Advertisement

ಕಾಲ್ಚೆಂಡಿನ ಕಾಳಗಕ್ಕೆ ಮಂಗಲಂ

06:00 AM Jul 22, 2018 | Team Udayavani |

ಕ್ರೀಡೆ ಕೇವಲ ಮನೋರಂಜನೆಯ ವಿಚಾರವಾಗಿರದೇ ಅದು ಮನುಷ್ಯನ ಬದುಕಿನೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿದೆ ಎಂಬುದಕ್ಕೆ ಉತ್ಕಟ ಕ್ರೀಡಾಭಿಮಾನವೇ ಸಾಕ್ಷಿ. ಎಷ್ಟೋ ಬಾರಿ ಕ್ರೀಡಾಪ್ರಿಯರು ನಮ್ಮ ನೆಚ್ಚಿನ ಆಟಗಾರ ಅಥವಾ ತಂಡಗಳು ನಮ್ಮ ನಿರೀಕ್ಷೆಯ ಆಟವನ್ನು ತೋರ್ಪಡಿಸದೇ ಇದ್ದಾಗ ಅವರ ಮೇಲೆ ಕೋಪ ವ್ಯಕ್ತಪಡಿಸಿದ್ದೂ ಇದೆ. ಆಟಗಾರನ ಮನೆಯ ಮೇಲೆ ಕಲ್ಲು ತೂರಿದ್ದೂ ಉಂಟು. ಕೆಲವು ಅಭಿಮಾನಿಗಳು ತಮ್ಮ ಮನೆಯ ಟಿ. ವಿ. ಯನ್ನೇ ನಾಶಪಡಿಸುತ್ತಾರೆ. ಕೆಲವು ಅಭಿಮಾನಿಗಳು ತಮ್ಮ ಜೀವಕ್ಕೇ ಕುಂದು ತಂದುಕೊಂಡ ಉದಾಹರಣೆಗಳಿವೆ.

Advertisement

ಕಳೆದ ರವಿವಾರ ರಾತ್ರಿ ಜಗತ್ತಿನ ಅಧಿಕ ಅಭಿಮಾನಿಗಳನ್ನು ಹೊಂದಿರುವ ಕ್ರೀಡೆ ಫ‌ುಟ್ಬಾಲ್‌ ವಿಶ್ವಕಪ್‌ನ ಕೊನೆಯ ಫೈನಲ್‌ ಪಂದ್ಯ ರಷ್ಯಾದ ಮಾಸ್ಕೊದಲ್ಲಿ ನಡೆಯುತ್ತಿದ್ದು , ಅದರ ಪರಿಣಾಮವನ್ನು ಜಗತ್ತು ನಿರೀಕ್ಷಿಸುತ್ತಿತ್ತು. ಜಗತ್ತಿನಾದ್ಯಂತ ಜನರ ಕಾತರತೆಯನ್ನು ಕಂಡಾಗ ಇದೊಂದು ಸಾಮಾನ್ಯ ಫ‌ುಟ್ಬಾಲ್‌ ಪಂದ್ಯವೆನಿಸದೆ, ಎರಡು ರಾಷ್ಟ್ರಗಳ ಮತ್ತು ಕ್ರೀಡಾಭಿಮಾನಿಗಳ ಪ್ರತಿಷ್ಠೆಯಂತೆ ತೋರುತ್ತಿತ್ತು. ಈ ಪಂದ್ಯವು ದೇಶಾಭಿಮಾನ, ಕ್ರೀಡಾಭಿಮಾನ ಮತ್ತು ಮನುಷ್ಯನ ಭಾವನೆಗಳನ್ನು ತುಂಬಿರುವ ಒಂದು ಯುದ್ಧದಂತೆ ಪರಿಣಮಿಸುತ್ತಿತ್ತು. 

ಫೈನಲ್‌ ತಲುಪಿರುವ ಫ್ರಾನ್ಸ್‌ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಅಸ್ತಿತ್ವವನ್ನು ಹೊಂದಿದ್ದು , ಎಲ್ಲ ಸ್ತರಗಳಲ್ಲಿ ಮುಂಚೂಣಿಯಲ್ಲಿರುವ ರಾಷ್ಟ್ರವಾಗಿದೆ. ಅಲ್ಲದೆ ತನ್ನ ಕ್ರೀಡಾಪಟುಗಳಿಗೆ ಎಲ್ಲ ರೀತಿಯ ಸೌಕರ್ಯವನ್ನು ನೀಡಿರುವ ರಾಷ್ಟ್ರವಾಗಿದೆ. 20 ವರ್ಷದ ನಂತರ ಬಂದಿರುವ ಅವಕಾಶವನ್ನು ಶತಾಯಗತಾಯ ಪಡೆಯಲು ಹವಣಿಸುತ್ತಿದೆ. 

