Advertisement

ವರ್ಷಾಂತ್ಯಕ್ಕೆ ದ.ಕ., ಉಡುಪಿಯಲ್ಲಿ ಗೋಶಾಲೆ: ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ ಸರಕಾರ

11:28 PM Jun 17, 2022 | Team Udayavani |

ಬೆಂಗಳೂರು: ರಾಜ್ಯದ ಪ್ರತೀ ಜಿಲ್ಲೆಯಲ್ಲಿ ಡಿಸೆಂಬರ್‌ ಅಂತ್ಯದೊಳಗೆ ಗೋಶಾಲೆಗಳನ್ನು ಪ್ರಾರಂಭ ಮಾಡಲಾಗುವುದೆಂದು ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿರುವ ರಾಜ್ಯ ಸರಕಾರ, ಯಾವ ತಿಂಗ ಳಲ್ಲಿ, ಯಾವ ಜಿಲ್ಲೆಯಲ್ಲಿ ಗೋಶಾಲೆ ಕಾರ್ಯಾರಂಭ ಮಾಡಲಿವೆ ಎನ್ನುವ ಬಗ್ಗೆ ಪಟ್ಟಿಯನ್ನೂ ಸಲ್ಲಿಸಿದೆ.

Advertisement

ಸರಕಾರ ಮಾಡಿಕೊಂಡಿರುವ ಪಟ್ಟಿ ಯಂತೆ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಬಳ್ಳಾಪುರ, ಕಲಬುರಗಿ, ಬೆಳಗಾವಿ ಜಿಲ್ಲೆಗಳಲ್ಲಿ ಡಿಸೆಂಬರ್‌ ಅಂತ್ಯದೊಳಗೆ ಗೋಶಾಲೆಗಳು ಕಾರ್ಯಾರಂಭ ಮಾಡಲಿವೆ. ಚಿಕ್ಕಮಗಳೂರು, ವಿಜಯ ಪುರ, ಮೈಸೂರು, ಹಾಸನ ಹಾಗೂ ತುಮಕೂರು ಜಿಲ್ಲೆಗಳಲ್ಲಿ 2022ರ ಜುಲೈ 15ರೊಳಗೆ ಗೋಶಾಲೆಗಳು ಕಾರ್ಯಾರಂಭ ಮಾಡ ಲಿವೆ. ಬೀದರ್‌, ಕೊಪ್ಪಳ, ಚಿತ್ರದುರ್ಗ, ಹಾವೇರಿ, ಉತ್ತರ ಕನ್ನಡ, ದಾವಣಗೆರೆ, ಕೊಡಗು, ಚಾಮರಾಜ ನಗರ, ಕೋಲಾರ ಹಾಗೂ ಬೆಂಗ ಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಆಗಸ್ಟ್‌ 1ರೊಳಗೆ ಗೋಶಾಲೆಗಳು ಕಾರ್ಯಾ ರಂಭ ಮಾಡಲಿವೆ. ರಾಯ ಚೂರು, ಧಾರವಾಡ, ಮಂಡ್ಯ, ಯಾದಗಿರಿ, ರಾಮನಗರ ಜಿಲ್ಲೆಗಳಲ್ಲಿ ಸೆಪ್ಟಂಬರ್‌ 1ರೊಳಗೆ, ಗದಗ, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಅಕ್ಟೋಬರ್‌ 1ರೊಳಗೆ ಹೀಗೆ ವರ್ಷದ ಅಂತ್ಯದೊಳಗೆ ಎಲ್ಲ 30 ಗೋಶಾಲೆಗಳ ಸ್ಥಾಪನೆ ಪ್ರಕ್ರಿಯೆ ಮುಗಿಯಲಿದೆ ಎಂದು ಸರಕಾರ ಹೇಳಿದೆ.

ಹೈಕೋರ್ಟ್‌ ಕಾನೂನು ಸೇವೆಗಳ ಸಮಿತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಸರಕಾರ ಪ್ರಮಾಣಪತ್ರ ಸಲ್ಲಿಸಿದೆ.

