ಕಾಟುಕುಕ್ಕೆ: ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಳಕಳಿಯನ್ನು ರೂಪಿಸುವಲ್ಲಿ ಎನ್.ಎಸ್.ಎಸ್. ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ.
ಈ ಉದ್ದೇಶದಿಂದಲೇ ಎನ್.ಎಸ್.ಎಸ್. ಅನ್ನು ಹೈಯರ್ ಸೆಕೆಂಡರಿ ಮಟ್ಟದಲ್ಲೂ ಆರಂಭಿಸಲಾಯಿತು ಎಂದು ಆದೂರು ಶಾಲೆಯ ಕನ್ನಡ ಅಧ್ಯಾಪಕ, ರಾಜ್ಯ ಪ್ರಶಸ್ತಿ ವಿಜೇತ ಎನ್.ಎಸ್.ಎಸ್. ಯೋಜನಾಧಿಕಾರಿ ಶಾಹುಲ್ ಹಮೀದ್ ಅಭಿಪ್ರಾಯಪಟ್ಟರು.
ಅವರು ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಎನ್.ಎಸ್.ಎಸ್. ವಿದ್ಯಾರ್ಥಿಗಳಿಗಾಗಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾವು ಒಂದು ಪುಟ್ಟ ಹೆಜ್ಜೆ ಇಟ್ಟರೆ, ಸಮಾಜ ನಮ್ಮೊಂದಿಗೆ ನಿಲ್ಲುತ್ತದೆ. ಬೇರೆಯವರನ್ನು ಕಾಯದೆ ಸಮಾಜ ಸೇವೆಯಲ್ಲಿ ವಿದ್ಯಾರ್ಥಿಗಳು ಮುಂದೆ ಬರಬೇಕೆಂದರು.
ಸ್ವಾಮಿ ವಿವೇಕಾನಂದ, ಮಹಾತ್ಮಾ ಗಾಂಧಿ ಹಾಗೂ ಮದರ್ ತೆರೇಸಾ ಮುಂತಾದವರ ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕು. ಇದು ಸಾಮಾಜಿಕ ಸುಸ್ಥಿರ ಬಾಳ್ವೆಗೆ ನೈತಿಕ ಬೆಂಬಲವನ್ನು ನೀಡುತ್ತದೆ ಎಂದು ತಿಳಿಸಿದರು.
ತಂತ್ರಜ್ಞಾನ ಬೆಳೆದಂತೆ ವಿದ್ಯಾರ್ಥಿಗಳು ಸಾಮಾಜಿಕವಾಗಿ ಚಿಂತಿಸುವ ಪ್ರವೃತ್ತಿ ಕಡಿಮೆಯಾಗಿರುವುದು ಆತಂಕಕಾರಿಯಾದ ಬೆಳವಣಿಗೆಯಾಗಿದೆ ಎಂದರು. ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಪ್ರಿನ್ಸಿಪಾಲ್ ಪದ್ಮನಾಭ ಶೆಟ್ಟಿ ಅವರು ಎನ್.ಎಸ್.ಎಸ್.ಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಮಾಜದಲ್ಲಿ ಹಲವು ಕರ್ತವ್ಯಗಳಿವೆ. ಅವರ ಸೇವಾ ಚಿಂತನೆ ಮನೆಯಿಂದಲೇ ಆರಂಭವಾಗಬೇಕು ಎಂದರು.
ಆಯ್ಕೆಗೊಂಡ 50 ವಿದ್ಯಾರ್ಥಿಗಳು ತರಬೇತಿ ಯಲ್ಲಿ ಭಾಗವಹಿಸಿದರು. ಅರ್ಥಶಾಸ್ತ್ರ ಅಧ್ಯಾಪಿಕೆ ವಾಣಿ ಕೆ. ಸ್ವಾಗತಿಸಿದರು. ಎನ್.ಎಸ್.ಎಸ್. ನಾಯಕಿ ಕವಿತಾ ಎಸ್. ಪೈ ವಂದಿಸಿದರು. ಎನ್.ಎಸ್.ಎಸ್. ಯೋಜನಾ ಧಿಕಾರಿ ಮಹೇಶ ಏತಡ್ಕ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಾದ ಕವಿತಾ ಎಸ್. ಪೈ, ಮಹಿಮಾ, ವರ್ಷ, ರತ್ನಕಲಾ ನೇತೃತ್ವ ವಹಿಸಿದರು.