ಇನ್ನೊಂದು ಕಡೆ ಫೀನಿಕ್ಸ್‌ ಪಕ್ಷಿಯಂತೆ ಎದ್ದು ಗೆಲುವನ್ನು ಸಾಧಿಸಿದ ಕ್ರೊವೇಶಿಯಾ ಅತ್ಯಂತ ಕಡಿಮೆ ಜನಸಂಖ್ಯೆಯ ರಾಷ್ಟ್ರ. ಆರ್ಥಿಕವಾಗಿ ಅಷ್ಟೊಂದು ಸದೃಢತೆ ಇಲ್ಲದಿದ್ದರೂ ಕ್ರೀಡೆಯಲ್ಲಿ ಈ ಹಂತಕ್ಕೆ ತಲುಪಿದ್ದು ಪ್ರಶಂಸನಾರ್ಹ. ಹಾಗಾಗಿ ಹೆಚ್ಚಿನ ಕ್ರೀಡಾ ಭಿಮಾನಿಗಳಲ್ಲಿ     ಈ ತಂಡವೇ ವಿಶ್ವಕಪ್‌ ಎತ್ತಲಿ ಎಂಬ ಆಶಯವಿತ್ತು. ಹಾಗೆಂದು, ಫ್ರಾನ್ಸ್‌ ಬಗ್ಗೆ ಅವರಿಗೇನೂ ದ್ವೇಷವಿಲ್ಲ ; ಆದರೆ ಕ್ರೊವೇಶಿಯಾ ತಂಡದ ಮೇಲೆ ಏನೋ ಕರುಣೆ ಮತ್ತು ಪ್ರೀತಿ.

    ಅಂತೂ ಫೈನಲ್‌ ಪಂದ್ಯದ ಪ್ರಾರಂಭ ತುಂಬಾ ಉತ್ಸಾಹದಿಂದ ಕ್ರೊವೇಶಿಯಾ ರಣರಂಗವನ್ನು ಪ್ರವೇಶಿಸಿತಾದರೂ ತನ್ನ ತಪ್ಪಿನಿಂದಾಗಿ ಸ್ವ-ಗೋಲಿನ ಬಲಿಯಾಯಿತು. ಆದರೆ 28ನೆಯ ನಿಮಿಷದ ಗೋಲಿನಿಂದಾಗಿ ಕ್ರೊವೇಶಿಯಾದ ಮರುಭೂಮಿಯಲ್ಲಿ ಓಯಸಿಸ್‌ ಕಂಡಿತು. ಆದರೆ, ಅದು ಹೆಚ್ಚು ಕಾಲ ಉಳಿಯಲಿಲ್ಲ. ಫ್ರಾನ್ಸ್‌ನ ಕೈಲಿಯನ್‌ ಎಂಬಪೆ ಎಂಬ ಕಾಲ್ಚೆಂಡು ಮಾಂತ್ರಿಕನಿಂದ ಆಟದ ಗತಿಯೇ ಬದಲಾಯಿತು. ಕೆಲವೇ ನಿಮಿಷಗಳಲ್ಲಿ ಆತ ಜಗತ್ತಿನ ಶ್ರೇಷ್ಠ ಆಟಗಾರನೆನಿಸಿದ. ಫ್ರಾನ್ಸ್‌ ವಿಶ್ವ ಫ‌ುಟ್‌ಬಾಲ್‌ನ ಅಧಿಪತಿಯಾಯಿತು. ಇಡೀ ರಷ್ಯಾ ದೇಶವೇ ಇದಕ್ಕೆ ಸಾಕ್ಷಿಯಾಯಿತು. ಪಂದ್ಯವನ್ನು ಫ್ರಾನ್ಸ್‌ ಗೆಲ್ಲುತ್ತಿದ್ದಂತೆ, ವಿಜಯೋತ್ಸವ ಮುಗಿಲು ಮುಟ್ಟಿತು. ಸ್ವತಃ ಫ್ರಾನ್ಸ್‌ ನ ಅಧ್ಯಕ್ಷರು ಕ್ರೀಡಾಂಗಣದಲ್ಲಿ ನರ್ತಿಸಿದರೆಂದರೆ, ಕ್ರೀಡೆಯ ಹುಚ್ಚು ಎಷ್ಟರಮಟ್ಟಿನದು ಎಂದು ತಿಳಿಯುತ್ತದೆ. ಜಗತ್ತಿನ ಇತರ ಎಲ್ಲಾ ಸಾಧನೆಗಿಂತಲೂ ಇದು ಮೀರಿದ್ದು ಎಂಬ ಭಾವನೆ ಫ್ರಾನ್ಸ್‌ನ ಜನರದಾಗಿತ್ತು. ಹುಚ್ಚೆದ್ದು ಕುಣಿಯುತ್ತಿರುವ ಜನರನ್ನು ಹತೋಟಿಗೆ ತರಲು ಪೊಲೀಸರು ಹರಸಾಹಸಪಟ್ಟರು.