ಪಶುಸಂಗೋಪನ ಇಲಾಖೆ 2019ರಲ್ಲಿ ನಡೆಸಿದ ಜಾನುವಾರು ಗಣತಿ ಪ್ರಕಾರ ರಾಜ್ಯದಲ್ಲಿ 77,075 ಬೀಡಾಡಿ ದನಗಳು ಇದ್ದಾವೆ. ಅವುಗಳ ನಿರ್ವಹಣೆಗೆ ರಾಜ್ಯದ ಪ್ರತೀ ಜಿಲ್ಲೆಗೊಂದು ಗೋಶಾಲೆಯನ್ನು ತೆರೆಯಲು ಹಂತ-ಹಂತವಾಗಿ ಕ್ರಮ ಕೈಗೊಳ್ಳಲು ಸರಕಾರ ನಿರ್ಧರಿಸಿದೆ. 2021-22ನೇ ಸಾಲಿನ ಬಜೆಟ್‌ನಲ್ಲಿ ಪ್ರತೀ ಜಿಲ್ಲೆಗೊಂದು ಗೋಶಾಲೆ ಸ್ಥಾಪಿಸುವುದಾಗಿ ಸಿಎಂ ಘೋಷಿಸಿದ್ದರು. ಅದಕ್ಕಾಗಿ 15 ಕೋಟಿ ರೂ. ಅನುದಾನ ಸಹ ಮೀಸಲಿಡಲಾಗಿದೆ.
ಗೋಶಾಲೆಗಳಿಗೆ ಜಾಗ ಗುರುತಿಸುವುದು, ಅದರ ಸ್ಥಾಪನೆ ಮತ್ತು ನಿರ್ವಹಣೆ, ಅನುದಾನ ಬಳಕೆ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳ ನೇತೃತ್ವದ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಜಿಲ್ಲಾ ಮಟ್ಟದ ಸಮಿತಿ (ಡಿಎಸ್‌ಪಿಸಿಎ) ಗಳಿಗೆ ವಹಿಸಲಾಗಿದೆ ಎಂದು ಸರಕಾರ ಹೇಳಿದೆ.

70 ಹೆಚ್ಚುವರಿ ಗೋಶಾಲೆಗಳು
ಜಿಲ್ಲೆಗೊಂದರಂತೆ 30 ಗೋಶಾಲೆಯ ಜತೆಗೆ ಹೆಚ್ಚುವರಿಯಾಗಿ 70 ಗೋಶಾಲೆಗಳನ್ನು ತೆರೆಯಲು ಸರಕಾರ ತೀರ್ಮಾನಿಸಿದೆ. ಕಾಮಗಾರಿ ಚಾಲ್ತಿಯಲ್ಲಿರುವ ಗೋಶಾಲೆಗಳಿಗೆ 15 ಕೋಟಿ, ಹೊಸ 70 ಗೋಶಾಲೆಗಳ ನಿರ್ಮಾಣಕ್ಕೆ 20 ಕೋಟಿ ರೂ. ಸೇರಿದಂತೆ ಗೋಶಾಲೆಗಳ ಸ್ಥಾಪನೆಗೆ 50 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಇದಲ್ಲದೆ ಖಾಸಗಿ ಸಂಘ-ಸಂಸ್ಥೆಗಳು 197 ಗೋಶಾಲೆಗಳು ನಡೆಸುತ್ತಿದ್ದು, ಇವುಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಖಾಸಗಿ ಗೋಶಾಲೆಗಳಿಗೆ 2021-22ನೇ ಸಾಲಿಗೆ 3.77 ಕೋಟಿ ರೂ. ಹಾಗೂ 2022-23ನೇ ಸಾಲಿನಲ್ಲಿ 3.77 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ ಎಂದು ಸರಕಾರ ಹೇಳಿದೆ.

Advertisement

29 ಜಿಲ್ಲೆಗಳಲ್ಲಿ ಜಾಗಗಳ ಗುರುತು
ರಾಜ್ಯದ 30ರ ಪೈಕಿ ಬೆಂಗಳೂರು ನಗರ, ಶಿವಮೊಗ್ಗ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಭೂವಾಜ್ಯದಿಂದಾಗಿ ಗುರುತಿಸಲು ವಿಳಂಬವಾಗಿತ್ತು. ಶಿವಮೊಗ್ಗ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಬೇರೆ ಜಾಗ ಗುರುತಿಸಲಾಗಿದೆ. ಬೆಂಗಳೂರಿನ ಜಾಗ ಗುರುತಿಸುವ ಪ್ರಕ್ರಿಯೆಗೆ ಸ್ವಲ್ಪ ಕಾಲಾವಕಾಶ ಬೇಕಾಗಬಹುದು. ಉಳಿದಂತೆ 29 ಜಿಲ್ಲೆಗಳಲ್ಲಿ ಗುರುತಿಸಲಾದ ಜಾಗವನ್ನು ಡಿಎಸ್‌ಪಿಸಿಎಗೆ ಹಸ್ತಾಂತರಿಸಲಾಗಿದೆ. ಈ ಜಿಲ್ಲೆಗಳಲ್ಲಿ ಡಿಎಸ್‌ಪಿಸಿಎ ಗೋಶಾಲೆ ನಿರ್ಮಾಣ ಕಾರ್ಯ ಆರಂಭಿಸಲಿದೆ ಎಂದು ಸರಕಾರದ ಪ್ರಮಾಣಪತ್ರದಲ್ಲಿ ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next