಿಸ್ತಾನವು ತನ್ನ ಪಂದ್ಯಗಳನ್ನು ಅಹಮದಾಬಾದ್, ಹೈದರಾಬಾದ್, ಚೆನ್ನೈ ಮತ್ತು ಬೆಂಗಳೂರಿನಲ್ಲಿ ಆಡಲಿದೆ.
ಇದನ್ನೂ ಓದಿ:ವಯಸ್ಸು ಎಪ್ಪತ್ತೈದು, ಬಣ್ಣದ ಬದುಕಿಗೆ 50: ಹಿರಿಯ ನಟ ಶ್ರೀನಿವಾಸ ಮೂರ್ತಿ ಮನದ ಮಾತು..
ಪ್ರತಿ ತಂಡವು ಒಂಬತ್ತು ಲೀಗ್ ಪಂದ್ಯಗಳನ್ನು ಆಡುತ್ತದೆ. ಒಟ್ಟಾರೆಯಾಗಿ 10 ತಂಡಗಳು 48 ಪಂದ್ಯಗಳು ವಿಶ್ವಕಪ್ ನಲ್ಲಿ ಆಡಲಿದೆ. ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ವಿಶ್ವಕಪ್ ಗೆ ಅರ್ಹತೆ ಪಡೆದಿವೆ.
ಅಹಮದಾಬಾದ್, ಹೈದರಾಬಾದ್, ಚೆನ್ನೈ, ಬೆಂಗಳೂರು, ಕೋಲ್ಕತ್ತಾ, ದೆಹಲಿ, ಇಂದೋರ್, ಧರ್ಮಶಾಲಾ, ಗುವಾಹಟಿ, ರಾಜ್‌ಕೋಟ್, ರಾಯ್‌ಪುರ ಮತ್ತು ಮುಂಬೈ ಗೊತ್ತುಪಡಿಸಿದ ಸ್ಥಳಗಳಾಗಿದ್ದು, ಮೊಹಾಲಿ ಮತ್ತು ನಾಗ್ಪುರ ಪಟ್ಟಿಯಿಂದ ತಪ್ಪಿಸಿಕೊಂಡಿವೆ. ಮುಂಬೈನ ವಾಂಖೆಡೆಯಲ್ಲಿ ಸೆಮಿಫೈನಲ್ ಪಡೆಯುವ ಸಾಧ್ಯತೆಯಿದೆ.