Advertisement

ಇತ್ತ ಕಡೆ ಗೆಲುವಿನ ಹೊಸ್ತಿಲಲ್ಲಿ ಎಡವಿದ ಕ್ರೊವೇಶಿಯಾದ ಅಭಿಮಾನಿಗಳ ಕನಸು ಚೂರಾಯಿತು. ಇದರಿಂದ ದುಃಖೀಸಿದವರು ಅಸಂಖ್ಯಾತ ಮಂದಿ. ನೆಮ್ಮದಿ ಕಳೆದುಕೊಂಡವರು ಇನ್ನೆಷ್ಟೋ. ಕ್ರೀಡಾಭಿಮಾನವೆಂಬುದು ಒಂದು ರೀತಿಯಲ್ಲಿ ವಿಶಿಷ್ಟವಾದ ಭಾವ. ಕ್ರೀಡೆಯಲ್ಲಿ ಭಾಗವಹಿಸುತ್ತಿರುವ ರಾಷ್ಟ್ರ ನಮ್ಮದಾಗಿರಲಿ ಅಥವಾ ನಮ್ಮದಾಗದಿರಲಿ, ಆಟಗಾರ ನಮ್ಮವನಾಗಿರಲಿ, ನಮ್ಮವನಾಗದಿರ‌ಲಿ, ಎಲ್ಲೋ ಇರುವ ಕ್ರೀಡಾಭಿಮಾನಿಗೆ ಎಲ್ಲವನ್ನೂ ಕಳೆದುಕೊಂಡಂತೆ ಭಾಸವಾಗುತ್ತದೆ. ಅಭಿಮಾನಿಗಳು ತಮ್ಮ ನೆಚ್ಚಿನ ತಂಡಗಳು ಗೆಲ್ಲಬೇಕು ಎಂದು ಹೋಮ-ಹವನಗಳನ್ನು ಮಾಡುವುದುಂಟು. ಅವರ ಭಾವಚಿತ್ರಕ್ಕೆ ಅಭಿಷೇಕ ಮಾಡುವವರೂ ಇದ್ದಾರೆ. 

    ಗ್ರೀಕ್‌, ರೋಮನ್ನರ ಕಾಲದಿಂದಲೂ ಕ್ರೀಡಾಭಿಮಾನ ಬೆಳೆದುಕೊಂಡು ಬಂದಿತ್ತು. ರೋಮನ್ನರು ಕುಸ್ತಿಪಟುಗಳನ್ನು ಗ್ಲಾಡಿಯೇಟರ್‌ ಎಂದು ಕರೆಯುತ್ತಿದ್ದರು. ಆ ಗ್ಲಾಡಿಯೇಟರ್‌ಗಳ ಆಯ್ಕೆ ವಿಚಿತ್ರವಾಗಿತ್ತು. ಯುದ್ಧ ಕೈದಿಗಳು, ಜೀತದಾಳುಗಳು ಮತ್ತು ಕ್ರಿಮಿನಲ್ಸ್‌ಗಳನ್ನು ಗ್ಲಾಡಿಯೇಟರ್ಗಳಾಗಿ ಬಳಸುತ್ತಿದ್ದರು. ಈ ಗ್ಲಾಡಿಯೇಟರ್‌ಗಳು ಮನುಷ್ಯರ ಮಧ್ಯೆ ಹೋರಾಡದೇ ಪ್ರಾಣಿಗಳ ಜೊತೆಯಲ್ಲೂ ಹೋರಾಡಬೇಕಿತ್ತು. ಇದರಿಂದ ಕೆಲವರು ದಾರುಣ ಅಂತ್ಯವನ್ನು ಕಾಣುತ್ತಿದ್ದರು. ಆದರೆ, ಇದು ರೋಮನ್‌ ರಾಜರಿಗೆ ಕೇವಲ ಒಂದು ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಇಲ್ಲಿ ಮನುಷ್ಯನ ಜೀವಕ್ಕೆ ಯಾವುದೇ ಬೆಲೆ ಇರಲಿಲ್ಲ. ಗ್ರೀಕರು ಮನುಷ್ಯನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಹೆಚ್ಚಿನ ಪ್ರಾಮುಖ್ಯವನ್ನು ನೀಡಿದ್ದರು. ಹಾಗಾಗಿ, ಓಲಂಪಿಕ್ಸ್‌ ಕ್ರೀಡೆಯ ಆರಂಭವಾಯಿತು. ಸುಮಾರು 2,759 ವರ್ಷಗಳ ಹಿಂದೆ ಅಂದರೆ ಕ್ರಿ.ಪೂ. 776ರಲ್ಲಿ ಈ ಕ್ರೀಡೆ ಪ್ರಾರಂಭವಾಯಿತು. ಕಾರಣಾಂತರಗಳಿಂದ ಹಲವು ವರ್ಷಗಳವರೆಗೆ ಓಲಂಪಿಕ್ಸ್‌ ಕ್ರೀಡೆ ತಡೆಹಿಡಿಯಲಾಗಿತ್ತು. ಮತ್ತೆ 19ನೇ ಶತಮಾನದಲ್ಲಿ ಫ್ರಾನ್ಸ್‌ನ ನೇತೃತ್ವದಲ್ಲಿ ಮತ್ತೆ ಪುನರಾರಂಭಗೊಂಡಿತ್ತು.

ರಾಜೇಶ್‌ ನಾಯ್ಕ

Advertisement

Udayavani is now on Telegram. Click here to join our channel and stay updated with the latest news.

Next