Advertisement

ಕವಲು ದಾರಿಯಲ್ಲಿ ಎಂಜಿನಿಯರಿಂಗ್‌ ಶಿಕ್ಷಣ

06:00 AM Sep 11, 2018 | Team Udayavani |

ಒಂದು ಕಾಲದಲ್ಲಿ, ಎಂಜಿನಿಯರಿಂಗ್‌ ಓದಬೇಕೆಂಬುದೇ ವಿದ್ಯಾರ್ಥಿಗಳ ಕನಸಾಗಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಒಂದು ಸಾವಿರವಲ್ಲ, ಹದಿಮೂರು ಸಾವಿರಕ್ಕೂ ಹೆಚ್ಚು ಸೀಟ್‌ಗಳು ಭರ್ತಿಯಾಗದೇ ಉಳಿದಿವೆ…

Advertisement

2016-17ರಲ್ಲಿ ಭಾರತದ 3291 ಎಂಜಿನಿಯರಿಂಗ್‌ ಶಿಕ್ಷಣ ಸಂಸ್ಥೆಗಳಲ್ಲಿ ಲಭ್ಯವಿದ್ದ 15 ಲಕ್ಷ 71 ಸಾವಿರದ ಎರಡು ನೂರಾ ಇಪ್ಪತ್ತು ಸೀಟುಗಳಲ್ಲಿ ಶೇಕಡಾ 50.1ರಷ್ಟು ಸೀಟುಗಳು ಮಾತ್ರ ಭರ್ತಿಯಾಗಿದ್ದವು. ಕರ್ನಾಟಕದಲ್ಲಿ ಲಭ್ಯವಿದ್ದ 1 ಲಕ್ಷ ಐದು ನೂರಾ ಅರವತ್ತೆçದು ಸೀಟುಗಳಲ್ಲಿ ಶೇಕಡಾ 74ರಷ್ಟು ಮಾತ್ರ ಭರ್ತಿಯಾಗಿದ್ದವು.

22 ಏಪ್ರಿಲ್‌ 2018ರಂದು ಅಖೀಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ), ಈ ವರ್ಷ ದೇಶಾದಂತ್ಯ ಲಭ್ಯವಿರುವ ಎಂಜಿನಿಯರಿಂಗ್‌ ಸೀಟುಗಳಲ್ಲಿ 1 ಲಕ್ಷ 67 ಸಾವಿರ ಸೀಟುಗಳನ್ನು ಕಡಿತಗೊಳಿಸುವುದಾಗಿ ತಿಳಿಸಿತು. ಹೀಗಾಗಿ ಈ ವರ್ಷ ಲಭ್ಯವಿರುವ ಸೀಟುಗಳ ಸಂಖ್ಯೆ 14 ಲಕ್ಷ 90 ಸಾವಿರಕ್ಕೆ ಇಳಿದಿದೆ. 

   ಕೆಲವು ವರ್ಷಗಳ ಹಿಂದೆ ಎಂಜಿನಿಯರಿಂಗ್‌ ಶಿಕ್ಷಣಕ್ಕಿದ್ದ ಬೇಡಿಕೆ ಈಗ ಇಲ್ಲ. ಹೀಗಾಗಿರುವುದಕ್ಕೆ ಕಾರಣವೇನು ಅಂದಿರಾ? ಎಂಜಿನಿಯರಿಂಗ್‌ ಪದವೀಧರರಿಗೆ ಸೂಕ್ತ ಉದ್ಯೋಗ ದೊರೆಯುತ್ತಿಲ್ಲ. ಹೀಗಾಗಿ, ವಿದ್ಯಾರ್ಥಿಗಳು ಎಂಜಿನಿಯರಿಂಗ್‌ ಕಾಲೇಜು ಸೇರಲು ಮುಂದಾಗುತ್ತಿಲ್ಲವೆಂದು ಕೆಲವರ ವಾದ. ಪ್ರತಿವರ್ಷ ಲಕ್ಷಾಂತರ ಜನ ಎಂಜಿನಿಯರಿಂಗ್‌ ಪದವಿ ಪಡೆದರೂ, ಶೇಕಡಾ 85ರಷ್ಟು ಪದವೀಧರರಿಗೆ ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯಗಳು ಇಲ್ಲದ ಕಾರಣ, ಸೂಕ್ತ ಉದ್ಯೋಗ ದೊರೆಯುತ್ತಿಲ್ಲವೆಂಬುದು, ಎಂಜಿನಿಯರ್‌ ಪದವೀಧರರ ಸ್ಪಷ್ಟ ಮಾತು. 

