ಶೃಂಗೇರಿ: ಯೋಧರ ನಮನ ಕಾರ್ಯಕ್ರಮ ಆಯೋಜನೆ ಸಮಯದಲ್ಲಿ ಉಂಟಾದ ವಿವಾದದಿಂದ ದಾಖಲಾದ ಪ್ರಕರಣದಲ್ಲಿ ತನ್ನ ಹೆಸರು ಇದ್ದಿದ್ದರಿಂದ ಬೇಸತ್ತು ಎಬಿವಿಪಿ ಕಾರ್ಯಕರ್ತನಾಗಿರುವ ಬಿಕಾಂ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಈ ನಡುವೆ ಎನ್‌ಎಸ್‌ಯುಐನ ಕೆಲ ಕಾರ್ಯಕರ್ತರು, ಕಾಲೇಜಿನ ಪ್ರಾಚಾರ್ಯರು, ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಾಗಿದೆ.
ತಾಲೂಕಿನ ಮೆಣಸೆ ಗ್ರಾಪಂನ ಕಿಕ್ರೆ ಗ್ರಾಮದ ಕೊಂಡಗೆರೆಯ ಎಂ.ಕೆ. ಅಭಿಷೇಕ್ (21) ಎಂಬಾತನೇ ಆತ್ಮಹತ್ಯೆಗೆ ಶರಣಾದವ. ಶ್ರೀ ಜೆಸಿಬಿಎಂ ಕಾಲೇಜಿನಲ್ಲಿ ಅಂತಿಮ ಬಿಕಾಂ ಓದುತ್ತಿದ್ದ ಈತ ಎಬಿವಿಪಿ ಕಾರ್ಯಕರ್ತನಾಗಿದ್ದ. ಮನೆ ಸಮೀಪದ ಕಾಡಿನಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಈತನ ಶವ ಪತ್ತೆಯಾಗಿದೆ.
ಕಾಲೇಜಿನಲ್ಲಿ ಇತ್ತೀಚೆಗೆ ಯೋಧ ನಮನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ಚಕ್ರವರ್ತಿ ಸೂಲಿಬೆಲೆ ಮುಖ್ಯ ಭಾಷಣ ಮಾಡಬೇಕಿತ್ತು. ಇದಕ್ಕೆ ಎನ್‌ಎಸ್‌ಯುಐ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಯನ್ನೂ ನಡೆಸಿತ್ತು. ಕಾರ್ಯಕ್ರಮ ನಡೆದಿದ್ದರೂ ಸೂಲಿಬೆಲೆ ಪಾಲ್ಗೊಂಡಿರಲಿಲ್ಲ. ಈ ಘಟನೆ ಬಳಿಕ 2 ಸಂಘಟನೆಗಳ ಮಧ್ಯೆ ಸಣ್ಣದಾಗಿ ಘರ್ಷಣೆಯೂ ಉಂಟಾಗಿ ಎಬಿವಿಪಿ ಕಾರ್ಯಕರ್ತರಾದ ಅಭಿಷೇಕ್, ಅನಿರುದ್ಧ, ಕೌಶಿಕ್, ಕಾರ್ತಿಕ್ ಅರ್ಜುನ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಇದರಿಂದ ಮನನೊಂದು ಅಭಿಷೇಕ್, ಕಾಲೇಜಿನಲ್ಲಿ ನಡೆದ ಕೆಲ ಘಟನೆಗಳಿಂದ ಮನ ನೊಂದಿದ್ದೇನೆ. ತನ್ನ ಹೆಸರು ಪ್ರಕರಣದಲ್ಲಿ ಸೇರಿದೆ. ಇದರಿಂದ ಗೌರವಸ್ಥ ಕುಟುಂಬಕ್ಕೆ ನಾನು ಕೆಟ್ಟ ಹೆಸರು ತಂದಂತಾಗಿದೆ. ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್‌ನೋಟ್ ಬರೆದು ತನ್ನ ಕೊಠಡಿಯಲ್ಲಿಟ್ಟು ಕಾಡಿಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪ್ರಕರಣ ದಾಖಲು: ಅಭಿಷೇಕ್ ಆತ್ಮಹತ್ಯೆಗೆ ಸಂಬಂಧಪಟ್ಟಂತೆ ಎನ್‌ಎಸ್‌ಯುಐನ ಅಂಜನ್, ಅಶ್ವಥ್, ಕಾಲೇಜಿನ ಪ್ರಾಚಾರ್ಯರು, ಆಡಳಿತ ಮಂಡಳಿ ವಿರುದ್ಧ ಶೃಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯಾದ್ಯಂತ ಇಂದು ಎಬಿವಿಪಿ ಹೋರಾಟ
ಬೆಂಗಳೂರು: ಚಿಕ್ಕಮಗಳೂರಿನ ಶೃಂಗೇರಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿ ಅಭಿಷೇಕ್ ಆತ್ಮಹತ್ಯೆ ಖಂಡಿಸಿ ಗುರುವಾರ ರಾಜ್ಯಾದ್ಯಂತ ಹೋರಾಟಕ್ಕೆ ಎಬಿವಿಪಿ ಕರೆ ನೀಡಿದೆ.
ಇದು ದೇಶಭಕ್ತರ ಕಾರ್ಯಕ್ರಮ ನಡೆಸುವ ವಿದ್ಯಾರ್ಥಿಗಳಿಗೆ ಸರ್ಕಾರ ಕೊಟ್ಟ ಆತ್ಮಹತ್ಯೆ ಭಾಗ್ಯ ಎಂದು ಆರೋಪಿಸಿರುವ ಎಬಿವಿಪಿ ರಾಜ್ಯ ಘಟಕದ ಕಾರ್ಯದರ್ಶಿ ರಾಜೇಶ್ ಗುರಾಣಿ, ಈ ಘಟನೆಯನ್ನು ಖಂಡಿಸಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈಚೆಗೆ ಶೃಂಗೇರಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಹುತಾತ್ಮ ಯೋಧರ ಕುರಿತು ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ, ಇದಕ್ಕೆ ಎನ್‌ಎಸ್‌ಯುಐ ವಿದ್ಯಾರ್ಥಿಗಳು ಅಡ್ಡಿಪಡಿಸಿದ್ದರು. ಸರ್ಕಾರದ ಪ್ರಭಾವವನ್ನು ಬಳಸಿಕೊಂಡು ಪೊಲೀಸ್ ಠಾಣೆಯಲ್ಲಿ ಎಬಿವಿಪಿ ಕಾರ್ಯಕರ್ತರ ವಿರುದ್ಧ ಕೇಸನ್ನು ಎನ್‌ಎಸ್‌ಯುಐ ಕಾರ್ಯಕರ್ತರು ದಾಖಲಿಸಿದ್ದರು. ಇದರಿಂದ ಮಾನಸಿಕ ಖನ್ನತೆಗೊಳಗಾದ ಅಭಿಷೇಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.