ಕಲಬುರಗಿ: ಇಂಜಿನಿಯರಿಂಗ್ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳಿಗೆ ಏಕಾಏಕಿ 10 ಸಾವಿರ ರೂ. ವರೆಗೂ ಶುಲ್ಕ ಏರಿಕೆ ಮಾಡಿರುವ ನಿರ್ಧಾರ ವಿರೋಧಿಸಿ ಎಐಡಿಎಸ್‌ಒ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಲ್ಕ ರಚನೆ ಹೆಚ್ಚಳ ಕುರಿತು ಸುತ್ತೋಲೆ ಹೊರಡಿಸಲಾಗಿದೆ. ಈಗಾಗಲೇ ದಾಖಲೆ ಪರಿಶೀಲನೆ ಪ್ರಕ್ರಿಯೆ ಮುಗಿದು, ಮೊದಲ ಸುತ್ತಿನ ಸೀಟು ಹಂಚಿಕೆಯೂ ಆಗಿದೆ. ಈಗ ದಿಢೀರ್ ಶುಲ್ಕ ಏರಿಕೆ ಮಾಡಿರುವುದು ವಿದ್ಯಾರ್ಥಿ ವಿರೋಧಿ ನಿಲುವು ಮಾತ್ರವಲ್ಲ, ಕಾನೂನು ಬಾಹಿರ ನಡೆಯಾಗುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ರಾಜ್ಯದ ಜನತೆ ಹಾಗೂ ವಿದ್ಯಾರ್ಥಿ ಸಮೂಹ ಕೋವಿಡ್ ಸಾಂಕ್ರಾಮಿಕ, ಲಾಕ್‌ಡೌನ್ ಸಮಯದಲ್ಲಿ ಅತ್ಯಂತ ಸಂಕಷ್ಟ ಎದುರಿಸಿದ್ದಾರೆ. ಸಂಸಾರ ತೂಗಿಸಲು ಹಲವರು ಉದ್ಯೋಗ ಅರಸಿದ್ದರೆ, ಹಲವರು ತಮ್ಮ ಪೋಷಕರು-ಸಂಬಂಧಿಕರನ್ನು ಕಳೆದುಕೊಂಡು ಈಗಲೂ ಆ ಆಘಾತದಿಂದ ಹೊರ ಬರಲು ಸಾಧ್ಯವಾಗಿಲ್ಲ. ಜನಸಾಮಾನ್ಯರ ಆದಾಯ ಕುಂಠಿತವಾಗಿದೆ. ಇದರೊಂದಿಗೆ ಈ ಬಾರಿ ಅತ್ಯಂತ ಭೀಕರ ಮಳೆಯಿಂದಾಗಿ ಬೆಳೆಗಳೆಲ್ಲ ಹಾನಿಯಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ವರ್ಷ ಪದವಿ ಕೋರ್ಸ್‌ಗೆ ಪ್ರತಿ ವರ್ಷಕ್ಕಿಂತ 50 ಸಾವಿರ ಹೆಚ್ಚಿಗೆ ವಿದ್ಯಾರ್ಥಿಗಳು ಸರ್ಕಾರಿ ಪದವಿ ಕಾಲೇಜುಗಳಲ್ಲಿ ದಾಖಲಾತಿ ಪಡೆದಿದ್ದಾರೆ. ಪಿಯುಸಿ ದಾಖಲಾತಿಯೂ ಗಣನೀಯವಾಗಿ ಏರಿಕೆ ಆಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಶುಲ್ಕ ಏರಿಕೆ ನಿರ್ಧಾರ ವಾಪಸ್ ಪಡೆದು, ಮೊದಲು ಇದ್ದ ಶುಲ್ಕವನ್ನು ಮುಂದುವರೆಸಬೇಕು ಎಂದರು.
ಪ್ರತಿಭಟನೆಯಲ್ಲಿ ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ತುಳಜರಾಮ ಎನ್. ಕೆ, ಸದಸ್ಯರಾದ ಶಿಲ್ಪಾ ಬಿ.ಕೆ, ಪ್ರೀತಿ ದೊಡ್ಡಮನಿ, ಭೀಮು ಆಂದೋಲ, ಪೂಜಾ, ಕಿರಣ್ ಜಿ. ಮಾನೆ, ನಿವೇದಿತಾ ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.