ಚನ್ನರಾಯಪಟ್ಟಣ: ಮೈಸೂರು ಪ್ರಾಂತ್ಯದ ಪ್ರಭಾವ ಹೊಂದಿರುವ ತಾಲೂಕಿನಲ್ಲಿ ಕೋವಿಡ್ ಭೀತಿಯ ನಡುವೆಯೂ ಈ ಬಾರಿ ದಸರಾ ಬೊಂಬೆ ಗಳ ಉತ್ಸವ ಕಳೆಕಟ್ಟಿತ್ತು. ಮಹಾಲಕ್ಷ್ಮೀ, ದುರ್ಗಿ ದೇವಾಲಯ ಮತ್ತು ಮನೆಗಳಲ್ಲಿ ಹಿಂದೂ ಸಾಂಪ್ರದಾಯದಂತೆ ದಸರಾ ಬೊಂಬೆಗಳನ್ನು ಕೂರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಾಡ ಹಬ್ಬದ ಕೊನೆಯ ಘಟ್ಟವಾದ ವಿಜಯ ದಶಮಿ ಸೋಮವಾರದಂದು ಬೊಂಬೆಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಗೊಂಬೆ ದರ್ಬಾರ್ ಅನ್ನು ಕೊನೆಗೊಳಿಸಲಾಯಿತು.
ನವರಾತ್ರಿ ಉತ್ಸವಕ್ಕೆ ಚಾಲನೆ ದೊರೆತ ದಿನ ದಂದೇ ತಾಲೂಕಿನ ಹಲವು ಮನೆಗಳಲ್ಲಿ ಬೊಂಬೆಗಳ ದರ್ಬಾರ್ ಆರಂಭಗೊಳ್ಳುತ್ತದೆ. ದಸರಾ ಬೊಂಬೆ ಪ್ರದರ್ಶನ ಜಾನಪದ ಪರಂಪರೆ, ಸಾಂಸ್ಕೃ ತಿಕ ಉತ್ಸವದಂತೆ ಕಂಡು ಬಂದರೂ ಅದಕ್ಕೆ ಅದ ರದ್ದೇ ಆದ ಧಾರ್ಮಿಕ ಚೌಕಟ್ಟು ಇದೆ. ಅದರಂತೆ ಮಹಾಗ್ರಂಥಗಳಾದ ರಾಮಾಯಣ, ಮಹಾ ಭಾರತ, ಶ್ರೀಕೃಷ್ಣನ ಲೀಲೆ, ವಿಷ್ಣು ಪುರಾಣ, ಸಮುದ್ರ ಮಥನ, ಶಿವ ಪಾರ್ವತಿಯ ಕಥೆಗಳು, ನವರಾತ್ರಿ ವೈಭವ, ಮೈಸೂರಿನ ಜಂಬೂಸವಾರಿ, ದುರ್ಗೆಯರ ಅವತಾರ ಹೀಗೆ ಪುರಾಣ ಕಥೆಗಳನ್ನು ಆಯ್ಕೆ ಮಾಡಿಕೊಂಡು ಗೊಂಬೆಗಳನ್ನು ಜೋಡಿಸಲಾಗಿತ್ತು.
ಶಾಲಾ ತರಗತಿ ನೆನಪು: ಈ ಬಾರಿ ತಾಲೂಕು ದಂಡಿಗನಹಳ್ಳಿ ಹೋಬಳಿ ಹಿರಣ್ಯಗರ್ಭದಲ್ಲಿನ ಮಹಾಲಕ್ಷ್ಮೀ ದೇವಾಲಯದಲ್ಲಿ ಜೋಡಿಸಲಾಗಿದ್ದ ಗೊಂಬೆಗಳು ಜನಾಕರ್ಷಣೆಯ ಕೇಂದ್ರ ಬಿಂದು ಆಗಿದ್ದವು. ಕೋವಿಡ್ ಸೋಂಕಿನ ಹಿನ್ನೆಲೆ ಯಲ್ಲಿ ಶಾಲೆಗಳಿಗೆ ಸರ್ಕಾರ ರಜೆ ಘೋಷಿಸಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಮಕ್ಕಳು ತರಗತಿ ಯಲ್ಲಿ ಕೂತು ಪಾಠ ಕೇಳುತ್ತಿರುವಂತೆ ಗೊಂಬೆಗಳನ್ನು ಜೋಡಿಸಿದ್ದು, ಮಕ್ಕಳಿಗೆ ಶಾಲೆಯ ದಿನಗಳನ್ನು ನೆನೆಪಿಸುವಂತಿತ್ತು.
