Advertisement

ವನಿತಾ ವಿಶ್ವಕಪ್‌ ಕ್ರಿಕೆಟ್‌: ಅಜೇಯವಾಗಿ ಸೆಮಿಫೈನಲ್‌ ತಲುಪಿದ ಇಂಗ್ಲೆಂಡ್‌

12:00 AM Feb 22, 2023 | Team Udayavani |

ಕೇಪ್‌ ಟೌನ್‌: ತನ್ನ ಅಂತಿಮ ಲೀಗ್‌ ಪಂದ್ಯದಲ್ಲಿ ಪಾಕಿಸ್ಥಾನವನ್ನು 114 ರನ್ನುಗಳಿಂದ ಬಗ್ಗುಬಡಿದ ಇಂಗ್ಲೆಂಡ್‌ “ಬಿ’ ವಿಭಾಗದ ಅಜೇಯ ತಂಡವಾಗಿ ವನಿತಾ ಟಿ20 ವಿಶ್ವಕಪ್‌ ಕೂಟದ ಸೆಮಿಫೈನಲ್‌ಗೆ ಮುನ್ನುಗ್ಗಿದೆ.

Advertisement

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌ 6 ವಿಕೆಟ್‌ ನಷ್ಟಕ್ಕೆ ಈ ಕೂಟದಲ್ಲೇ ಗರಿಷ್ಠ 213 ರನ್‌ ಪೇರಿಸಿತು. ಈ ಬೃಹತ್‌ ಮೊತ್ತಕ್ಕೆ ಜವಾಬು ನೀಡಲು ವಿಫಲವಾದ ಪಾಕಿಸ್ಥಾನ 9 ವಿಕೆಟಿಗೆ 99 ರನ್‌ ಮಾಡಿತು. ಪಾಕ್‌ 4 ಪಂದ್ಯಗಳಲ್ಲಿ ಒಂದನ್ನಷ್ಟೇ ಜಯಿಸಿತ್ತು. ಈ ಪಂದ್ಯಕ್ಕೂ ಮೊದಲೇ ಕೂಟದಿಂದ ನಿರ್ಗಮಿಸಿತ್ತು.

ನಾಲ್ಕನ್ನೂ ಗೆದ್ದ ಇಂಗ್ಲೆಂಡ್‌
ಈ ಫಲಿತಾಂಶದೊಂದಿಗೆ ಇಂಗ್ಲೆಂಡ್‌ “ಬಿ’ ವಿಭಾಗದ ಅಗ್ರಸ್ಥಾನವನ್ನು ಕಾಯ್ದುಕೊಂಡಿತು. ಭಾರತ ದ್ವಿತೀಯ ಸ್ಥಾನದಲ್ಲೇ ಉಳಿಯಿತು. ಹರ್ಮನ್‌ಪ್ರೀತ್‌ ಕೌರ್‌ ಬಳಗವಿನ್ನು ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯವನ್ನು ಎದುರಿಸಲಿದೆ. ಗುರುವಾರ ನಡೆಯುವ ಈ ಮುಖಾಮುಖೀ ಕಳೆದ ಸಲದ ಫೈನಲ್‌ ಪಂದ್ಯದ ಪುನರಾವರ್ತನೆಯಾಗಲಿದೆ. ಇಂಗ್ಲೆಂಡ್‌ನ‌ ಸೆಮಿಫೈನಲ್‌ ಎದುರಾಳಿ ನ್ಯೂಜಿಲ್ಯಾಂಡ್‌ ಅಥವಾ ದಕ್ಷಿಣ ಆಫ್ರಿಕಾ. ಈ ದ್ವಿತೀಯ ಉಪಾಂತ್ಯ ಶುಕ್ರವಾರ ನಡೆಯಲಿದೆ.

