ಕುರುಗೋಡು : ಸಮೀಪದ ಬಸಾಪುರ ಗ್ರಾಮದ ಬಳಿ ತುಂಬಿ ಹರಿಯುತ್ತಿರುವ ತುಂಗಭದ್ರಾ ಕೆಳ ಮಟ್ಟದ ಕಾಲುವೆಯಲ್ಲಿ ಗೆಳೆಯನೊಂದಿಗೆ ಈಜಲು ಹೋಗಿದ್ದ ವ್ಯಕ್ತಿ ನೀರಲ್ಲಿ ಮುಳುಗಿದ ಘಟನೆ ಕುರುಗೋಡು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನೀರಲ್ಲಿ ನಾಪತ್ತೆಯಾದ ವ್ಯಕ್ತಿ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ನಿರುಗುಂದ ಗ್ರಾಮದ ಆದರ್ಶ (32) ಎಂದು ಗುರುತಿಸಲಾಗಿದೆ.
ಅವರು ಬೆಂಗಳೂರಿನ ಐಟಿಸಿ ಇನ್ಫೋಟೆಕ್ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುದ್ದರು, ವಿಜಯಪುರದ ಗೋಳಗುಮ್ಮಟ ನೋಡಿಕೊಂಡು ಕುರುಗೋಡಲ್ಲಿ ಇದ್ದ ಗೆಳೆಯ ಭಾಷಾ ಮನೆಗೆ ಬಂದಿದ್ದ ಆದರ್ಶ ಬುಧವಾರ ಬೆಳಿಗ್ಗೆ ಈಜಲೆಂದು ಕಾಲುವೆಗೆ ಜಿಗಿದಿದ್ದು, ಮೇಲೆ ಬರಲೇ ಇಲ್ಲ. ಗೆಳೆಯ ಭಾಷಾ ಹುಡುಕಾಡಿ ಸಿಗದೇ ಇದ್ದಾಗ ಭಯಭಿತನಾಗಿ ಸ್ಥಳೀಯ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾನೆ.
ಇದನ್ನೂ ಓದಿ : ರಾಯಚೂರನ್ನು ತೆಲಂಗಾಣದೊಳಕ್ಕೆ ವಿಲೀನಗೊಳಿಸಲು ಜನರು ಒತ್ತಾಯಿಸುತ್ತಿದ್ದಾರೆ: ಸಿಎಂ ಕೆಸಿಆರ್
ಸುದ್ದಿ ತಿಳಿದಾಕ್ಷಣ ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಶೋಧ ಕಾರ್ಯ ಬೆಳಿಗ್ಗೆ 8 ಗಂಟೆಯಿಂದ ಸಂಜೆ 7 ಗಂಟೆವರೆಗೂ ಮಾಡಿದರು ವ್ಯಕ್ತಿ ಪತ್ತೆಯಾಗಿಲ್ಲ.
ಗುರುವಾರ ಎರಡನೇ ದಿನಕ್ಕೂ ಶೋಧ ಕಾರ್ಯ ಬೆಳಿಗ್ಗೆ 7 ಗಂಟೆಯಿಂದ ಮುಂದುವರೆದಿದೆ. ಬಸಾಪುರ ಕಾಲುವೆ ಸೇತುವೆಯಿಂದ ಹಿಡಿದು ಸಿರುಗುಪ್ಪ ರಸ್ತೆ ವರೆಗೂ ಕಾರ್ಯ ಮುಂದುವರೆಸಿದ್ದು ಯಾವುದೇ ಸುಳಿವು ಸಿಕ್ಕಿಲ್ಲ ವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ಶೋಧ ಕಾರ್ಯ ಮುಂದುವರೆದಿದೆ.
ಸ್ಥಳಕ್ಕೆ ಪೊಲೀಸ್ ತಂಡ ಕೂಡ ಧಾವಿಸಿದ್ದು ಜಂಟಿಯಾಗಿ ಕಾರ್ಯ ಚುರುಕುಗೊಂಡಿದೆ.
ನಾಪತ್ತೆಯಾದ ವ್ಯಕ್ತಿಯ ಕುಟುಂಬಸ್ಥರು ಗುರುವಾರ ಕುರುಗೋಡಿಗೆ ಆಗಮಿಸಿದ್ದು, ಠಾಣೆ ಯಲ್ಲಿ ಪ್ರಕರಣ ದಾಖಲಿಸಲಿದ್ದಾರೆ.