ಸೀಟುಗಳು ಭರ್ತಿಯಾಗದೆ ಉಳಿಯುತ್ತಿರುವುದೇಕೆ?
ಎಂಜಿನಿಯರಿಂಗ್‌ ಕಾಲೇಜಿನಲ್ಲಿ ದೊರೆಯುವ ಶಿಕ್ಷಣದ ಗುಣಮಟ್ಟ, ಲಭ್ಯವಿರುವ ಮೂಲಭೂತ ಸೌಕರ್ಯಗಳು, ಈ ಕಾಲೇಜಿನಲ್ಲಿ ನಡೆವ ಕ್ಯಾಂಪಸ್‌ ಇಂಟರ್‌ವ್ಯೂಗಳು, ಅಲ್ಲಿ ದೊರೆಯುತ್ತಿರುವ ಉದ್ಯೋಗಾವಕಾಶಗಳು… ಹೀಗೆ, ವಿವಿಧ ವಿಷಯಗಳನ್ನು ಪರಿಶೀಲಿಸಿ, ಯಾವ ಕಾಲೇಜಿನಲ್ಲಿ ಸೇರಬೇಕು ಎಂದು ವಿದ್ಯಾರ್ಥಿಗಳು ನಿರ್ಧರಿಸುತ್ತಿದ್ದಾರೆ. ಹೀಗಾಗಿ ಉತ್ತಮ ಗುಣಮಟ್ಟದ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಸೀಟುಗಳು ಭರ್ತಿಯಾಗುತ್ತವೆ ಮತ್ತು ಉಳಿದ ಕಾಲೇಜುಗಳಲ್ಲಿ ಸೀಟುಗಳು ಅಧಿಕ ಸಂಖ್ಯೆಯಲ್ಲಿ ಭರ್ತಿಯಾಗದೆ ಉಳಿಯುತ್ತಿವೆ. 

Advertisement

ಪ್ರವೇಶಾಂಕ ಏರಿಕೆ
ಬೇಡಿಕೆ ಇಲ್ಲದ ಎಂಜಿನಿಯರಿಂಗ್‌ ಕೋರ್ಸುಗಳು ಮತ್ತು ಕಳಪೆ ಗುಣಮಟ್ಟದ ಕಾಲೇಜುಗಳಿಂದಾಗಿ ಭರ್ತಿಯಾಗದೆ ಉಳಿಯುವ ಸೀಟುಗಳ ಸಂಖ್ಯೆ ಅಧಿಕವಾಗಿದೆ. ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯಗಳಿಗೆ ಒತ್ತು ನೀಡದೆ ಎಐಟಿಸಿಇ ರೂಪಿಸುವ ಎಂಜಿನಿಯರಿಂಗ್‌ ಪಠ್ಯಕ್ರಮದಿಂದಾಗಿ ಪದವೀಧರರಿಗೆ ಉದ್ಯೋಗ ದೊರೆಯುವುದು ಕಷ್ಟವಾಗುತ್ತಿದೆ. 2011ರವರೆಗೆ ಎಂಜಿನಿಯರಿಂಗ್‌ ಪ್ರವೇಶಕ್ಕೆ ವಿದ್ಯಾರ್ಥಿಯು, ಪಿಯುಸಿಯಲ್ಲಿ ಗಣಿತ, ರಸಾಯನ ಶಾಸ್ತ್ರ ಮತ್ತು ಭೌತಶಾಸ್ತ್ರದಲ್ಲಿ ಶೇಕಡಾ 50 ಅಂಕಗಳನ್ನು ಗಳಿಸಿರಬೇಕು ಎನ್ನುವ ನಿಯಮ ಚಾಲ್ತಿಯಲ್ಲಿತ್ತು. ಆದರೆ ನಂತರದ ದಿನಗಳಲ್ಲಿ ಎಐಸಿಟಿಇ ಇದನ್ನು ಶೇಕಡಾ 45 ಅಂಕಗಳಿಗೆ ಇಳಿಸಿತು. ಎಂಜಿನಿಯರಿಂಗ್‌ ಕಾಲೇಜು ಸೇರುವ ವಿದ್ಯಾರ್ಥಿಗಳ ಸಂಖ್ಯೆ ತಾತ್ಕಾಲಿಕವಾಗಿ ಹೆಚ್ಚಾದರೂ, ಪದವೀಧರರ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮವಾಯಿತು.

ಬೇಡಿಕೆ ಇಲ್ಲದ ಕೋರ್ಸ್‌ಗಳು
ಏರೋಸ್ಪೇಸ್‌, ಆಟೋಮೋಟಿವ್‌ ಮತ್ತು ರೋಬೋಟಿಕ್ಸ್‌, ಸೆರಾಮಿಕ್ಸ್‌ ಮತ್ತು ಸಿಮೆಂಟ್‌, ಪರಿಸರ, ಇನ್ಸ್‌ಟ್ರಾಮೆಂಟೇಷನ್‌, ಮ್ಯಾನುಫ್ಯಾಕ್ಚರಿಂಗ್‌, ಪೆಟ್ರೋ-ಕೆಮಿಕಲ್‌, ಗಣಿಗಾರಿಕೆ, ಪಾಲಿಮರ್‌, ರೇಷ್ಮೆ ಸೇರಿದಂತೆ ಒಟ್ಟು 12 ಎಂಜಿನಿಯರಿಂಗ್‌ ಕೋರ್ಸ್‌ಗಳಿಗೆ ಬೇಡಿಕೆ ಇಲ್ಲದ ಕಾರಣ, ಇವುಗಳನ್ನು ಮುಚ್ಚುವಂತೆ ಎಐಸಿಟಿಇಗೆ ಶಿಫಾರಸು ಮಾಡಲು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಮುಂದಾಗಿದೆ. ಇದು ಸಾಧ್ಯವಾದಾಗ, ಕರ್ನಾಟಕದಲ್ಲಿ ಭರ್ತಿಯಾಗುವ ಎಂಜಿನಿಯರಿಂಗ್‌ ಸೀಟುಗಳ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ. 

ಉದಯ ಶಂಕರ ಪುರಾಣಿಕ

Advertisement

Udayavani is now on Telegram. Click here to join our channel and stay updated with the latest news.

Next