ಕ್ರಿಕೆಟ್ ಪಂದ್ಯಾವಳಿ: ಇನ್ನು ಕ್ರೀಡೆಗಳಲ್ಲಿ ಭಾರತೀಯರಿಗೆ ಹೆಚ್ಚು ಹುಚ್ಚು ಹಿಡಿಸಿರುವುದು ಕ್ರಿಕೆಟ್. ಹೌದು, ಕೋವಿಡ್ ದಿಂದ ಸ್ತಬ್ಧಗೊಂಡಿದ್ದ ಕ್ರಿಕೆಟ್ ಪಂದ್ಯಾವಳಿ ಐಪಿಎಲ್‌ನೊಂದಿಗೆ ಆರಂಭ ಗೊಂಡಿದ್ದು, ಇದನ್ನೇ ಆಧಾರವಾಗಿಟ್ಟುಕೊಂಡು ಕ್ರಿಕೆಟ್ ಆಡುತ್ತಿರುವಂತಹ ಸನ್ನಿವೇಶವನ್ನು ಗೊಂಬೆಗಳ ಮೂಲಕ ತೋರಿಸಿದ್ದು, ವಿಶೇಷವಾಗಿತ್ತು.
ಕೆಲವು ತಮ್ಮ ಸಾಮರ್ಥಯಕ್ಕೆ ಅನುಗುಣವಾಗಿ ಮೂರು, ಐದು, ಒಂಬತ್ತು ಮೆಟ್ಟಿಲುಗಳನ್ನು ನಿರ್ಮಿಸಿ ಬೊಂಬೆಗಳನ್ನು ಕೂರಿಸಿದ್ದರು. ಮೇಲಿನ ಮೆಟ್ಟಿಲಿನಲ್ಲಿ ರಾಜ, ರಾಣಿ, ಕೆಳ ಭಾಗದಲ್ಲಿ ಕಳಸ ಇಟ್ಟಿದ್ದರು. ಕೆಲವರು ಹಳೇಗೊಂಬೆಗಳ ಜೊತೆ ತಾವು ಪ್ರವಾಸ ಹೋಗಿದ್ದಾಗ, ಇತರೆ ಸಂದರ್ಭದಲ್ಲಿ ತಂದಿದ್ದ ಗೊಂಬೆಗಳನ್ನು ಜೋಡಿಸಿದ್ದರು. ನವರಾತ್ರಿಯ ಕೊನೇ ದಿನ ಅಂದರೆ ಸೋಮ ವಾರ ವಿಜಯದಶಮಿ ದಿನ ಮೈಸೂರಿನ ಅಂಬಾ ವಿಲಾಸ ಅರಮನೆಯಲ್ಲಿ ಉತ್ಸವ ಮೇಳೈಸಿದ್ದರೆ, ಇತ್ತ ಮನೆ ಮನೆಗಳಲ್ಲಿನ ಗೊಂಬೆ ಸಾಮ್ರಾಜ್ಯ ತನ್ನ ದರ್ಬಾರ್ ಮುಗಿಸಲಾಯಿತು. ಮೈಸೂರಿನಲ್ಲಿ ಜಂಬೂಸವಾರಿ ನಡೆಯುತ್ತಿರುವಂತೆ, ಇತ್ತ ಮನೆ, ದೇಗುಲಗಳಲ್ಲಿ ಜೋಡಿಸಿಟ್ಟಿದ್ದ ಪಟ್ಟದ ಗೊಂಬೆ ಗಳ ವಿಸರ್ಜನೆ ಮಾಡಿ, ಈ ವರ್ಷದ ದಸರ ದರ್ಬಾರ್‌ಗೆ ತೆರೆ ಎಳೆಯಲಾಯಿತು.
ವಿಜಯದಶಮಿ ನಮ್ಮ ಪವಿತ್ರವಾದ ಹಬ್ಬ. ಹಿರಿಯರು ಆಚರಿಸಿಕೊಂಡು ಬಂದಿರುವ ನವರಾತ್ರಿ ಬೊಂಬೆ ಉತ್ಸವ ಹಲವು ವರ್ಷದಿಂದ ಮನೆಯಲ್ಲಿ ಕೂರಿಸಲಾಗುತ್ತಿದೆ. ನಮ್ಮ ಸಂಪ್ರದಾಯ ಮುಂದುವರಿಯಬೇಕು, ಮಕ್ಕಳಿಗೂ ಇದರ ಮಹತ್ವ ತಿಳಿಯಲಿ ಎಂಬ ಕಾರಣಕ್ಕೆ ದಸರಾ ಬೊಂಬೆ ಕೂರಿಸಿ ಪೂಜೆ ಸಲ್ಲಿಸಲಾಗುತ್ತಿದೆ.
–ರಾಜೇಶ್ವರಿ ವಿಜಯಕುಮಾರ್, ಚನ್ನರಾಯಪಟ್ಟಣ.
– ಶಾಮಸುಂದರ್ ಕೆ.ಅಣ್ಣೇನಹಳ್ಳಿ