ವ್ಯಾಟ್‌, ಸ್ಕಿವರ್‌ ಅಬ್ಬರ
ಓಪನರ್‌ ಡೇನಿಯಲ್‌ ವ್ಯಾಟ್‌, ಮಧ್ಯಮ ಕ್ರಮಾಂಕದ ನಥಾಲಿ ಸ್ಕಿವರ್‌ ಮತ್ತು ಕೀಪರ್‌ ಆ್ಯಮಿ ಜೋನ್ಸ್‌ ಅವರ ಆಕ್ರಮಣಕಾರಿ ಆಟದಿಂದ ಇಂಗ್ಲೆಂಡ್‌ ಇನ್ನೂರರ ಗಡಿ ದಾಟಿತು. ವ್ಯಾಟ್‌ ಮತ್ತು ಸ್ಕಿವರ್‌ ಅರ್ಧ ಶತಕ ಬಾರಿಸಿದರು.
ಸೋಫಿಯಾ ಡಂಕ್ಲಿ (2) ಮತ್ತು ಅಲೈಸ್‌ ಕ್ಯಾಪ್ಸಿ (6) ಬೇಗನೇ ಔಟಾದ ಬಳಿಕ ವ್ಯಾಟ್‌-ಸ್ಕಿವರ್‌ 74 ರನ್‌ ಜತೆಯಾಟ ನಿಭಾಯಿಸಿದರು. ಆನಂತರ ಸ್ಕಿವರ್‌-ಜೋನ್ಸ್‌ ಭರ್ತಿ 100 ರನ್‌ ಪೇರಿಸಿದರು.

ಅಜೇಯ 81 ರನ್‌ ಮಾಡಿದ ಸ್ಕಿವರ್‌ ಇಂಗ್ಲೆಂಡ್‌ನ‌ ಟಾಪ್‌ ಸ್ಕೋರರ್‌ (40 ಎಸೆತ, 12 ಬೌಂಡರಿ, 1 ಸಿಕ್ಸರ್‌). ವ್ಯಾಟ್‌ 33 ಎಸೆತಗಳಿಂದ 59 ರನ್‌ ಬಾರಿಸಿದರು (7 ಬೌಂಡರಿ, 2 ಸಿಕ್ಸರ್‌). ಅಂತಿಮ ಎಸೆತದಲ್ಲಿ ಔಟಾದ ಜೋನ್ಸ್‌ ಗಳಿಕೆ 47 ರನ್‌ (31 ಎಸೆತ, 5 ಬೌಂಡರಿ, 1 ಸಿಕ್ಸರ್‌).

Advertisement

ಬ್ಯಾಟಿಂಗ್‌ನಲ್ಲೂ ವಿಫಲವಾದ ಪಾಕ್‌ ಯಾವುದೇ ಹೋರಾಟ ನೀಡದೆ ಶರಣಾಯಿತು. ನೂರರ ಗಡಿಯನ್ನೂ ತಲುಪಲಾಗಲಿಲ್ಲ. 9ನೇ ಕ್ರಮಾಂಕದಲ್ಲಿ ಆಡಳಿದ ತುಬಾ ಹಸನ್‌ ಅವರದೇ ಸರ್ವಾಧಿಕ ಗಳಿಕೆ (28).

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌-5 ವಿಕೆಟಿಗೆ 213 (ಸ್ಕಿವರ್‌ ಔಟಾಗದೆ 81, ವ್ಯಾಟ್‌ 59, ಜೋನ್ಸ್‌ 47, ಫಾತಿಮಾ ಸನಾ 44ಕ್ಕೆ 2). ಪಾಕಿಸ್ಥಾನ-9 ವಿಕೆಟಿಗೆ 99 (ತುಬಾ ಹಸನ್‌ 28, ಫಾತಿಮಾ ಸನಾ ಔಟಾಗದೆ 16, ಕ್ಯಾಥರಿನ್‌ ಬ್ರಂಟ್‌ 14ಕ್ಕೆ 2, ಚಾರ್ಲೋಟ್‌ ಡೀನ್‌ 28ಕ್ಕೆ 2).

ಪಂದ್ಯಶ್ರೇಷ್ಠ: ನಥಾಲಿ ಸ್ಕಿವರ್‌.

Advertisement

Udayavani is now on Telegram. Click here to join our channel and stay updated with the latest news.

Next