Advertisement

ರಾಜ್ಯದಲ್ಲಿ ಡ್ರೀಮ್‌ ಆಟ ಅಂತ್ಯ; ಗೇಮಿಂಗ್‌ ಆ್ಯಪ್‌ ಡ್ರೀಮ್‌ 11 ಕಾರ್ಯಾಚರಣೆ ಸ್ಥಗಿತ

11:50 PM Oct 10, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಆನ್‌ಲೈನ್‌ ಜೂಜಾಟ, ಸ್ಕಿಲ್‌ ಗೇಮ್‌, ಬೆಟ್ಟಿಂಗ್‌ಗೆ ನಿಷೇಧ ಹೇರಿ ಅಧಿಸೂಚನೆ ಹೊರಬಿದ್ದ ಬೆನ್ನಲ್ಲೇ ರಾಜ್ಯ ಸರಕಾರ ಕಾರ್ಯಾಚರಣೆ ಆರಂಭಿಸಿದ್ದು, ಜನಪ್ರಿಯ ಗೇಮಿಂಗ್‌ ಆ್ಯಪ್‌ ಡ್ರೀಮ್‌ 11 ತನ್ನ ಸೇವೆ ಸ್ಥಗಿತಗೊಳಿಸಿದೆ. ಈ ಮೂಲಕ ಆನ್‌ಲೈನ್‌ ಜೂಜು ವಿರುದ್ಧ ಸರಕಾರದ ಹೋರಾಟಕ್ಕೆ ದೊಡ್ಡ ಮಟ್ಟದ ಜಯ ಲಭಿಸಿದಂತಾಗಿದೆ.

Advertisement

ನಿಷೇಧ ಜಾರಿಯಾಗಿದ್ದರೂ ಕಾನೂನು ಉಲ್ಲಂಘಿಸಿ ಕಾರ್ಯಾಚರಿಸುತ್ತಿದ್ದ ಡ್ರೀಮ್‌ 11 ವಿರುದ್ಧ ಬೆಂಗಳೂರು ಪೊಲೀಸರು ಶನಿವಾರ ಎಫ್ಐಆರ್‌ ದಾಖಲಿಸಿದ್ದರು.ಮರುದಿನವೇ ಕರ್ನಾಟಕದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿ ರುವುದಾಗಿ ಡ್ರೀಮ್‌ 11 ಘೋಷಿಸಿದೆ.

“ಡ್ರೀಮ್‌ 11 ಆ್ಯಪ್‌ನಲ್ಲಿ ಕರ್ನಾಟಕದ ನಿವಾಸಿಗಳು ಇನ್ನು ಮುಂದೆ ಪೇ ಟು ಪ್ಲೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲ. ಆದರೆ ನಿಮ್ಮ ಅಕೌಂಟ್‌ ಬ್ಯಾಲೆನ್ಸ್‌ ಡ್ರೀಮ್‌ 11ರಲ್ಲಿ ಸುರಕ್ಷಿತವಾಗಿರುತ್ತದೆ’ ಎಂಬ ಸಂದೇಶವನ್ನು ಆ್ಯಪ್‌ ಪ್ರಕಟಿಸುತ್ತಿದೆ. ಈಗಾಗಲೇ ರಾಜ್ಯದಲ್ಲಿ ಇತರ ಗೇಮಿಂಗ್‌ ತಾಣಗಳಾದ ಎಂಪಿಎಲ್‌, ಮೈ 11 ಸರ್ಕಲ್‌, ಗೇಮ್‌ ಝೂ, ಹೌಝಾಟ್‌ ಸೇರಿದಂತೆ 50ಕ್ಕೂ ಅಧಿಕ ಆ್ಯಪ್‌ಗಳು ಕಾರ್ಯಾಚರಣೆ ಸ್ಥಗಿತಗೊಳಿಸಿವೆ.

ವಿವಿಧ ಆನ್‌ಲೈನ್‌ ಆ್ಯಪ್‌ಗಳ ಮೂಲಕ ರಾಜ್ಯದಲ್ಲಿ ಅನೇಕರು ಜೂಜಾಟದಲ್ಲಿ ತೊಡಗಿದ್ದರು. ಈಗ ಇದು ನಿಷೇಧಗೊಂಡ ಕಾರಣ ಹಲವು ಮಂದಿ ಹೆತ್ತವರು ಮತ್ತು ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಈ ಹಿಂದೆಯೇ ಆಂಧ್ರಪ್ರದೇಶ, ಅಸ್ಸಾಂ, ನಾಗಾ ಲ್ಯಾಂಡ್‌, ಒಡಿಶಾ, ಸಿಕ್ಕಿಂ, ತೆಲಂಗಾಣ ಮೊದಲಾದ ರಾಜ್ಯಗಳು ಆನ್‌ಲೈನ್‌ ಜೂಜಾಟ ನಿಷೇಧಿಸಿದ್ದವು. ಈಗ ಕರ್ನಾಟಕವೂ ಇದೇ ಕ್ರಮ ಕೈಗೊಂಡಿದ್ದು, ಈ ಸಂಬಂಧ ಸುಮಾರು 63 ಆ್ಯಪ್‌ಗಳ ಪಟ್ಟಿಯನ್ನು ಸಿದ್ಧಪಡಿಸಿದೆ.

