Advertisement

ಇಂಜಿನಿಯರ್ ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ: ಸಚಿವ ಸೋಮಶೇಖರ್ ತರಾಟೆ

03:48 PM Sep 17, 2022 | Team Udayavani |

ಮೈಸೂರು: ಇಂಜಿನಿಯರ್ ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಗುತ್ತಿಗೆದಾರರಿಂದ ಸೂಕ್ತ ರೀತಿಯಲ್ಲಿ ಕೆಲಸ ಮಾಡಿಸುವಲ್ಲಿ ಇಂಜಿನಿಯರ್ ಗಳು ವಿಫಲರಾಗಿದ್ದಾರೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ತರಾಟೆ ತೆಗೆದುಕೊಂಡರು.

Advertisement

ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೆಡಿಪಿ ಸಭೆಯಲ್ಲಿ ಮಾತನಾಡಿ, ಲೋಕೋಪಯೋಗಿ, ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಇಂಜಿನಿಯರ್ ಗಳು ಗುತ್ತಿಗೆದಾರರು ಕೈಗೊಳ್ಳುತ್ತಿರುವ ಕಾಮಗಾರಿ ಗುಣಮಟ್ಟದ ಬಗ್ಗೆ ಪ್ರಶ್ನಿಸುತ್ತಿಲ್ಲ. ಇಂಜಿನಿಯರ್ ಗಳು ಸರಿಯಾಗಿ ಕೆಲಸ ಮಾಡಿದ್ದರೆ ಗುತ್ತಿಗೆದಾರರೇಕೆ ಸಾರ್ವಜನಿಕವಾಗಿ ಆರೋಪಗಳನ್ನು ಮಾಡುತ್ತಿದ್ದರು ಎಂದರು.

ಇದನ್ನೂ ಓದಿ: ಉ.ಕನ್ನಡಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವಿಚಾರದಲ್ಲಿ ಸರ್ಕಾರ ಹಿಂದೆ ಸರಿದಿಲ್ಲ: ಸುಧಾಕರ್

ಮಳೆಯಿಂದ ಬಹುತೇಕ ರಸ್ತೆಗಳು ಹಾನಿಯಾಗಿದೆ. ಗುತ್ತಿಗೆದಾರರು ರಸ್ತೆಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುತ್ತಿಲ್ಲ ಎಂಬ ವಿಚಾರ ಸಭೆಯಲ್ಲಿ ಪ್ರಸ್ತಾಪವಾದಾಗ ಇಂಜಿನಿಯರ್ ಗಳ ಕಾರ್ಯವೈಖರಿಯನ್ನು ಸಚಿವರು ಪ್ರಶ್ನಿಸಿದರು.

ಹೆಚ್.ಡಿ‌.ಕೋಟೆ, ಸರಗೂರಿನಲ್ಲಿ ಒಂದೇಒಂದು ರಸ್ತೆ ಕೂಡ ಸರಿಯಿಲ್ಲ. ಜನರು ಹೇಗೆ ಆ ರಸ್ತೆಯಲ್ಲಿ ಸಂಚರಿಸಬೇಕು? ನಿಮಗೆ ಸ್ವಲ್ಪವಾದರೂ ಕಾಳಜಿಯಿಲ್ಲವೇ? ಸಮಸ್ಯೆ ಏನಾದರೂ ಇದ್ದರೆ ಅದನ್ನು ಸ್ಥಳೀಯ ಶಾಸಕರ ಗಮನಕ್ಕೆ ತರಬೇಕು. ಅದನ್ನು ಕೂಡ ಮಾಡುವುದಿಲ್ಲ ಎಂದರೆ ಇನ್ನೇನು ಕೆಲಸ ಮಾಡುತ್ತೀರಿ ಎಂದು ಕೇಳಿದರು.

Advertisement

ರಸ್ತೆ ಕಾಮಗಾರಿ ಮಾಡಲು ಅರಣ್ಯ ಇಲಾಖೆಯವರು ಅಡ್ಡಿಪಡಿಸುವುದು ಸರಿಯಲ್ಲ. ಜನರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ರಸ್ತೆ ಕಾಮಗಾರಿಗೆ ಸಹರಿಸಬೇಕು ಎಂದು ಹೇಳಿದರು.

ನಾಲ್ಕೂವರೆ ವರ್ಷವಾದರೂ 94ಸಿಸಿಯಡಿ ಹಕ್ಕುಪತ್ರಗಳನ್ನು ನೀಡಿಲ್ಲವೆಂದರೆ ಹೇಗೆ? ಹಕ್ಕಪತ್ರಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಎಷ್ಟು ಅರ್ಜಿಗಳು ಬಂದಿವೆ? ಎಷ್ಟು ವಿತರಣೆ ಆಗಿದೆ? ಬಾಕಿ ಉಳಿದಿರುವ ಅರ್ಜಿಗಳನ್ನು ಎಷ್ಟು ದಿನದಲ್ಲಿ ವಿತರಣೆ ಮಾಡುತ್ತೀರಿ ಎಂಬ ಸಂಪೂರ್ಣ ಮಾಹಿತಿಯನ್ನು ಮುಂದಿನ ಕೆಡಿಪಿ ಸಭೆ ವೇಳೆಗೆ ನೀಡಬೇಕು ಎಂದು ಗಡುವು ನೀಡಿದರು.

ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಐದು ಲಕ್ಷ ರೂ. ಪರಿಹಾರ ವಿತರಣೆ ಮಾಡುವ ಮುನ್ನ ಪರಿಶೀಲನೆ ನಡೆಸಿ ನೀಡಬೇಕು. ಕೆಲವು ಕಡೆಗಳಲ್ಲಿ ಮನೆಗಳನ್ನು ಸ್ವತಃ ನೆಲಸಮ ಮಾಡಿಕೊಂಡು ಪರಿಹಾರ ಪಡೆಯುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಅಧಿಕಾರಿಗಳು ಪರಿಶೀಲನೆ ನಡೆಸಿ, ಅರ್ಹರಿಗೆ, ಸೂರು ಕಳೆದುಕೊಂಡವರಿಗೆ ಪರಿಹಾರ ನೀಡಬೇಕು. ನೊಂದವರಿಗೆ ಪರಿಹಾರ ವಿತರಣೆಯಲ್ಲಿ ಯಾವುದೇ ಅನ್ಯಾಯವಾಗಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಬೆಳೆ ಹಾನಿ, ಪರಿಹಾರ ವಿತರಣೆ ಕುರಿತು ಸಭೆಯಲ್ಲಿ ಪ್ರಸ್ತಾಪವಾಯಿತು. ಶಾಸಕರುಗಳಾದ ನಾಗೇಂದ್ರ, ಜಿ.ಟಿ.ದೇವೇಗೌಡ, ಮಹದೇವ್, ಅನಿಲ್ ಚಿಕ್ಕಮಾದು, ವಿಧಾನಪರಿಷತ್ ಸದಸ್ಯರಾದ ಮಂಜೇಗೌಡ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಜಿಪಂ ಸಿಇಒ ಪೂರ್ಣಿಮಾ, ಪಾಲಿಕೆ ಆಯುಕ್ತರಾದ ಲಕ್ಷ್ಮಿಕಾಂತ್ ರೆಡ್ಡಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next