Advertisement

ಕಡಬ: ಲೋ ವೋಲ್ಟೇಜ್‌ ಸಮಸ್ಯೆಗೆ ಮುಕ್ತಿ

09:36 AM Nov 30, 2020 | Suhan S |

ಕಡಬ, ನ. 29: ಲೋ ವೋಲ್ಟೇಜ್‌, ಪದೇ ಪದೆ ವಿದ್ಯುತ್‌ ಕಡಿತ ಮುಂತಾದ ಸಮಸ್ಯೆಗಳನ್ನು ಬಗೆಹರಿಸಿ ಗುಣಮಟ್ಟದ ವಿದ್ಯುತ್‌ ನೀಡಬೇಕೆಂಬ ಕಡಬ ಪರಿಸರದ ಜನರ ಬೇಡಿಕೆ ಕೊನೆಗೂ ಕೈಗೂಡುವ ಹಂತ ತಲುಪಿದೆ.

Advertisement

ದ್ವಿ ಪಥ ವಿದ್ಯುತ್‌ ಲೈನ್‌ ಅಳವಡಿಕೆ ಯೊಂದಿಗೆ ಕಡಬ ಮೆಸ್ಕಾಂ ಸಬ್‌ಸ್ಟೇಶನ್‌ನ ಸಾಮರ್ಥ್ಯ ವೃದ್ಧಿಯಾಗಿದ್ದು, ಭವಿಷ್ಯದಲ್ಲಿ ದಿನದ 24 ಗಂಟೆಯೂ ಗುಣಮಟ್ಟದ ವಿದ್ಯುತ್‌ ಪೂರೈಸಲು ಮೆಸ್ಕಾಂ ಸಜ್ಜಾಗಿದೆ.

ಸಬ್‌ಸ್ಟೇಶನ್‌ಸಾಮರ್ಥ್ಯ ವೃದ್ಧಿ :

ಕಡಬ ಮೆಸ್ಕಾಂ ಉಪ ವಿಭಾಗದ ಕಡಬ 33/11 ಕೆವಿ ಸಬ್‌ಸ್ಟೇಶನ್‌ನಲ್ಲಿ 1.81 ಕೋಟಿ ರೂ. ವೆಚ್ಚದಲ್ಲಿ 12.5 ಎಂವಿಎ ಹೆಚ್ಚುವರಿ ವಿದ್ಯುತ್‌ ಪರಿವರ್ತಕವನ್ನು ಅಳವಡಿಸುವ ಮೂಲಕ ಸಾಮರ್ಥ್ಯ ವೃದ್ಧಿಸಲಾಗಿದೆ. 16.9 ಕೋಟಿ ರೂ. ವೆಚ್ಚದಲ್ಲಿ ಪುತ್ತೂರು 110 ಕೆವಿ ಸಬ್‌ಸ್ಟೇಶನ್‌ನಿಂದ 25 ಕಿ.ಮೀ. ನೆಲ್ಯಾಡಿ ಟ್ಯಾಪಿಂಗ್‌ ಪಾಯಿಂಟ್‌ ಆಲಂಕಾರು ತನಕ ದ್ವಿಪಥ ಅಳವಡಿಕೆಯಿಂದಾಗಿ ದಿನದ 24 ಗಂಟೆ ಗುಣಮಟ್ಟದ ವಿದ್ಯುತ್‌ ಪೂರೈಕೆಯ ನಿರೀಕ್ಷೆ ಹೊಂದಲಾಗಿದೆ. 1 ವರ್ಷದ ಅವಧಿಯಲ್ಲಿ ಉಪ ವಿಭಾಗದ ವ್ಯಾಪ್ತಿಯಲ್ಲಿ ಸುಮಾರು 3.25 ಕೋಟಿ ರೂ. ವೆಚ್ಚದಲ್ಲಿ 65 ಹೆಚ್ಚುವರಿ ಪರಿವರ್ತಕಗಳನ್ನು ಅಳವಡಿಸಲಾಗಿದ್ದು, ಸುಮಾರು 50 ಲಕ್ಷ ರೂ. ವೆಚ್ಚದ ಕಾಮಗಾರಿಗಳು ಪ್ರಗತಿ ಯಲ್ಲಿವೆ. 1.4 ಕೋಟಿ ರೂ. ವೆಚ್ಚದಲ್ಲಿ ಕೇಬಲ್‌ ಬದಲಾವಣೆ ಕಾಮಗಾರಿ ನಡೆ ದಿದ್ದು, ಸುಮಾರು 49 ಲಕ್ಷ ರೂ. ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೆ.

