Advertisement

ಎಂಜಿನಿಯರ್‌ಗಳು ಕಾಲಮಿತಿಯೊಳಗೆ ಯೋಜನೆ ಪೂರ್ಣಗೊಳಿಸಬೇಕು

01:05 PM May 06, 2017 | Team Udayavani |

ಬೆಂಗಳೂರು: ನೀರಾವರಿ ಯೋಜನೆಗಳನ್ನು ಕಾಲಮಿತಿಯೊಳಗೆ ಮುಗಿಸಿದರೆ ಜನರಿಗೂ ಅನುಕೂಲವಾಗಲಿದ್ದು, ಸರ್ಕಾರಕ್ಕೂ ಹಣ ಉಳಿತಾಯವಾಗಲಿದೆ. ಈ ನಿಟ್ಟಿನಲ್ಲಿ ಎಂಜಿನಿಯರ್‌ಗಳು ಗಮನ ಹರಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಎಂಜಿನಿಯರ್‌ಗಳಿಗೆ ಕಿವಿಮಾತು ಹೇಳಿದ್ದಾರೆ. ಜಲಸಂಪನ್ಮೂಲ ಇಲಾಖೆಯು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯ ಕ್ರಮದಲ್ಲಿ 2016ನೇ ಸಾಲಿನ ಎಸ್‌.ಜಿ.ಬಾಳೆಕುಂದ್ರಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಎಸ್‌.ಜಿ.ಬಾಳೆಕುಂದ್ರಿ ರಾಜ್ಯದ ಎಂಜಿನಿಯರಿಂಗ್‌ ಹಾಗೂ ನೀರಾವರಿ ಕ್ಷೇತ್ರದಲ್ಲಿ ಅವಿಸ್ಮರಣೀಯ ಕೆಲಸ ಮಾಡಿದ್ದಾರೆ. ಎಸ್‌.ಜಿ.ಬಾಳೆಕುಂದ್ರಿ ಅವರಂತೆ ಎತ್ತರದ ಮಟ್ಟಕ್ಕೆ ಬೆಳೆಯಲು
ಎಂಜಿನಿಯರ್‌ಗಳು ಮುಂದಾಗಬೇಕು.

Advertisement

ಅಂದಾಜು ಪಟ್ಟಿಗಳನ್ನು ಪದೇಪದೆ ಎಂಜಿನಿಯರ್‌ಗಳು ಪರಿಷ್ಕರಿಸುತ್ತಿರುವುದು ಸರಿಯಲ್ಲ. ಕಾಲಕಾಲಕ್ಕೆ ಸುಧಾರಿತ
ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಎಂಜಿನಿಯರ್‌ಗಳು ಕೌಶಲ್ಯ ಹೆಚ್ಚಿಸಿಕೊಳ್ಳಬೇಕು ಎಂದರು. ರಾಜ್ಯದಲ್ಲಿ
ನೀರಿನ ನಿರ್ವಹಣೆ ಚೆನ್ನಾಗಿಲ್ಲ. ನೀರನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದರೆ ಇನ್ನಷ್ಟು ಬೆಳೆ ಬೆಳೆಯಲು ಅವಕಾಶವಿದೆ. ಇತ್ತೀಚೆಗೆ ದುಬೈಗೆ ತೆರಳಿದ್ದಾಗ ಅಲ್ಲಿಯೂ ಸಾಕಷ್ಟು ಹಸಿರು ಪ್ರದೇಶವನ್ನು ಕಂಡೆ. ಇಸ್ರೇಲ್‌, ದುಬೈನಲ್ಲಿನ ನೀರಿನ ನಿರ್ವಹಣೆ ವಿಧಾನದ ಬಗ್ಗೆ ಗಮನ ಹರಿಸಬೇಕಿದೆ ಎಂದು ತಿಳಿಸಿದರು.

