ಹುಬ್ಬಳ್ಳಿ:ಕೇಂದ್ರ ಸರಕಾರ ಆರ್ಥಿಕವಾಗಿ ಹಿಂದುಳಿದ ಸಮಾಜದವರಿಗೆ ಶೈಕ್ಷಣಿಕ ಹಾಗೂ ಉದ್ಯೋಗದಲ್ಲಿ ಶೇ. 10 ಮೀಸಲಾತಿ ಜಾರಿಗೊಳಿಸಿದೆ. ಆದರೆ ರಾಜ್ಯದಲ್ಲೂ ಇದನ್ನು ಅನುಷ್ಠಾನಗೊಳಿಸಲು ಸಮ್ಮಿಶ್ರ ಸರಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.
ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಹುಬ್ಬಳ್ಳಿ ತಾಲೂಕು ಘಟಕ ವತಿಯಿಂದ ಇಲ್ಲಿನ ಗೋಕುಲ ರಸ್ತೆಯ ಚವ್ಹಾಣ ಗ್ರೀನ್ ಗಾರ್ಡನ್‌ದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕಿನ ಸಮಾಜದ ಸಾಧಕರ ಸಂಗಮ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಮ್ಮಿಶ್ರ ಸರಕಾರ ರಾಜ್ಯದಲ್ಲೂ ಜಾರಿಗೊಳಿಸಿದರೆ ವೀರಶೈವ-ಲಿಂಗಾಯತ ಸಮಾಜ ವಿದ್ಯಾರ್ಥಿಗಳಿಗೂ ತುಂಬಾ ಅನುಕೂಲವಾಗುತ್ತದೆ ಎಂದರು.
ವೀರಶೈವ ಮತ್ತು ಲಿಂಗಾಯತ ಮಹಾಸಭಾದವರು ಲಿಂಗಾಯತ-ವೀರಶೈವ ಅಭಿವೃದ್ಧಿ ಮಂಡಳಿ ರಚಿಸಬೇಕು. ಮೀಸಲಾತಿ ನೀಡಬೇಕೆಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ಮಂಡಳಿ ರಚಿಸಿದರೆ 50-100 ಕೋಟಿ ರೂ. ಮೀಸಲಿಡುತ್ತಾರೆ. ಅದನ್ನು ಯಾವ್ಯಾವುದಕ್ಕೋ ಖರ್ಚು ಮಾಡಲಾಗುತ್ತದೆ. ಇದರಿಂದ ಬೇರೆಯವರಿಗೆ ಲಾಭವಾಗುತ್ತದೆ ವಿನಃ ಸಮಾಜ ಅಭಿವೃದ್ಧಿಯಾಗಲ್ಲ. ಸಮಾಜ ಬಗ್ಗೆ ಕಳಕಳಿ ಇದ್ದರೆ ಕೇಂದ್ರ ಜಾರಿಗೊಳಿಸಿದ ಮೀಸಲಾತಿಯನ್ನು ರಾಜ್ಯದಲ್ಲೂ ಜಾರಿಗೊಳಿಸಿದರೆ ಸಮಾಜ ಬಗ್ಗೆ ನಿಮಗಿರುವ ಕಾಳಜಿ ಗೊತ್ತಾಗುತ್ತದೆ. ಅದು ಅನುಷ್ಠಾನಗೊಂಡಿದ್ದರೆ ಸಮಾಜದ ನೂರಾರು ವಿದ್ಯಾರ್ಥಿಗಳು ನೌಕರಿ ಪಡೆಯುತ್ತಿದ್ದರು. ಈಗ ಅದರಿಂದ ಅವರು ವಂಚಿತಗೊಂಡಿದ್ದಾರೆ. ರಾಜ್ಯ ಸರಕಾರ ಶೇ.10 ಮೀಸಲಾತಿ ಜಾರಿಗೊಳಿಸದಿದ್ದರೆ ಸಮಾಜದವರು ಸಾರ್ವತ್ರಿಕ ಹೋರಾಟಕ್ಕೆ ಮುಂದಾಬೇಕು. ಸಮಾಜ ಅಭಿವೃದ್ಧಿಗೆ ತಮ್ಮ ಸಹಕಾರ ಯಾವಾಗಲೂ ಇರುತ್ತದೆ ಎಂದರು.
ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣಿಕೊಪ್ಪ ಸನ್ಮಾನ ಸ್ವೀಕರಿಸಿ ಮಾತನಾಡಿ, ವಿದ್ಯಾರ್ಥಿಗಳು ಋಷಿಮುನಿಗಳಂತೆ ಓದಿನತ್ತ ಗಮನ ಹರಿಸಬೇಕು. ಪುಸ್ತಕಗಳೊಂದಿಗೆ ಸಂಬಂಧ ಬೆಳೆಸಿಕೊಳ್ಳಬೇಕೇ ವಿನಃ ಮೊಬೈಲ್, ಇಲೆಕ್ಟ್ರಾನಿಕ್ಸ್ ಉಪಕರಣಗಳೊಂದಿಗೆ ಅಲ್ಲ. ಇನ್ನೊಬ್ಬರ ಜೀವನ ತುಲನೆ ಮಾಡಿಕೊಳ್ಳುವುದನ್ನು ಬಿಟ್ಟು ನಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.
ಐಎಎಸ್ ತೇರ್ಗಡೆಯಾದ ರಾಹುಲ್ ಸಂಕನೂರ ಮಾತನಾಡಿ, ಸಾಧಕರು ಈ ಮಟ್ಟಕ್ಕೆ ಬರಲು ಅವರು ಹಿಂದೆ ಪಟ್ಟಿರುವ ಕಷ್ಟಗಳ ಬಗ್ಗೆ ತಿಳಿಯಬೇಕು. ಪ್ರಶ್ನಿಸುವ ಹಾಗೂ ರಿಸ್ಕ್ ತೆಗೆದುಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಅಂದಾಗ ನಾವು ಏನನ್ನಾದರೂ ಸಾಧಿಸಲು ಸಾಧ್ಯ. ಪಾಲಕರು ಸಹಿತ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ಅದನ್ನೇ ಅವರ ಮಕ್ಕಳು ಅನುಸರಿಸುತ್ತಾರೆ ಎಂದರು.
ಪಿಯುಸಿ, ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಂಶಿ ಮತ್ತು ರಬಕವಿ ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕ ಅಧ್ಯಕ್ಷ ಆನಂದ ಉಪ್ಪಿನ ಅಧ್ಯಕ್ಷತೆ ವಹಿಸಿದ್ದರು. ಗೋವಿಂದ ಜೋಶಿ, ಡಾ| ಶಿವಬಸಪ್ಪ ಹೆರೂರು, ಶಂಕರಣ್ಣ ಮುನವಳ್ಳಿ, ವಿಜಯಕುಮಾರ ಶೆಟ್ಟರ, ವೀರೇಂದ್ರ ಕೌಜಲಗಿ, ಶಿವಣ್ಣ ಅಂಗಡಿ, ವೀರಣ್ಣ ಮಳಗಿ, ಸೋಮಶೇಖರ ಉಮರಾಣಿ, ಮುತ್ತಣ್ಣ ಉಪ್ಪಿನ, ಶರಣಪ್ಪ ಮತ್ತಿಗಟ್ಟಿ ಇನ್ನಿತರಿದ್ದರು.
ವಿರೂಪಾಕ್ಷಿ ಬಿಸರಳ್ಳಿ ಸ್ವಾಗತಿಸಿದರು. ವೀರೇಶ ಹಂಡಗಿ, ವಿಜಯಲಕ್ಷ್ಮಿಶೆಟ್ಟಿ ನಿರೂಪಿಸಿದರು. ಚನ್ನಬಸಪ್ಪ ಧಾರವಾಡಶೆಟ್ಟರ ವಂದಿಸಿದರು.