Advertisement

ಎಂಡೋ ಸಂತ್ರಸ್ತರು ಖಾಸಗಿಯಾಗಿ ಔಷಧ ಖರೀದಿಸಿದರೆ ಮರು ಪಾವತಿ

02:36 AM Mar 08, 2022 | Team Udayavani |

ಪುತ್ತೂರು: ಎಂಡೋಸಲ್ಫಾನ್‌ ಪೀಡಿತರು ಖಾಸಗಿ ಕೇಂದ್ರಗಳಿಂದ ಹಣ ಕೊಟ್ಟು ಔಷಧ ಖರೀದಿಸುತ್ತಿದ್ದರೆ ಬಿಲ್‌ ನೀಡಿದಲ್ಲಿ ಆ ಮೊತ್ತವನ್ನು ಸರಕಾರ ಮರು ಪಾವತಿಸಲಿದೆ.

Advertisement

ತುರ್ತು ಸಂದರ್ಭದಲ್ಲಿ ಔಷಧ ಖರೀದಿಸುತ್ತಿರುವ ಎಂಡೋ ಪೀಡಿತರಿಗೆ ಇದರಿಂದ ನೆರವಾಗಲಿದೆ. ಎಂಡೋ ಪೀಡಿತರಲ್ಲಿ ವಿಭಿನ್ನ ಆರೋಗ್ಯ ಸಮಸ್ಯೆಗಳಿದ್ದು, ರೋಗ ಲಕ್ಷಣಕ್ಕೆ ಅನುಗುಣವಾಗಿ ಔಷಧದ ಅಗತ್ಯ ಇರುತ್ತದೆ. ಕೆಲವು ಔಷಧಗಳು ಸರಕಾರಿ ವ್ಯವಸ್ಥೆಯಲ್ಲಿ ಲಭ್ಯವಿಲ್ಲದಿದ್ದರೆ ಖಾಸಗಿ ಕೇಂದ್ರವನ್ನು ಆಶ್ರಯಿಸುವುದು ಅನಿವಾರ್ಯ.

ಮರು ಪಾವತಿ ಹೇಗೆ?
ಖರೀದಿಸಿದ ಬಿಲ್‌ ಅನ್ನು ಆಯಾ ವ್ಯಾಪ್ತಿಯ ಇಲಾಖಾಧಿಕಾರಿಗಳ ಮೂಲಕ ಸಲ್ಲಿಸಬೇಕು. ಇದಕ್ಕೆ ಯಾವುದೇ ಮಿತಿ ಇರುವುದಿಲ್ಲ. ಗ್ರಾಹಕರಿಗೆ ಸಾಲ ರೂಪದಲ್ಲಿ ಔಷಧ ಪೂರೈಸುತ್ತಿದ್ದರೆ ಅಂಗಡಿಯಾತನೇ ಬಿಲ್‌ ಅನ್ನ ಎಂಡೋ ಸೆಲ್‌ಗೆ ನೀಡಿ ಹಣ ಪಡೆಯಬಹುದು. ಈ ಮೊತ್ತವು ಜಿಲ್ಲಾ ಖಜಾನೆಯ ಮೂಲಕ ಮರು ಪಾವತಿ ಆಗುತ್ತದೆ.

ಪೋಷಕರಿಂದ ನಿರ್ವಹಣೆ?
ಸಂತ್ರಸ್ತರ ಆರೈಕೆಗೆಂದು ತೆರೆದಿರುವ ಎಂಡೋ ಪಾಲನ ಕೇಂದ್ರ ನಿರ್ವಹಣೆಯ ಹೊಣೆಗಾರಿಕೆಯನ್ನು ಪೋಷಕರಿಗೆ ನೀಡುವ ಬಗ್ಗೆ ಜಿಲ್ಲಾಡಳಿತ ಚಿಂತಿಸಿದೆ. ದ.ಕ. ಜಿಲ್ಲೆಯ ಕೊಕ್ಕಡ, ಉಜಿರೆ, ಕೊçಲದಲ್ಲಿ ಪಾಲನ ಕೇಂದ್ರಗಳಿವೆ. ಅಲ್ಲಿ ನೂರಾರು ಎಂಡೋಪೀಡಿತರು ಇದ್ದು ಪೋಷಕರೇ ನಿರ್ವಹಣೆಯ ಹೊಣೆ ಹೊತ್ತಲ್ಲಿ ಆರೈಕೆ ಕಾಳಜಿ ಹೆಚ್ಚಾಗುತ್ತದೆ ಎನ್ನುವುದು ಇದರ ಹಿಂದಿರುವ ಲೆಕ್ಕಾಚಾರ.