ಜಲಸಂಪನ್ಮೂಲ ಸಚಿವ ಡಾ.ಎಂ.ಬಿ. ಪಾಟೀಲ್‌, ಸರ್‌ ಎಂ.ವಿಶ್ವೇಶ್ವರಯ್ಯ ದೇಶ ಕಂಡ ಶ್ರೇಷ್ಠ ಎಂಜಿನಿಯರ್‌. ಎಸ್‌.ಜಿ.ಬಾಳೆಕುಂದ್ರಿ ಅವರನ್ನು ಎರಡನೇ ವಿಶ್ವೇಶ್ವರಯ್ಯ ಎಂದು ಕರೆಯಬಹುದು. ಜಲಸಂಪನ್ಮೂಲ ಕ್ಷೇತ್ರದಲ್ಲಿ 20 ವರ್ಷಗಳಲ್ಲಿ ಆಗದ ಕೆಲಸ ಕಳೆದ ನಾಲ್ಕು ವರ್ಷಗಳಲ್ಲಿ ನಡೆದಿದೆ. ಹಿಂದಿನ ಬಿಜೆಪಿ ಸರ್ಕಾರವು ಐದು ವರ್ಷದಲ್ಲಿ ಕೇವಲ 18,000 ಕೋಟಿ ರೂ. ಅನುದಾನ ನೀಡಿದ್ದರೆ, ಆದರೆ ನಮ್ಮ ಸರ್ಕಾರದಲ್ಲಿ ಈವರೆಗೆ 45,000 ಕೋಟಿ ರೂ. ಖರ್ಚು ಮಾಡಿದ್ದು, ಐದು ವರ್ಷದಲ್ಲಿ ಒಟ್ಟು 61,000 ಕೋಟಿ ರೂ. ವೆಚ್ಚ ಮಾಡಲಾಗುವುದು ಎಂದು ಹೇಳಿದರು. 

ಎಂಜಿನಿಯರ್‌ ಲೆಕ್ಕ ತಪ್ಪಾಗಿತ್ತು!
ಈ ಹಿಂದೆ ವಿಧಾನಸಭೆ ವಿರೋಧ ಪಕ್ಷದ ನಾಯಕನಾಗಿದ್ದಾಗ ಕೂಡಲಸಂಗಮದವರೆಗೆ ಪಾದಯಾತ್ರೆ ನಡೆಸುವಾಗ ರಾಜ್ಯದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಎಂಜಿನಿಯರ್‌ರೊಬ್ಬರು ಸುಮಾರು 50,000 ಕೋಟಿ ರೂ. ಬೇಕಾಗಲಿದೆ ಎಂದು ಹೇಳಿದ್ದರು. ಅದರಂತೆ ಐದು ವರ್ಷದಲ್ಲಿ 50,000 ಕೋಟಿ ರೂ. ವೆಚ್ಚ ಮಾಡಲು ನಿರ್ಧರಿಸಲಾಯಿತು. ಆದರೆ ಇಂದು ಒಂದು ಲಕ್ಷ ಕೋಟಿ ರೂ. ನೀಡಿದರೂ ನೀರಾವರಿ ಯೋಜನೆಗಳು ಯಾವಾಗ ಪೂರ್ಣಗೊಳ್ಳಲಿವೆ ಎಂದು ನಿಖರವಾಗಿ ಹೇಳಲಾಗದು! ಹೀಗೆಂದು ಹೇಳಿದವರು ಸ್ವತಃ ಸಿಎಂ ಸಿದ್ದರಾಮಯ್ಯ. ಎಂಜಿನಿಯರ್‌ಗಳು ಕಾಲಮಿತಿಯೊಳಗೆ ಕಾಮಗಾರಿ ಮುಗಿಸದಿರುವ ಬಗ್ಗೆ ಪ್ರಸ್ತಾಪಿಸಿದ ಅವರು, “ಇಂದು 50,000 ಕೋಟಿ ರೂ. ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದಿರಲಿ, ಕೃಷ್ಣಾ ಮೇಲ್ದಂಡೆ ಯೋಜನೆಗೆ 50,000 ಕೋಟಿ ರೂ. ಬೇಕಾಗಬಹುದು. ಹಾಗಾಗಿ ಎಂಜಿನಿಯರ್‌ಗಳು ಕಾಲಮಿತಿಯೊಳಗೆ ಯೋಜನೆಗಳನ್ನು ಮುಗಿಸದಿದ್ದರೆ
ವೆಚ್ಚ ಹೆಚ್ಚಳವಾಗಿ ಸರ್ಕಾರಕ್ಕೂ ಹೊರೆ ಬೀಳಲಿದೆ’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next