Advertisement

ಸೋರುತಿಹುದು ಜ್ಞಾನ ದೇಗುಲ ಮಾಳಿಗೆ

12:02 PM Oct 16, 2019 | |

ಉಮೇಶ ಬಳಬಟ್ಟಿ
ಇಂಡಿ:
ಕಳೆದ ಹದಿನೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ ತಾಲೂಕಿನ ಅನೇಕ ಶಾಲೆಗಳ ಚಾವಣಿ ಸೋರುತ್ತಿವೆ. ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿಯಾಗಿದ್ದು, ಶಾಲಾ ಶಿಕ್ಷಕರು ಆತಂಕದಲ್ಲಿ ಪಾಠ ಬೋಧನೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ತಾಲೂಕಿನ ಇಂಗಳಗಿ ತಾಂಡಾ-1 ಹಾಗೂ ತಾಂಡಾ-2ರ ಸರಕಾರಿ ಪ್ರಾಥಮಿಕ ಶಾಲೆ ಮತ್ತು ಇಂಡಿ ನಗರದ ಅಂಬೇಡ್ಕರ್‌ ವೃತ್ತದಲ್ಲಿರುವ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಗಳ ಕಟ್ಟಡಗಳು ಮಳೆನೀರಿನಿಂದ ಸೋರುತ್ತಿವೆ. ಇಂಗಳಗಿ ತಾಂಡಾ ಶಾಲಾ ಕಟ್ಟಡಗಳೆರಡು ಶಿಕ್ಷಣ ಇಲಾಖೆಗೆ ಮತ್ತು ಇಂಡಿ ನಗರದ ಅಂಬೇಡ್ಕರ್‌ ವೃತ್ತದಲ್ಲಿರುವ ಶಾಲೆಯೂ ಪುರಸಭೆ ವ್ಯಾಪ್ತಿ ಬರುತ್ತವೆ. ಶಾಲೆ ಕಟ್ಟಡ ಶಿಥಿಲಾವ್ಯವಸ್ಥೆಗೆ ತಲುಪಿದ್ದು, ಅಲ್ಲಿ ಪಾಠ ಮಾಡುವ ಶಿಕ್ಷಕರು ಮತ್ತು ಕಲಿಯುವ ವಿದ್ಯಾರ್ಥಿಗಳು ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ಕೂರಬೇಕಾದ ಅನಿವಾರ್ಯತೆ ಎದುರಾಗಿದೆ. ಇನ್ನು ಶಿಥಿಲಗೊಂಡ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಿಕೊಡಲು ಪಾಲಕರು ಸಹ ಹಿಂದೇಟು ಹಾಕುತ್ತಿದ್ದಾರೆ.

ನಗರದ ಶಾಲೆಯನ್ನು ದುರಸ್ತಿಗೊಳಿಸಲು ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಸಹ ಶಿಕ್ಷಕರು ಪುರಸಭೆಗೆ ಹತ್ತಾರು ಬಾರಿ ಮೌಖೀಕ ಹಾಗೂ ಲಿಖೀತವಾಗಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗಿದೆ.

ಇನ್ನು ಇಂಗಳಗಿ ತಾಂಡಾ ಶಾಲೆಗಳ ದುರಸ್ತಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಲ್ಲಿನ ನಿವಾಸಿಗಳು ಆಪಾದಿಸಿದ್ದಾರೆ.

ಕ್ಷೇತ್ರ ಶಿಕ್ಷಣಾಧಿ ಕಾರಿಗಳಿಗೆ ಹೇಳಿದರೆ ಶಾಲೆಗೆ ಬಂದು ನೋಡಿಕೊಂಡು ಹೋಗುತ್ತಾರೆ. ಜಿಪಂಗೆ ಪತ್ರ ಬರೆಯಲಾಗಿದೆ. ಅನುದಾನ ಬಂದ ಕೂಡಲೇ ದುರಸ್ತಿ ಮಾಡಿಸುವುದಾಗಿ ತಿಳಿಸುತ್ತಾರೆ. ಇದು ಮೂರು ವರ್ಷಗಳಿಂದ ಹೀಗೆ ನಡೆಯುತ್ತ ಬಂದಿದೆ. ಆದರೆ, ಶಾಲೆಯ ಗೋಡೆಗಳು ಕುಸಿಯುತ್ತಿವೆ. ಯಾವಾಗ ಶಾಲೆ ಕಟ್ಟಡ ಬೀಳುತ್ತದೆಯೋ ಗೊತ್ತಿಲ್ಲ. ಹೀಗಾಗಿ ಮಳೆ ಬಂದರೆ ಶಾಲೆಯ ಮುಂದಿನ ಕಿರಾಣಿ ಅಂಗಡಿಯ ಪತ್ರಾಸ್‌ ಸೆಡ್‌ನ‌ಲ್ಲಿ ಶಿಕ್ಷಕರು ತರಗತಿ ನಡೆಸುತ್ತಿದ್ದಾರೆ.

Advertisement

ಶಿಕ್ಷಣ ಇಲಾಖೆ ಕೂಡಲೇ ಇತ್ತ ಗಮನಹರಿಸಿ ಶಾಲಾ ಕಟ್ಟಡಗಳ ದುರಸ್ತಿ ಮಾಡಬೇಕೆಂದು ಶಾಲಾ ಮಕ್ಕಳ ಪೋಷಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next