ಕಡಬ, ಆಲಂಕಾರು, ಬಿಳಿನೆಲೆ ಹಾಗೂ ನೆಲ್ಯಾಡಿ ಶಾಖಾ ಕಚೇರಿಗಳ ಒಟ್ಟು 22 ಗ್ರಾಮಗಳ ವ್ಯಾಪ್ತಿಯನ್ನು ಕಡಬ ಮೆಸ್ಕಾಂ ಉಪ ವಿಭಾಗವು ಹೊಂದಿದೆ. ಕಡಬ ಹಾಗೂ ನೆಲ್ಯಾಡಿ ವಿದ್ಯುತ್‌ ಸಬ್‌ಸ್ಟೇಶನ್‌ಗಳು ಇದರ ವ್ಯಾಪ್ತಿಯಲ್ಲಿವೆ. ಉಪ ವಿಭಾಗದ ವ್ಯಾಪ್ತಿಯಲ್ಲಿ ಎಚ್‌ಟಿ2-4, ಎಲ್‌ಟಿ 7-36, ಭಾಗ್ಯಜ್ಯೋತಿ-1401, ಮನೆ-17,103, ವಾಣಿಜ್ಯ-2,047, ಕೃಷಿ-8,642, ಕೈಗಾರಿಕೆ-236, ಕುಡಿ ಯುವ ನೀರಿನ ಸ್ಥಾವರ-242, ಬೀದಿ ದೀಪ-178 ಹೀಗೆ ಒಟ್ಟು 29,892 ವಿದ್ಯುತ್‌ ಬಳಕೆದಾರ ಸಂಪರ್ಕಗಳಿವೆ.

Advertisement

ಕಡಬವು ತಾಲೂಕಾಗಿ ಮೇಲ್ದ ರ್ಜೆಗೇರಿದರೂ ಮೆಸ್ಕಾಂನ ತಾಲೂಕು ಮಟ್ಟದ ಉಪ ವಿಭಾಗದ ಕಚೇರಿಯು 2009ರಲ್ಲಿಯೇ ಮಂಜೂರಾಗಿ ಆರಂಭ ಗೊಂಡಿತ್ತು. ಉಪ ವಿಭಾಗ ಕಚೇರಿ ಕಡಬ ದಲ್ಲಿ ಆರಂಭಗೊಂಡಿರುವುದರಿಂದ ಗ್ರಾಹಕರು ಇಲ್ಲಿಯೇ ತಮ್ಮ ಕೆಲಸ ಕಾರ್ಯ ಮಾಡಿಸಿಕೊಳ್ಳುವಂತಾಗಿದೆ.

ಪೂರ್ಣಪ್ರಮಾಣದ ಸೇವಾ ಕೇಂದ್ರ ಅಗತ್ಯ :

ಉಪ ವಿಭಾಗ ವ್ಯಾಪ್ತಿಯ 24×7 ತುರ್ತು ಸೇವೆಗಳಿಗಾಗಿ ಈಗಾಗಲೇ ಇಲ್ಲಿ ಸೇವಾ ಕೇಂದ್ರ (ಸರ್ವೀಸ್‌ ಸ್ಟೇಶನ್‌) ಕೆಲಸ ಮಾಡುತ್ತಿದೆ. ಆದರೆ ಕೇವಲ ವಾಹನ ಮಾತ್ರ ಮಂಜೂರುಗೊಂಡಿರುವುದು ಬಿಟ್ಟರೆ ಸೇವಾ ಕೇಂದ್ರಕ್ಕಾಗಿ ಹೆಚ್ಚುವರಿ ಸಿಬಂದಿ ಸಿಕ್ಕಿಲ್ಲ. ಉಪ ವಿಭಾಗದ ಬಹುತೇಕ ವಿದ್ಯುತ್‌ ಲೈನ್‌ಗಳು ಅರಣ್ಯ ಪ್ರದೇಶದಲ್ಲಿಯೇ ಇರುವುದರಿಂದ ಪದೇ ಪದೆ ಸಮಸ್ಯೆಗಳು ಎದುರಾಗುವುದು ಇಲ್ಲಿ ಸಾಮಾನ್ಯ. ಮಳೆಗಾಲದಲ್ಲಂತೂ ಸಮಸ್ಯೆ ಹೇಳತೀರದು. ಆನೆ ಹಾವಳಿ, ನಕ್ಸಲ್‌ ಬಾಧಿತ ಅರಣ್ಯಭಾಗಗಳೂ ಈ ವ್ಯಾಪ್ತಿಯಲ್ಲಿರುವುದರಿಂದ ಉಪ ವಿಭಾಗಕ್ಕೆ ಪೂರ್ಣಪ್ರಮಾಣದ ಸೇವಾ ಕೇಂದ್ರ ಸಿಗಬೇಕೆಂಬುದು ಸ್ಥಳೀಯರ ಬೇಡಿಕೆ.

ಕಡಬ ಪ್ರದೇಶದ ವಿದ್ಯುತ್‌ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ದ್ವಿ ಪಥ ವಿದ್ಯುತ್‌ ಲೈನ್‌ ಅಳವಡಿಕೆ, ಸಬ್‌ ಸ್ಟೇಶನ್‌ನ ಸಾಮರ್ಥ್ಯ ವೃದ್ಧಿ ಸೇರಿ ಹಲವು ಕಾಮಗಾರಿಗಳು ಪೂರ್ಣಗೊಂಡಿವೆ. ಪ್ರಗತಿಯಲ್ಲಿರುವ ಕೆಲವು ಕಾಮಗಾರಿಗಳು ಶೀಘ್ರ ಪೂರ್ಣಗೊಂಡು ದಿನದ 24 ಗಂಟೆಯೂ ಗುಣಮಟ್ಟದ ವಿದ್ಯುತ್‌ ನೀಡ ಬೇಕೆಂಬ ಗುರಿ ಇರಿಸಿ ಕೊಂಡಿದ್ದೇವೆ.ಮಂಜಪ್ಪ, ಅಧೀಕ್ಷಕ ಎಂಜಿನಿಯರ್‌, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next