ಪ್ರಸ್ತುತ ಸರಕಾರವು ಎನ್‌ಜಿಒಗಳ ಮೂಲಕ ನಿರ್ವಹಿಸುತ್ತಿದೆ. ಮಾಸಿಕ ಕೇಂದ್ರವೊಂದಕ್ಕೆ 2.40 ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ. ನಿರ್ವಹಣೆಯ ಹೊಣೆ ಹೊತ್ತವರು ಪ್ರತೀ ನಿತ್ಯ ಎಂಡೋ ಪೀಡಿತರ ಮನೆಗೆ ತೆರಳಿ ಕರೆದುಕೊಂಡು ಬಂದು ಸಂಜೆ 4 ಗಂಟೆಗೆ ಮನೆಗೆ ತಲುಪಿಸಬೇಕು. ಅಲ್ಲಿನ ಎಲ್ಲ ಚಟುವಟಿಕೆಗಳನ್ನು ಸಂತ್ರಸ್ತರ ಪೋಷಕರು ನಿಭಾಯಿಸಬಹುದೇ? ನಿಭಾಯಿಸಬಹುದಾದರೆ ಹೇಗೆ? ಎಂಬ ಬಗ್ಗೆ ಸಮಗ್ರ ವರದಿ ತಯಾರಿಸುವಂತೆ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮೌಖೀಕ ಸೂಚನೆ ನೀಡಿರುವುದಾಗಿ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

Advertisement

ದಾಖಲಾತಿ ಕುಸಿತ
ಕೋವಿಡ್‌ ಪೂರ್ವದಲ್ಲಿ ಪ್ರತೀ ಪಾಲನ ಕೇಂದ್ರದಲ್ಲಿ ಸರಾಸರಿ 60 ಮಂದಿ ದಾಖಲಾಗುತ್ತಿದ್ದರು. ಕೋವಿಡ್‌ ಬಳಿಕ ಆ ಸಂಖ್ಯೆ 20ರಿಂದ 22ಕ್ಕೆ ಇಳಿದಿದೆ. ಆರೋಗ್ಯ ಸುರಕ್ಷೆ ದೃಷ್ಟಿಯಿಂದ ಪೋಷಕರು ಮಕ್ಕಳನ್ನು ಕಳಿಸುವಲ್ಲಿ ಹಿಂದೇಟು ಹಾಕುತ್ತಿದ್ದಾರೆ.

ಇನ್ನೂ 4 ಕೇಂದ್ರ
ಸಂತ್ರಸ್ತರ ಅನುಕೂಲಕ್ಕಾಗಿ ಬೆಳ್ಳಾರೆ, ವಿಟ್ಲ, ಪಾಣಾಜೆ, ಕಾಣಿಯೂರಿನಲ್ಲಿ ಹೊಸದಾಗಿ ಕೇಂದ್ರ ತೆರೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಬೆಳ್ಳಾರೆ ಹೊರತುಪಡಿಸಿ ಉಳಿದ ಮೂರು ಕಡೆ ಕಟ್ಟಡ ಸಿದ್ಧವಾಗಿದೆ. ಇದರಿಂದ ಪುತ್ತೂರು, ಸುಳ್ಯ ಭಾಗದಿಂದ ಕೊಕ್ಕಡ, ಉಜಿರೆ ಅಥವಾ ಕೊçಲ ಕೇಂದ್ರಕ್ಕೆ ಹೋಗುವ ಪ್ರಮೇಯ ತಪ್ಪಲಿದೆ.

ಎಂಡೋ ಪೀಡಿತರು ಔಷಧವನ್ನು ಖಾಸಗಿಯಾಗಿ ಹಣ ಕೊಟ್ಟು ಖರೀದಿಸುತ್ತಿದ್ದರೆ ಆ ಬಿಲ್‌ ಅನ್ನು ನೀಡಿದರೆ ಹಣವನ್ನು ಸರಕಾರದಿಂದ ಮರು ಪಾವತಿಸಲು ಅವಕಾಶ ಇದೆ. ಈ ಸೌಲಭ್ಯವನ್ನು ಎಂಡೋಪೀಡಿತರು ಪಡೆದುಕೊಳ್ಳಬೇಕು.
– ಡಾ| ನವೀನ್‌ ಕುಮಾರ್‌,
ಜಿಲ್ಲಾ ನೋಡೆಲ್‌ ಅಧಿಕಾರಿ

 

Advertisement

Udayavani is now on Telegram. Click here to join our channel and stay updated with the latest news.

Next