Advertisement

ಇದನ್ನೂ ಓದಿ:ಇಂದು ಸಹ ಏರಿಕೆಯಾದ ಪೆಟ್ರೋಲ್‌, ಡೀಸೆಲ್‌ ದರ

ಹಣ ಕಳೆದುಕೊಳ್ಳುವ ಭೀತಿ
ರವಿವಾರದಿಂದ ರಾಜ್ಯದಲ್ಲಿ ಡ್ರೀಮ್‌ 11 ಮೂಲಕ ಕ್ರಿಕೆಟ್‌ ಜೂಜಾಟ ನಿಷೇಧವಾಗಿದೆ. ಐಪಿಎಲ್‌ ಕಾರಣದಿಂದ ಅನೇಕರು ತಮ್ಮ ಖಾತೆಯಿಂದ ಹಣವನ್ನು ಈ ಆ್ಯಪ್‌ಗೆ ವರ್ಗಾಯಿಸಿಕೊಂಡಿದ್ದರು. ಅಲ್ಲದೆ ಆ್ಯಪ್‌ಗಳಲ್ಲಿ ನಿತ್ಯ ಆಟವಾಡಿ ಗೆದ್ದ ಹಣವನ್ನು ತಮ್ಮ ಬ್ಯಾಂಕ್‌ ಖಾತೆಗೆ ವರ್ಗಾಯಿಸಿಕೊಳ್ಳದೆ ಹಾಗೆಯೇ ಇರಿಸಿಕೊಂಡಿದ್ದರು.

ಈಗ ಆನ್‌ಲೈನ್‌ ಗೇಮ್‌ನ ಬಹುತೇಕ ಎಲ್ಲ ಆ್ಯಪ್‌ಗಳು ನಿಷೇಧವಾಗಿರುವುದರಿಂದ ಅವುಗಳ ವ್ಯಾಲೆಟ್‌ನಲ್ಲಿ ಹಣ ಉಳಿಸಿ ಕೊಂಡವರು ಹಣಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಕೆಲವು ಆ್ಯಪ್‌ಗಳು ನಿರ್ದಿಷ್ಟ ಕಾಲಮಿತಿಯೊಳಗೆ ಹಣ ವಾಪಸ್‌ ನೀಡುವುದಾಗಿ ಸಂದೇಶ ರವಾನಿಸಿವೆ ಎನ್ನಲಾಗುತ್ತಿದೆ.

ತಾತ್ಕಾಲಿಕ ಸ್ಥಗಿತ
ಕರ್ನಾಟಕದ ಬಳಕೆದಾರರ ಭದ್ರತೆ ಮತ್ತು ಸುರಕ್ಷೆಯ ದೃಷ್ಟಿಯಿಂದ ತಾತ್ಕಾಲಿಕವಾಗಿ ಕಾರ್ಯನಿರ್ವಹಣೆಯನ್ನು ನಿಲ್ಲಿಸಿದ್ದೇವೆ ಎಂಬ ಸಂದೇಶವನ್ನು ತನ್ನ ಬಳಕೆ ದಾರರಿಗೆ ಡ್ರೀಮ್‌ ಇಲೆವೆನ್‌ ನೀಡಿದೆ. ಜತೆಗೆ, ನಿಮ್ಮ ಅಕೌಂಟ್‌ ಬ್ಯಾಲೆನ್ಸ್‌ ಸುರಕ್ಷಿತವಾಗಿದ್ದು, ಗೆದ್ದ ಹಣವನ್ನು ಹಿಂಪಡೆಯಲು ಬಯಸುವವರು ತಮ್ಮ ಖಾತೆಯನ್ನು ದೃಢೀಕರಿಸಿ, ಅ. 23ರೊಳಗೆ ಹಿಂಪಡೆಯುವ ಕೋರಿಕೆ ಸಲ್ಲಿಸಬಹುದು ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next